ಸಾರಿಗೆ ಸಂಸ್ಥೆ ಬಸ್ ಹಾಗೂ ನಿಲ್ದಾಣಗಳಲ್ಲಿ ತಂಬಾಕು ಜಾಹೀರಾತು ಪೋಸ್ಟರ್ ತೆಗೆಯುವಂತೆ ಸಚಿವ ರಾಮಲಿಂಗಾರೆಡ್ಡಿ ಆದೇಶ
KSRTC Bus Advertisement: ರಾಜ್ಯದಲ್ಲಿ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ಡಬ್ಲ್ಯೂಕೆಆರ್‌ಟಿಸಿ, ಕೆಕೆಆರ್‌ಟಿಸಿ) ಬಸ್‌ಗಳ ಮೇಲೆ ಜಾಹೀರಾತುಗಳೇ ತುಂಬಿಹೋಗಿದ್ದವು. ಇದಕ್ಕೆ ವ್ಯಾಪಕ ಆಕ್ರೋಶಗಳು ವ್ಯಕ್ತವಾದ ಬೆನ್ನಲ್ಲೇ ಎಚ್ಚೆತ್ತ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಬಸ್‌ಗಳ ಮೇಲಿದ್ದ ಗುಟ್ಕಾ, ತಂಬಾಕು ಜಾಹೀರಾತು ಪೋಸ್ಟರ್ ತೆರವಿಗೆ ಆದೇಶ ಹೊರಡಿಸಿದ್ದಾರೆ.
ಸಾರ್ವಜನಿಕರ ಹಿತದೃಷ್ಟಿಯಿಂದ ಈ ಕೂಡಲೇ ಜಾರಿಗೆ ಬರುವಂತೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ, ಬಸ್ ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನಗಳ ಸೇವನೆಗೆ ಪ್ರಚೋದಿಸುವ ನೇರವಾದ ಅಥವಾ ಪರೋಕ್ಷವಾದ ಯಾವುದೇ ಜಾಹೀರಾತುಗಳನ್ನು ಇನ್ಮುಂದೆ ಪ್ರಚಾರ ಮಾಡದಂತೆ ಸೂಚಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ಮುಂದುವರೆದು, ಈಗಾಗಲೇ ತಂಬಾಕು ಉತ್ಪನ್ನಗಳ ಸೇವನೆಗೆ ಪ್ರಚೋದಿಸುವಂತಹ ಜಾಹೀರಾತುಗಳನ್ನು ಬಸ್‌ಗಳಲ್ಲಿ ಹಾಗೂ ಬಸ್ ನಿಲ್ದಾಣಗಳಲ್ಲಿ ಅಳವಡಿಸಿದ್ದರೆ, ಅದನ್ನು ತೆಗೆಯಬೇಕು. ಒಂದು ನಿರ್ಧಿಷ್ಟ ಸಮಯವನ್ನು ನಿಗದಿಪಡಿಸಿ, ಆ ನಿಗದಿತ ಸಮಯದೊಳಗೆ ಸದರಿ ಜಾಹೀರಾತುಗಳನ್ನು ತೆಗೆದುಹಾಕಿವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ತಂಬಾಕು ಉತ್ಪನ್ನಗಳ ಪ್ರಚಾರ: ಕಳೆದ ಕೆಲ ವರ್ಷಗಳಿಂದ, ವಿಶೇಷವಾಗಿ 2023ರಿಂದ 2026ರವರೆಗೆ, ಕರ್ನಾಟಕದ ಸರ್ಕಾರಿ ಬಸ್‌ಗಳ ಮೇಲೆ ಕಾಣಿಸಿಕೊಂಡ ಪಾನ್ ಮಸಾಲಾ ಮತ್ತು ಗುಟ್ಕಾ ಜಾಹೀರಾತುಗಳು ವ್ಯಾಪಕ ಚರ್ಚೆ ಮತ್ತು ವಿರೋಧಕ್ಕೆ ಕಾರಣವಾಗಿದ್ದವು. ಗುಟ್ಕಾ ನಿಷೇಧವಿದ್ದರೂ, ಪಾನ್ ಮಸಾಲಾ ಹೆಸರಿನಲ್ಲಿ ಜಾಹೀರಾತು ಮಾಡುವ ಮೂಲಕ ತಂಬಾಕು ಉತ್ಪನ್ನಗಳನ್ನು ಪ್ರಚಾರ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದವು.
