KSRTC: ಕೆಎಸ್‌ಆರ್‌ಟಿಸಿ ಟಿಕೆಟ್ ಬುಕಿಂಗ್ ಇನ್ನೂ ಸುಲಭ: 'ಬೆಂಗಳೂರು-ಓನ್-ಕರ್ನಾಟಕ-ಓನ್' ಗೂ ವಿಸ್ತರಣೆ
ಬೆಂಗಳೂರು: ರಾಜ್ಯದ ಎಲ್ಲ ಕರ್ನಾಟಕ ರಾಜ್ಯ ರಸ್ತೆ, ಸಾರಿಗೆ ನಿಗಮ (KSRTC) ಪ್ರಯಾಣಿಕರಿಗೆ ಮಹತ್ವದ ಗುಡ್ ನ್ಯೂಸ್ ಸಿಕ್ಕಿದೆ. ಸಂಸ್ಥೆಯ ಅಧಿಕೃತ ವೆಬ್‌ಸೈಟ್ ಹಾಗೂ ಇತರ ಆನ್‌ಲೈನ್ ವೇದಿಕೆಗಳ ಮೂಲಕ ಬಸ್ ಬುಕ್ ಮಾಡುವ ವಿಧಾನಗಳ ಜೊತೆಗೆ ಇನ್ನು ಮುಂದೆ 'ಬೆಂಗಳೂರು-ಓನ್' ಮತ್ತು 'ಕರ್ನಾಟಕ-ಓನ್ ಕೇಂದ್ರ'ಗಳ ಮೂಲಕವೀ ಮುಂಗಡ ಟಿಕೆಟ್ ಕಾಯ್ದಿರಿಸುವುದನ್ನು ಸಾರಿಗೆ ಇಲಾಖೆ ಜಾರಿಗೊಳಿಸಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಪ್ರಯಾಣಿಕರ ಪ್ರಯಾಣವನ್ನು ಇನ್ನಷ್ಟು ಸುಲಭಗೊಳಿಸಿದೆ. ಆನ್‌ಲೈನ್ ಮುಂಗಡ ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆ ಇದೀಗ ಬೆಂಗಳೂರು-ಓನ್' ಮತ್ತು 'ಕರ್ನಾಟಕ-ಓನ್ ಕೇಂದ್ರ'ಗಳಿಗೆ ವಿಸ್ತರಣೆ ಮಾಡಿದೆ. ಇದು ಮುಖ್ಯವಾಗಿ ಆಂಡ್ರಾಯ್ಡ್ ಬಳಕೆ ಮಾಡದ ಅದೆಷ್ಟೋ ಪ್ರಯಾಣಿಕರು ಸೇರಿ ಎಲ್ಲರಿಗೂ ಸಹಕಾರಿಯಾಗಲಿದೆ.

ಕೆಎಸ್‌ಆರ್‌ಟಿಸಿ ವೆಬ್‌ಸೈಟ್, ಮೊಬೈಲ್ ಆಪ್, ಇಲಾಖಾ ಕೌಂಟರ್‌ಗಳು ಹಾಗೂ ಫ್ರಾಂಚೈಸಿ ಕೌಂಟರ್‌ಗಳ ಜೊತೆಗೆ, ಪ್ರಯಾಣಿಕರು ಈಗ ತಮ್ಮ ಮನೆಗೆ ಸಮೀಪದಲ್ಲಿರುವ ಬೆಂಗಳೂರು ಮತ್ತು ಕರ್ನಾಟಕ ಒನ್ ಕೇಂದ್ರಗಳ ಮೂಲಕವೂ ಮುಂಗಡ ಬಸ್ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಈ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ಡೆಲಿವರಿ ಆಫ್ ಸಿಟಿಜನ್ ಸರ್ವೀಸ್ ನಿರ್ದೇಶನಾಲಯ (EDCS) ರವರ ಬೆಂಗಳೂರು-ಓನ್ ಮತ್ತು ಕರ್ನಾಟಕ-ಓನ್ ಕೇಂದ್ರಗಳಲ್ಲಿ ಕಾರ್ಯಗತಗೊಳಿಸಲಾಗಿದೆ ಎಂದು ನಿಗಮದ ಅಧಿಕಾರಿಗಳು ಸೋಮವಾರ ಅಧಿಕೃತ ಮಾಹಿತಿ ನೀಡಿದ್ದಾರೆ.
