KSRTC: 2000 ನೂತನ ಸಿಬ್ಬಂದಿ ನೇಮಕಾತಿ, ಆದೇಶ ವಿತರಿಸಿದ ರಾಮಲಿಂಗಾ ರೆಡ್ಡಿ, ಹೇಳಿದ್ದೇನು?
ಬೆಂಗಳೂರು, ಜೂನ್ 17: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ವ್ಯಾಪ್ತಿಯಲ್ಲಿ ಎಂಟು ವರ್ಷಗಳ ಬಳಿಕ ಬೃಹತ್ ನೇಮಕಾತಿ ನಡೆದಿದೆ. ನೇಮಕಗೊಂಡ 2000 ಚಾಲಕ-ಕಂ- ನಿರ್ವಾಹಕ ಅಭ್ಯರ್ಥಿಗಳ ನೇಮಕಾತಿಯು ಪಾರದರ್ಶಕವಾಗಿ ಮಾಡಲಾಗಿದೆ. ಇದರಲ್ಲಿ ಮಾನವ ಹಸ್ತಕ್ಷೇಪವಿರುವುದಿಲ್ಲ. ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಆಯ್ಕೆಗೊಳಿಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಹೇಳಿದರು.
ಸಾರಿಗೆ ನಿಗಮ ವ್ಯಾಪ್ತಿಯಲ್ಲಿ ನಡೆದ ನೇಮಕಾತಿಯಲ್ಲಿ ಆಯ್ಕೆ ಆದ ನೂತನ ಚಾಲಕ ಕಂ -ನಿರ್ವಾಹಕರಿಗೆ ನಿಯೋಜನಾ ಆದೇಶ ವಿತರಣೆ ಸಮಾರಂಭದಲ್ಲಿ ಅವರು, ಆದೇಶ ಪತ್ರ ನೀಡಿ ಮಾತನಾಡಿದರು. ಸಚಿವರು ಹೊಸದಾಗಿ ಕೆಲಕ್ಕೆ ಸೇರಿಕೊಂಡ ಅಭ್ಯರ್ಥಿಗಳಿಗೆ ಶುಭಾಷಯ ತಿಳಿಸಿದರು.

ಹೊಸದಾಗಿ ನೇಮಕಗೊಂಡ ಸಿಬ್ಬಂದಿ ಸಂಸ್ಥೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸಬೇಕು. ಹಾಗೂ ಮಹಿಳಾ ಪ್ರಯಾಣಿಕರೊಂದಿಗೆ, ವಿದ್ಯಾರ್ಥಿಗಳೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ತಿಳಿಸಿದರು. ಅಪಘಾತವು ಸಂಭವಿಸಿದಂತೆ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಲು ಅವರು ಸೂಚಿಸಿದರು.
ನಿಗಮವು ಕರೋನಾ ನಂತರ ಹಲವು ಅಡತಡೆಗಳನ್ನು ಎದುರಿಸಿಕೊಂಡು ಆರ್ಥಿಕವಾಗಿ ಯಶಸ್ಸಿನ ಮಾರ್ಗವನ್ನು ನೋಡುತ್ತಿದೆ. ಹಲವಾರು ಕಾರ್ಮಿಕ ಸ್ನೇಹಿ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ. ನೌಕರರು ಹಾಗೂ ಅವರ ಅವಲಂಭಿತರಿಗೆ ಉಚಿತ ವೈದ್ಯಕೀಯ ಸೇವೆಯನ್ನು ಒದಗಿಸಲಾಗುತ್ತಿದೆ.