ಯುವಕರ ಆಕ್ರೋಶ: ಈ ಜಾಹೀರಾತುಗಳ ವಿರುದ್ಧ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಬಸ್‌ಗಳಲ್ಲಿ ತಂಬಾಕು ಬಳಕೆಗೆ ದಂಡ ವಿಧಿಸುವ ಸಾರಿಗೆ ಸಂಸ್ಥೆಗಳೇ ಇಂತಹ ಜಾಹೀರಾತುಗಳಿಗೆ ಅವಕಾಶ ನೀಡಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿತ್ತು. ಕೆಲ ಪ್ರದೇಶಗಳಲ್ಲಿ ಯುವಕರು ಬಸ್‌ಗಳ ಮೇಲಿನ ಜಾಹೀರಾತು ಬ್ಯಾನರ್‌ಗಳನ್ನು ಹರಿದು ಹಾಕಿದ ಘಟನೆಗಳ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.
ಇನ್ನೂ ಇದೀಗ ಸಾರಿಗೆ ಸಚಿವರ ಈ ಕ್ರಮವನ್ನು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಮಹತ್ವದ ನಿರ್ಧಾರ ಎಂದು ಹಲವರು ಸ್ವಾಗತಿಸಿದ್ದಾರೆ. ಯುವಕರನ್ನು ತಪ್ಪು ದಾರಿಗೆ ಒಯ್ಯುವ ತಂಬಾಕು ಜಾಹೀರಾತುಗಳಿಗೆ ಕಡಿವಾಣ ಬೀಳಬೇಕು ಎಂಬ ಬಹುಕಾಲದ ಬೇಡಿಕೆ ಈ ಆದೇಶದೊಂದಿಗೆ ಈಡೇರಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಸರ್ಕಾರಿ ಬಸ್‌ಗಳು ಹಾಗೂ ಬಸ್ ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನಗಳ ಜಾಹೀರಾತು ಪ್ರದರ್ಶನದ ವಿರುದ್ಧ ರಾಜ್ಯದಾದ್ಯಂತ ಸಾರ್ವಜನಿಕ ಆಕ್ರೋಶ ವ್ಯಕ್ತವಾಗುತ್ತಲಿದೆ. ಪಾನ್ ಮಸಾಲಾ, ಗುಟ್ಕಾ ಸೇರಿದಂತೆ ತಂಬಾಕು ಸೇವನೆಗೆ ಪರೋಕ್ಷವಾಗಿ ಪ್ರಚೋದಿಸುವ ಜಾಹೀರಾತುಗಳು ಸಾರ್ವಜನಿಕ ಸಾರಿಗೆಯಲ್ಲಿ ಕಾಣಿಸಿಕೊಂಡಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಗುಟ್ಕಾ ನಿಷೇಧವಿದ್ದರೂ, ಇತರೆ ಹೆಸರಿನಲ್ಲಿ ಉತ್ಪನ್ನಗಳನ್ನು ಪ್ರಚಾರ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.
ಈ ಜಾಹೀರಾತುಗಳು ಸಾರ್ವಜನಿಕ ಆರೋಗ್ಯಕ್ಕೆ ಧಕ್ಕೆಯಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ತೀವ್ರವಾಗಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಯುವಕರ ಮೇಲೆ ಇವು ದುಷ್ಪರಿಣಾಮ ಬೀರುತ್ತಿವೆ ಎಂದು ನಾಗರಿಕ ಸಂಘಟನೆಗಳು ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ಕೆಲ ಭಾಗಗಳಲ್ಲಿ ಯುವಕರು ಬಸ್‌ಗಳ ಮೇಲಿನ ಜಾಹೀರಾತು ಬ್ಯಾನರ್‌ಗಳನ್ನು ಹರಿದು ಹಾಕಿದ ದೃಶ್ಯಗಳು ವೈರಲ್ ಆಗಿದ್ದು, ವಿಷಯ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ. ತಂಬಾಕು ಉತ್ಪನ್ನಗಳ ಪ್ರಚಾರಕ್ಕೆ ತಕ್ಷಣವೇ ಕಡಿವಾಣ ಹಾಕಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿತ್ತು. ಇದರ ಬೆನ್ನಲ್ಲೇ ಸಾರಿಗೆ ಇಲಾಖೆ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ.












Click it and Unblock the Notifications