KSRTC Strike : ಸರ್ಕಾರದ ಭರವಸೆ ತಿರಸ್ಕಾರ: ಮಾರ್ಚ್ 21 ರಿಂದ ಕೆಎಸ್‌ಆರ್‌ಟಿಸಿ ಬಸ್ ನೌಕರರ ಅನಿರ್ದಿಷ್ಟಾವಧಿ ಮುಷ್ಕರ
ಸರ್ಕಾರ ಕೊಟ್ಟ ಕೊಟ್ಟ ಆಫರ್ ನ ತಿರಸ್ಕರಿಸಿದ ಸಾರಿಗೆ ನೌಕರರು ಮುಷ್ಕರವನ್ನ ನಡೆಸಲು ತಿರ್ಮಾನಿಸಿದ್ದಾರೆ.
ಬೆಂಗಳೂರು,ಮಾರ್ಚ್ 17: ವೇತನ ಪರಿಷ್ಕರಣೆ ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಾಲ್ಕು ಸಾರಿಗೆ ನಿಗಮಗಳ ನೌಕರರು ಮಾರ್ಚ್ 21ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ಕೊಟ್ಟಿದ್ದು,ಆದರೆ, ಸಾರಿಗೆ ನೌಕರರ ವೇತನವನ್ನು ಶೇ.15ರಷ್ಟು ಹೆಚ್ಚಳ ಮಾಡುವ ಮುಖ್ಯಮಂತ್ರಿಗಳ ಆಫರ್ ಅನ್ನ ಸಾರಿಗೆ ನೌಕರರು ತಿರಸ್ಕರಿಸಿದ್ದಾರೆ.
ನಮ್ಮ ಬೇಡಿಕೆಗಳನ್ನು ಈಡೇರಿಸದ ಹೊರತು ಅನಿರ್ದಿಷ್ಟಾವಧಿ ಮುಷ್ಕರ ಹಿಂಪಡೆಯುವ ಮಾತೇ ಇಲ್ಲ. ನಿಗದಿಯಂತೆ ಮಾರ್ಚ್ 21ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಯಲಿದೆ ಎಂದು ಕೆಎಸ್‌ಆರ್‌ಟಿಸಿ ನೌಕರರ ಸಂಘದ ಅಧ್ಯಕ್ಷ ಎಚ್.ವಿ.ಅನಂತ ಸುಬ್ಬರಾವ್ ಸ್ಪಷ್ಟಪಡಿಸಿದ್ದಾರೆ.

ಸಾರಿಗೆ ಸಂಘಟನೆಗಳ ಮುಖಂಡರೊಂದಿಗೆ ನಾಲ್ಕೂ ನಿಗಮಗಳ (ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಕಲ್ಯಾಣ ಕರ್ನಾಟಕ ಸಾರಿಗೆ, ವಾಯವ್ಯ ಕರ್ನಾಟಕ ಸಾರಿಗೆ) ವ್ಯವಸ್ಥಾಪಕ ನಿರ್ದೇಶಕರು ಬುಧವಾರ ಸಭೆ ನಡೆಸಿದ್ದರು. ಈ 14 ರಷ್ಟು ವೇತನ ಹೆಚ್ಚಳ ಮಾಡುವ ಬಗ್ಗೆ ಪ್ರಸ್ತಾಪಿಸಿದ್ದರು. ಇದಕ್ಕೆ ಸಂಘಟನೆಗಳ ಮುಖಂಡರು ಒಪ್ಪದಿದ್ದರಿಂದ ಸಂಧಾನ ವಿಫಲವಾಗಿತ್ತು.