161+ 1021 ಕೇಂದ್ರಗಳಲ್ಲಿ ಸೇವೆ ಲಭ್ಯ
ಈ ಸೇವೆ ಬೆಂಗಳೂರು ನಗರದಲ್ಲಿರುವ 161 ಬೆಂಗಳೂರು-ಓನ್ ಕೇಂದ್ರಗಳಲ್ಲಿ ಮತ್ತು ಕರ್ನಾಟಕ ರಾಜ್ಯದ ಜಿಲ್ಲಾ ಕೇಂದ್ರ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ 1021 ಕರ್ನಾಟಕ-ಒನ್ ಕೇಂದ್ರಗಳಲ್ಲಿ ಲಭ್ಯವಿದೆ. ಪ್ರಯಾಣಿಕರು ಈ ಮತ್ತು ಹತ್ತಿರದ ಟಿಕೆಟ್ ಬುಕ್ಕಿಂಗ್ ಸೇವೆಯನ್ನು ಬಳಸಲು ಸುಲಭವಾಗುವಂತೆ ಅವಕಾಶ ಕಲ್ಪಿಸಲಾಗಿದೆ.
ಟಿಕೆಟ್ ಕಾಯ್ದಿರಿಸುವಿಕೆ ಅಥವಾ ಯಾವುದೇ ಸಹಾಯಕ್ಕಾಗಿ, ಪ್ರಯಾಣಿಕರು ಕೆಎಸ್‌ಆರ್‌ಟಿಸಿ ಕರೆ ಕೇಂದ್ರವನ್ನು 080-26252625 (24x7) AWATAR 7760990034 / 7760990035 (7 ಗಂಟೆಯಿಂದ ರಾತ್ರಿ 10ಗಂಟೆವರೆಗೆ) ಅಥವಾ ಬೆಂಗಳೂರು-ಓನ್ ಕರೆ ಕೇಂದ್ರವನ್ನು 080-4920388 ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.
ಟಿಕೆಟ್ ದರದ ಮೇಲೆ ರಿಯಾಯಿತಿ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಈಗಾಗಲೇ ತಿಳಿಸಿದಂತೆ ತನ್ನ ಪ್ರತಿಷ್ಠಿತ ಸೇವೆಗಳ ಪ್ರಯಾಣದ ದರದಲ್ಲಿ ಶೇಕಡಾ 5-15ರವರೆಗೆ ರಿಯಾಯಿತಿ ಘೋಷಿಸಿದೆ. ಇದು ಸಾಮಾನ್ಯ ಸಾರಿಗೆ ಬಸ್ ಹೊರತುಪಡಿಸಿ 'ರಾಜಹಂಸ, ಐರಾವತ ಕ್ಲಬ್ ಕ್ಲಾಸ್ 2.0, ಪಲ್ಲಕ್ಕಿ, ಅಂಬಾರಿ ಉತ್ಸವ, ಅಂಬಾರಿ ಡ್ರೀಮ್ ಕ್ಲಾಸ್' ನಂತಹ ಪ್ರತಿಷ್ಠಿತ ಬಸ್‌ಗಳ ಟಿಕೆಟ್ ದರಕ್ಕೆ ಅನ್ವಯಿಸುತ್ತದೆ. ಈ ರಿಯಾಯಿತಿ ನಿಯಮವು ಇದೇ ಜನವರಿ 05ರಿಂದ ಜಾರಿಗೆ ಬಂದಿದೆ.
ಈ ಮೇಲಿನ ಬಸ್‌ಗಳು 'ಬೆಂಗಳೂರು, ಕುಂದಾಪುರ, ಉಡುಪಿ, ಮಂಗಳೂರು, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಪುತ್ತೂರು, ಗೋಕರ್ಣ, ಮಡಿಕೇರಿ, ಶಿವಮೊಗ್ಗ, ಚೆನ್ನೈ, ದಾವಣಗೆರೆ, ಮಂತ್ರಾಲಯ, ತಿರುಪತಿ, ವಿಜಯವಾಡ, ಪುಣೆ, ಮಂತ್ರಾಲಯ, ಮಧುರೈ, ಎರ್ನಾಕುಲಂ, ತ್ರಿಶೂರ್, ಕೊಯಿಮತ್ತೂರು, ಹೈದರಾಬಾದ್' ಮಾರ್ಗಗಳಲ್ಲಿ ಸಂಚರಿಸಲಿವೆ. ಆಯಾ ಮಾರ್ಗದಲ್ಲಿ ದೂರದ ಪ್ರಯಾಣ ಮಾಡುವವರಿಗೆ ಈ ರಿಯಾಯಿತಿಯಿಂದ ಸಾಕಷ್ಟು ಹಣ ಉಳಿತಾಯವಾಗಲಿದೆ ಎಂದು ಕೆಎಸ್ಆರ್‌ಟಿಸಿ ಪ್ರಕಟಣೆ ತಿಳಿಸಿದೆ.












Click it and Unblock the Notifications