ನಾಲ್ಕು ಸಾರಿಗೆ ನಿಗಮಗಳಿಂದ ಸುಮಾರು 1000 ಕ್ಕೂ ಹೆಚ್ಚು ಮೃತರ ಅವಲಂಭಿತರಿಗೆ ನೌಕರಿಯನ್ನು ನೀಡಿದ್ದು, ಸುಮಾರು 9000 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಈಗಾಗಲೇ 7500 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯು ಪೂರ್ಣಗೊಂಡಿದೆ. ಅಪಘಾತದಿಂದ ಮೃತಪಟ್ಟ ಚಾಲನಾ ಸಿಬ್ಬಂದಿಗಳ ಕುಟುಂಬವನ್ನು ಆರ್ಥಿಕವಾಗಿ ಸಧೃಡಗೊಳಿಸುವ ಸಲುವಾಗಿ ರೂ.1 ಕೋಟಿ ವಿಮಾ ಯೋಜನೆ, ಸ್ವಾಭಾವಿಕವಾಗಿ ಮೃತಪಟ್ಟ ಚಾಲನಾ ಸಿಬ್ಬಂದಿಗಳ ಕುಟುಂಬಕ್ಕೆ ರೂ.10 ಲಕ್ಷಗಳ ಕಟುಂಬ ಕಲ್ಯಾಣ ಯೋಜನೆ ಅಡಿ ಪರಿಹಾರವನ್ನು ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.

KSRTC ಅಧ್ಯಕ್ಷರು ಆಗಿರುವ ಶಾಸಕ ಎಸ್.ಆರ್. ಶ್ರೀನಿವಾಸ್ (ವಾಸು) ಅವರು, ಕಳೆದ 08 ವರ್ಷಗಳಿಂದ ನೇಮಕಾತಿ ಪ್ರಕ್ರಿಯೆಯು ಸ್ಥಗಿತಗೊಂಡಿತ್ತು. ಸಾರಿಗೆ ಸಚಿವರು ಸರ್ಕಾರದೊಂದಿಗೆ ಚರ್ಚಿಸಿ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ.ಚಾಲನಾ ಸಿಬ್ಬಂದಿಗಳ ನೇಮಕಾತಿಯು ಸಂಪೂರ್ಣವಾಗಿ ಪಾರದರ್ಶಕವಾಗಿದೆ. ಅರ್ಹತೆಯ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ. ನಿಮ್ಮ ಆಯ್ಕೆಯಂತೆ ಘಟಕ ನಿಯೋಜನೆ ಮಾಡಲಾಗಿದೆ. ಜವಾಬ್ದಾರಿಯುತ ಹುದ್ದೆಗೆ ನೇಮಕವಾಗುತ್ತಿದ್ದು, ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿ ನಿಗಮವನ್ನು ಆರ್ಥಿಕವಾಗಿ ಸದೃಢಗೊಳಿಸಬೇಕೆಂದು ಹೇಳಿದರು.
ನಿಗದಮ್ಲಿ 2000 ಚಾಲಕ ಕಂ ನಿರ್ವಾಹಕರು ನೇಮಕ ಮಾಡಿಕೊಳ್ಳಲಾಗಿದೆ. ನೇಮಕಗೊಂಡ ಚಾಲನಾ ಸಿಬ್ಬಂದಿಗಳು ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು. ನಿಗಮದಲ್ಲಿ 8 ವರ್ಷಗಳ ಬಳಿಕ ನೇಮಕಾತಿ ನಡೆದಿದೆ ಎಂದು ಹೇಳಿದ ನಿಗಮದ ಉಪಾಧ್ಯಕ್ಷ ಮೊಹಮ್ಮದ್ ರಿಜ್ವಾನ್ ನವಾಬ್ ಅವರು, ನೂತನ ಸಿಬ್ಬಂದಿಗೆ ವಿಶ್ ಮಾಡಿದರು.
ನೇಮಕಾತಿ ಇತರ ಮಾಹಿತಿ
* KSRTC ನಿಗಮದಲ್ಲಿ 2020ನೇ ಸಾಲಿನಲ್ಲಿ ಚಾಲಕ-ಕಂ-ನಿರ್ವಾಹಕ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿಮಾಡಲು ಅಧಿಸೂಚನೆ ಹೊರಡಿಸಲಾಗಿತ್ತು.