ಇನ್ನೂ ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶೇ.15ರಷ್ಟು ವೇತನ ಹೆಚ್ಚಳ ಮಾಡುವುದಾಗಿ ಏಕಪಕ್ಷೀಯವಾಗಿ ನೀಡಿರುವ ಹೇಳಿಕೆಗೆ ಸಮ್ಮತವಿಲ್ಲ. ಸಾರಿಗೆ ನೌಕರರಿಗೆ ಶೇ.25ರಷ್ಟು ವೇತನ ಹೆಚ್ಚಳ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರೆದು ಮಾತನಾಡಿದರೆ ಸಮಸ್ಯೆ ಇತ್ಯರ್ಥ ಆಗುತ್ತದೆ. ಇಲ್ಲದಿದ್ದರೆ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಮೂಲ ವೇತನಕ್ಕೆ ಡಿ.ಎ. ವಿಲೀನಗೊಳಿಸಿ ಪರಿಷ್ಕೃತ ವೇತನ ನೀಡಬೇಕು. ಬಳಿಕ ಆ ಮೂಲ ವೇತನದಲ್ಲಿ ಶೇ 25ರಷ್ಟನ್ನು ಹೆಚ್ಚಳ ಮಾಡುವ ಒಪ್ಪಂದ ಆಗಬೇಕು, ವಜಾಗೊಂಡ ಸಿಬ್ಬಂದಿಯನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಬೇಕು. ಅವರ ವಿರುದ್ಧ ದಾಖಲಾಗಿರುವ ಕೇಸುಗಳನ್ನು ಹಿಂಪಡೆಯಬೇಕು. ಭತ್ಯೆ, ಬಾಟಾ ಹೆಚ್ಚಿಸಬೇಕು ಎಂದು ಹಲವು ಬೇಡಿಕೆಗಳ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಇವುಗಳ ಬಗ್ಗೆ ಯಾವುದೇ ಚರ್ಚೆ ಮಾಡದೆ ಸರ್ಕಾರ ಕೈಗೊಳ್ಳುವ ನಿರ್ಧಾರ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಸರ್ಕಾರದಿಂದ ಆದೇಶದ ಪ್ರತಿ ಬಂದ ನಂತರ ಅದರಲ್ಲಿ ಯಾವ ಅಂಶ ಇದೆ ಎಂಬುದನ್ನು ನೋಡಬೇಕಿದೆ. ಸದ್ಯಕ್ಕೆ ಯಾವುದೇ ಆದೇಶ ಬಾರದ ಹಿನ್ನೆಲೆಯಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಮುಷ್ಕರ ನಡೆಸುವ ನಮ್ಮ ನಿರ್ಧಾರದಲ್ಲಿ ಬದಲಾವಣೆ ಇಲ್ಲ. ರೂಪುರೇಷೆ ಸಿದ್ಧಪಡಿಸಲು ಶುಕ್ರವಾರ ಮಧ್ಯಾಹ್ನ ಸಿದ್ಧತಾ ಸಮಾವೇಶ ಕೂಡ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಸಾರಿಗೆ ನೌಕರರ ಬೇಡಿಕೆಗಳೇನು?
1. ಮೂಲ ವೇತನಕ್ಕೆ ಬಿ.ಡಿ.ಎ ವಿಲೀನಗೊಳಿಸಿ, ಮೂಲ ವೇತನವನ್ನು ಶೇ.25ರಷ್ಟು ಹೆಚ್ಚಿಸಬೇಕು.
2. ವೇತನ ಹೆಚ್ಚಳವು ಪರಿಷ್ಕೃತ ಮೂಲ ವೇತನದ ಶೇ.3ರಷ್ಟಿರಬೇಕು.
3. ಆಯ್ಕೆ ಶ್ರೇಣಿ ಹಾಗೂ ಉನ್ನತ ಶ್ರೇಣಿಗಳ ವೇತನ ಶ್ರೇಣಿಯನ್ನೂ ಮೇಲಿನಂತೆಯೇ ಸಿದ್ಧಪಡಿಸಬೇಕು. ವೇತನ ಬಡ್ತಿ ದರವು ಪರಿಷ್ಕೃತ ಮೂಲ ವೇತನದ ಶೇ 3ರಷ್ಟಿರಬೇಕು. ಆಯ್ಕೆ ಶ್ರೇಣಿ ಬಡ್ತಿಯನ್ನು ಸೇವಾವಧಿಯ ಪ್ರತಿ 10 ವರ್ಷಕ್ಕೆ ನೀಡಬೇಕು.

