ಕೆಎಸ್ಆರ್‌ಟಿಸಿ, ಬಿಎಂಟಿಸಿ ನಷ್ಟ, ಕುಮಾರಸ್ವಾಮಿ ಪ್ರಶ್ನೆಗಳು
ಬೆಂಗಳೂರು, ಜ.9 : ಕೆಎಸ್ಆರ್‌ಟಿಸಿ ಮತ್ತು ಬಿಎಂಟಿಸಿ ಸಂಸ್ಥೆಗಳು ನಷ್ಟದಲ್ಲಿರುವ ಕುರಿತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸರ್ಕಾರಕ್ಕೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಹಿಂದೆ ರಾಜ್ಯದಲ್ಲಿ ಅಧಿಕಾರ ನಡೆಸಿದ ಬಿಜೆಪಿ ಸರ್ಕಾರ ಸಹ ಸಾರಿಗೆ ಸಂಸ್ಥೆಗಳ ನಷ್ಟಕ್ಕೆ ಜವಾಬ್ದಾರಿಯಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಸಂಸ್ಥೆಗಳು 2 ಸಾವಿರ ಕೋಟಿ ರೂ. ನಷ್ಟ ಅನುಭವಿಸುತ್ತಿದ್ದು, ಇದಕ್ಕೆ ಕಾರಣವಾಗಿರುವ ಅಂಶಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿಯನ್ನು ಜನರ ಮುಂದಿಡಬೇಕು ಎಂದು ಒತ್ತಾಯಿಸಿದರು.

ಲಾಭದಲ್ಲಿ ನಡೆಯುತ್ತಿದ್ದ ಸಾರಿಗೆ ಸಂಸ್ಥೆಗಳು ಪ್ರಸ್ತುತ ಏಕಾಏಕಿ ನಷ್ಟ ಅನುಭವಿಸುತ್ತಿವೆ. ಇದಕ್ಕೆ ಕಾರಣವೇನು? ಎಂದು ಸಮಗ್ರ ತನಿಖೆ ನಡೆಸಬೇಕು. ಸಿಐಡಿ, ಲೋಕಾಯುಕ್ತ ಅಥವಾ ಸದನ ಸಮಿತಿಗೆ ಬದಲಾಗಿ ಒಂದು ವಿಶೇಷ ತನಿಖಾ ತಂಡ ರಚಿಸಿ ತನಿಖೆ ನಡೆಸಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದರು. [ಸಾರಿಗೆ ಸಂಸ್ಥೆಗಳ ನಷ್ಟದ ಲೆಕ್ಕ ಇಲ್ಲಿದೆ]
ಕುಮಾರಸ್ವಾಮಿ ಪ್ರಶ್ನೆಗಳು
* ಅನೇಕ ಬಾರಿ ಬಸ್ ದರ ಏರಿಕೆಯಾದರೂ ಕಡಿತಗೊಳಿಸುವಾಗ ಮಾತ್ರ 1 ರಿಂದ 2ರಷ್ಟು ಇಳಿಕೆ ಮಾಡಿರುವುದು ಏಕೆ?. ಈ ಬಸ್ ದರ ಇಳಿಕೆಯಿಂದ ಜನರಿಗೆ ಯಾವುದೇ ಉಪಯೋಗವಾಗಿಲ್ಲ ಎಂದರು. ಬಿಎಂಟಿಸಿ 800 ರಿಂದ 900 ಕೋಟಿ ರೂ.ಗಳಷ್ಟು ಸಾಲದ ಸುಳಿಗೆ ಸಿಲುಕಿದೆ. ಇದೇ ರೀತಿ ಮುಂದುವರಿದರೆ ಸಂಸ್ಥೆ ಹರಾಜಿಗೆ ಬರುತ್ತದೆ.
* ಬಿಜೆಪಿಯವರಿಗೆ ಸಾರಿಗೆ ಸಂಸ್ಥೆ ನಷ್ಟದ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ. ನಷ್ಟಕ್ಕೆ ಬಿಜೆಪಿಯವರು ಕಾರಣ. ಮಾರ್ಕೊಪೋಲೋ ಬಸ್ಸುಗಳನ್ನು ಖರೀದಿಸಿದ್ದರಿಂದ ನಷ್ಟ ಉಂಟಾಗಿದೆ. ಇದರ ಹೊರೆಯನ್ನು ಜನರ ಮೇಲೆ ಹಾಕಲಾಗುತ್ತಿದೆ. [ಬಸ್ ದರ ಕಡಿತ : ಯಾವ ನಗರಗಳಿಗೆ ಎಷ್ಟು ರೂ.]
* ನನ್ನ ಅಧಿಕಾರಾವಧಿಯಲ್ಲಿ ವಾಯುವ್ಯ ಸಾರಿಗೆಯಲ್ಲಿ 70 ಕೋಟಿ ರೂ. ಹಾಗೂ ಈಶಾನ್ಯ ಸಾರಿಗೆ ಸಂಸ್ಥೆಯಲ್ಲಿ 40 ಕೋಟಿ ರೂ. ನಷ್ಟ ಬಿಟ್ಟರೆ ಬಿಎಂಟಿಸಿಯಿಂದ 300 ಕೋಟಿ ರೂ.ಗಳನ್ನು ಎಫ್‌ಡಿ ಮಾಡಲಾಗಿತ್ತು. ಆದರೆ, ಬಿಜೆಪಿ ಸರ್ಕಾರ ಬಂದ ಮೇಲೆ ಸಂಸ್ಥೆಗೆ ನಷ್ಟ ಉಂಟಾಗಿದ್ದು ಹೇಗೆ?
* ಬೆಂಗಳೂರು ನಗರದಲ್ಲಿ 10 ಟಿಟಿಎಂಸಿ ನಿರ್ಮಾಣ ಮಾಡಲು ನಮ್ಮ ಸರ್ಕಾರದ ಅವಧಿಯಲ್ಲಿ 430 ಕೋಟಿಯನ್ನು ಮೀಸಲಿಡಲಾಗಿತ್ತು. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಇದನ್ನು 750 ಕೋಟಿಗೆ ಏರಿಸಿದ್ದು ಏಕೆ?.












Click it and Unblock the Notifications