* ಸದರಿ ನೇಮಕಾತಿ ಪ್ರಕ್ರಿಯೆಗಳು ಚಾಲನೆಯಲ್ಲಿದ್ದಾಗ ಕೋವಿಡ್-19 ರ ಹಿನ್ನಲೆಯಲ್ಲಿ ಸರ್ಕಾರದ ನಿರ್ದೇಶನದಂತೆ ನೇಮಕಾತಿ ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸಲಾಗಿತ್ತು.
* ರಾಜ್ಯ ಸರ್ಕಾರವು ದಿನಾಂಕ 13-10-2023 ರಂದು 300 ತಾಂತ್ರಿಕ ಸಹಾಯಕ ಹಾಗೂ 2000 ಚಾಲಕ-ಕಂ-ನಿರ್ವಾಹಕ ಹುದ್ದೆಗಳನ್ನು ಭರ್ತಿಮಾಡಲು ಅನುಮತಿ ನೀಡಿತು.
* ಆ ತಾಂತ್ರಿಕ ಸಹಾಯಕ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಆಯ್ಕೆಯಾದ ಅಭ್ಯರ್ಥಿಗಳನ್ನು ಜನವರಿ-2024 ರ ಮಾಹೆಯಲ್ಲಿ ವಿಭಾಗ /ಘಟಕಗಳಿಗೆ ಹಂಚಿಕೆ ಮಾಡಲಾಯಿತು.
* 2000 ಚಾಲಕ-ಕಂ-ನಿರ್ವಾಹಕ ಹುದ್ದೆಗಳಿಗೆ ಒಟ್ಟು 25,494 ಅರ್ಜಿಗಳು ಸ್ವೀಕೃತಗೊಂಡಿದ್ದವು.ದಾಖಲಾತಿ ಪರಿಶೀಲನೆಗೆ ಹಾಜರಾದ ಅಭ್ಯರ್ಥಿಗಳ ಪೈಕಿ13954 ಅಭ್ಯರ್ಥಿಗಳು ಚಾಲನಾ ವೃತ್ತಿ ಪರೀಕ್ಷೆ ಪಡೆಯಲು ಅರ್ಹರಾಗಿದ್ದರು.
* ಅಭ್ಯರ್ಥಿಗಳ ಅನುಕೂಲಕ್ಕಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಹುಮ್ನಾಬಾದ್ ಚಾಲನಾ ತರಬೇತಿ ಕೇಂದ್ರ ಮತ್ತು ಕರಾರಸಾ ನಿಗಮದ ಹಾಸನ ಚಾಲನಾ ತರಬೇತಿ ಕೇಂದ್ರಗಳಲ್ಲಿ ಪರೀಕ್ಷೆ ಪಡೆಯುಲು ಅವಕಾಶ ಕಲ್ಪಿಸಲಾಗಿತ್ತು. ಅದರಂತೆ 2672 ಅಭ್ಯರ್ಥಿಗಳು ಹುಮ್ನಾಬಾದ್ ಹಾಗೂ 11,282 ಅಭ್ಯರ್ಥಿಗಳು ಹಾಸನ ತರಬೇತಿ ಕೇಂದ್ರಗಳಲ್ಲಿ ಚಾಲನಾವೃತ್ತಿ ಪರೀಕ್ಷೆ ಪಡೆಯಲು ಆಯ್ಕೆ ಮಾಡಿಕೊಂಡಿದ್ದಾರೆ.
* ಚಾಲನಾ ವೃತ್ತಿ ಪರೀಕ್ಷೆಯು ಸಂಪೂರ್ಣ ಗಣಕೀಕೃತವಾಗಿದೆ. ಮೊದಲ ಬಾರಿಗೆ ಚಾಲನಾ ವೃತ್ತಿಪರೀಕ್ಷೆಗೆ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು.