4. ಎಲ್ಲನೌಕರರಿಗೂ ಹಾಲಿ ಇರುವ ಬಾಟಾ, ಮಾಸಿಕ, ದೈನಂದಿನ (ಕ್ಯಾಷ್, ರಿಪಾಸ್ಟ್, ಬಟ್ಟೆ ತೊಳೆಯುವ, ರಾತ್ರಿ ಪಾಳಿ, ಪ್ರೋತ್ಸಾಹ ಭತ್ಯೆ) ಭತ್ಯೆಗಳನ್ನು ಐದು ಪಟ್ಟು ಜಾಸ್ತಿ ಮಾಡಬೇಕು.
5. ಹೊಲಿಗೆ ಭತ್ಯೆ, ಶೂ, ಜೆರ್ಸಿ, ರೈನ್ ಕೋಟ್‌ಗೆ ನೀಡುವ ಮೊತ್ತವನ್ನು ಮೂರು ಪಟ್ಟು ಹೆಚ್ಚಿಸಬೇಕು.
6. ಎಲ್ಲ ನಿರ್ವಾಹಕರಿಗೂ ಕ್ಯಾಷಿಯರ್‌ಗಳಿಗೆ ಸಮಾನವಾದ ನಗದು ಪ್ರೋತ್ಸಾಹಧನ ನೀಡಬೇಕು.
7. 2021ರ ಏಪ್ರಿಲ್‌ನಲ್ಲಿ ಮುಷ್ಕರ ನಡೆಸಿದ ಸಂದರ್ಭದಲ್ಲಿ ಸೇವೆಯಿಂದ ವಜಾಗೊಳಿಸಿದ ನೌಕರರನ್ನು ಷರತ್ತಿಲ್ಲದೆ ಮರು ನೇಮಕ ಮಾಡಬೇಕು.
8. ವರ್ಗಾವಣೆ ಶಿಕ್ಷೆಗೆ ಒಳಗಾದ ಸಿಬ್ಬಂದಿ, ನೌಕರರನ್ನು ಮೂಲ ಘಟಕಕ್ಕೆ ಮರು ನಿಯೋಜಿಸಬೇಕು.
9. ಮುಷ್ಕರದ ವೇಳೆ ಎಫ್‌ಐಆರ್ ದಾಖಲಿಸಿರುವ ನೌಕರರನ್ನು ಕೆಲಸಕ್ಕೆ ವಾಪಸ್ ತೆಗೆದುಕೊಳ್ಳಬೇಕು.
10. ಜಂಟಿ ಕ್ರಿಯಾ ಸಮಿತಿಯಿಂದ ಜ. 24ರಂದು ಸಲ್ಲಿಸಿರುವ ಬೇಡಿಕೆಗಳನ್ನು ಆಡಳಿತ ವರ್ಗದವರು ಚರ್ಚಿಸಿ, ವಿಳಂಬವಿಲ್ಲದೇ ಈಡೇರಿಸಬೇಕು.
11. ಕೈಗಾರಿಕಾ ವಿವಾದ ಕಾಯಿದೆ 1947ರ ಅನ್ವಯ ಜಂಟಿ ಕ್ರಿಯಾ ಸಮಿತಿಯ ಜತೆ ಕೈಗಾರಿಕಾ ಒಪ್ಪಂದ ಮಾಡಬೇಕು. ಇದು 2020ರ ಜ. 1 ರಿಂದ 2023ರ ಡಿ. 31ರವರೆಗೆ ಜಾರಿಯಲ್ಲಿರಬೇಕು.












Click it and Unblock the Notifications