* ಚಾಲನಾ ವೃತ್ತಿ ಪರೀಕ್ಷೆಯಲ್ಲಿ ಅರ್ಹಗೊಂಡ ಅಭ್ಯರ್ಥಿಗಳಲ್ಲಿ ಮೆರಿಟ್/ಮೀಸಲಾತಿ ಅನುಸಾರ 2000 ಹುದ್ದೆಗಳಿಗೆ ದಿನಾಂಕ:05-06-2025 ರಂದು ಸಂಭವನೀಯ ಆಯ್ಕೆಪಟ್ಟಿ ಪ್ರಕಟಿಸಿ, ಅಭ್ಯರ್ಥಿಗಳಿಂದ ಆಕ್ಷೇಪಣೆ ಸಲ್ಲಿಸಲು 7 ದಿನಗಳ ಕಾಲಾವಕಾಶ ನೀಡಲಾಗಿತ್ತು.
* ಇದೇ ತಿಂಗಳು ಜೂನ್ 12ರಂದು ಅಂತಿಮ ಆಯ್ಕೆ ಪಟ್ಟಿಯನ್ನು ನಿಗಮದ ಅಧಿಕೃತ ವೆಬ್-ಸೈಟ್ ನಲ್ಲಿ ಪ್ರಕಟಿಸಲಾಗಿದೆ.
* ಚಾಲಕ-ಕಂ-ನಿರ್ವಾಹಕ ಹುದ್ದೆಗೆ ಆಯ್ಕೆಗೊಂಡ ಅಭ್ಯರ್ಥಿಗಳನ್ನು ಜೇಷ್ಠತೆ/ಮೆರಿಟ್ ಆಧಾರದಲ್ಲಿ ಗಣಕೀಕೃತ ಕೌನ್ಸಿಲಿಂಗ ಮೂಲಕ ವಿಭಾಗ/ಘಟಕಗಳಿಗೆ ನೇರವಾಗಿ ನಿಯೋಜಿಸಲಾಗಿದೆ.
* ಈ ಸಂಬಂಧ ದಿನಾಂಕ 16-06-2025 ರಿಂದ 19-06-2025 ರವರೆಗೆ ಗಣಕೀಕೃತ ಕೌನ್ಸಿಲಿಂಗ್ ಪ್ರಕ್ರಿಯೆಯನ್ನು ನಡೆಸಲಾಗುತ್ತಿದೆ. ವಿಭಾಗ ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳು ದಿನಾಂಕ: 05-7-2025 ರೊಳಗಾಗಿ ಕರ್ತವ್ಯಕ್ಕೆ ಹಾಜರಾಗಲು ಅವಕಾಶ ಕಲ್ಪಿಸಲಾಗಿದೆ.
*16-06-2025 ರಂದು ಕೌನ್ಸಿಲಿಂಗ್ ನಲ್ಲಿ ವಿಭಾಗ ಆಯ್ಕೆಮಾಡಿಕೊಂಡ ಅಭ್ಯರ್ಥಿಗಳ ಪೈಕಿ 50/50 ಅಂಕಗಳಿಸಿರುವ ಅಭ್ಯರ್ಥಿಗಳಿಗೆ ದಿನಾಂಕ 17-06-2025 ರಂದು ಕೇಂದ್ರ ಕಚೇರಿಯಲ್ಲಿ ನಿಯೋಜನಾ ಆದೇಶ ವಿತರಣೆ ಮಾಡಲಾಯಿತು.
* ನಿಗಮದಲ್ಲಿ ಅನುಕಂಪದ ಆಧಾರದ ಮೇಲೆ ಕಳೆದ ಒಂದು ವರ್ಷದ ಅವಧಿಯಲ್ಲಿ 209 ಮೃತಾವಲಂಬಿತರಿಗೆ ನೌಕರಿ ನೀಡಲಾಗಿದೆ.
* ನಾಲ್ಕು ಸಾರಿಗೆ ನಿಗಮದಲ್ಲಿ 1,000 ಮೃತಾವಲಂಭಿತರಿಗೆ ನೇಮಕಾತಿ ನೀಡಲಾಗಿದೆ.
* ಒಟ್ಟಾರೆ ನಿಗಮದಲ್ಲಿ ಕಳೆದ ಒಂದುವರೆ ವರ್ಷದಲ್ಲಿ 2500 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ.












Click it and Unblock the Notifications