ಶಾಲಾ ಮಕ್ಕಳಿಗೆ ಹೊಸ ವರ್ಷದ ಕೊಡುಗೆ ನೀಡಿದ ಸಿಎಂ
ಬೆಂಗಳೂರು, ಡಿ.3 : ಶಾಲಾ ಮಕ್ಕಳಿಗೆ ಹೊಸ ವರ್ಷದ ಕೊಡುಗೆ ನೀಡಲು ಸರ್ಕಾರ ಸಿದ್ಧತೆ ನಡೆಸಿದ್ದು, ಕ್ಷೀರಭಾಗ್ಯ ಯೋಜನೆಯನ್ನು ಐದು ದಿನಗಳಿಗೆ ವಿಸ್ತರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಂಗಳವಾರ ತಮ್ಮ ಸ್ವ ಕ್ಷೇತ್ರದ ವರುಣಾದಲ್ಲಿ ಮಾತನಾಡಿದ ಸಿಎಂ, ಸದ್ಯ ಕ್ಷೀರಭಾಗ್ಯ ಯೋಜನೆಯಡಿ 8 ಲಕ್ಷ ಲೀಟರ್ ಹಾಲನ್ನು ಮಕ್ಕಳಿಗೆ ವಿತರಣೆ ಮಾಡಲಾಗುತ್ತಿದೆ. ಸೋಮವಾರ, ಮಂಗಳವಾರ ಮತ್ತು ಶುಕ್ರವಾರ ಹಾಲನ್ನು ನೀಡಲಾಗುತ್ತಿದೆ ಎಂದರು.

ವಾರದಲ್ಲಿ ಐದು ದಿನ ಕ್ಷೀರಭಾಗ್ಯ ಯೋಜನೆಯಡಿ 1ರಿಂದ ಹತ್ತನೇ ತರಗತಿ ಮತ್ತು ಅಂಗನವಾಡಿ ಮಕ್ಕಳಿಗೆ ಹಾಲು ನೀಡಲು ಸರ್ಕಾರ ನಿರ್ಧರಿಸಿದೆ. 2015ರಿಂದ ಈ ಯೋಜನೆ ಜಾರಿಗೆ ಬರಲಿದೆ ಎಂದು ಸಿಎಂ ಹೇಳಿದರು.[ಕ್ಷೀರಭಾಗ್ಯ ಯೋಜನೆ ಬಗ್ಗೆ ತಿಳಿಯಿರಿ]
ಮಕ್ಕಳ ಬೆಳವಣಿಗೆಯಲ್ಲಿ ಪೋಷಕಾಂಶಗಳ ಪಾತ್ರ ಮಹತ್ವದ್ದಾಗಿದೆ. ವಾರದಲ್ಲಿ ಐದು ದಿನ ಮಕ್ಕಳಿಗೆ ಶಾಲೆಯಲ್ಲಿ ಹಾಲು ನೀಡುವುದರಿಂದ ಮಕ್ಕಳಿಗೆ ಹೆಚ್ಚಿನ ಪೋಷಕಾಂಶಗಳು ದೊರೆಯುತ್ತವೆ, ಸರ್ಕಾರ ಕ್ಷೀರಭಾಗ್ಯ ಯೋಜನೆಗೆ ವಾರ್ಷಿಕವಾಗಿ 4, 800 ಕೋಟಿ ವೆಚ್ಚ ಮಾಡುತ್ತಿದೆ ಎಂದು ತಿಳಿಸಿದರು. [ಸಿಎಂ ಓದಿದಿ ಶಾಲೆಯಲ್ಲಿ ಬಿಸಿಯೂಟ ಸಮಸ್ಯೆ]
ಸರ್ಕಾರ ಹಾಲು ಉತ್ಪಾದಕರಿಗೆ ನೀಡುತ್ತಿದ್ದ ಪ್ರೋತ್ಸಾಹ ಧನವನ್ನು 4 ರೂ.ಗಳಿಗೆ ಹೆಚ್ಚಿಸಿದೆ. ಪ್ರತಿದಿನ ರಾಜ್ಯದಲ್ಲಿ ಮೊದಲು 35 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿತ್ತು. ಸದ್ಯ 63 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ ಎಂದು ಸಿಎಂ ಮಾಹಿತಿ ನೀಡಿದರು.
ಕ್ಷೀರಭಾಗ್ಯ ಯೋಜನೆ ಬಗ್ಗೆ ಒಂದಿಷ್ಟು : ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ ಮಹತ್ವಾಕಾಂಕ್ಷೆಯ ಯೋಜನೆ ಕ್ಷೀರಭಾಗ್ಯ. ಈ ಯೋಜನೆಯಡಿ 64 ಸಾವಿರ ಅಂಗನವಾಡಿ, 51 ಸಾವಿರ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಸೇರಿ ಒಟ್ಟು 1 ಕೋಟಿಗೂ ಹೆಚ್ಚು ಮಕ್ಕಳಿಗೆ ವಾರದಲ್ಲಿ ಮೂರು ದಿನ ಹಾಲು ನೀಡಲಾಗುತ್ತದೆ.
ಹಾಲಿನ ಬದಲು ಪುಡಿ : ಹಾಲಿನಲ್ಲಿ ಕಲಬೆರೆಕೆ ಆಗಿ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಉಂಟಾಗಬಾರದು ಎಂದು ಸರ್ಕಾರ, ಕಚ್ಚಾ ಹಾಲು ಪೂರೈಸುವ ಬದಲು ಪೋಷಕಾಂಶಗಳನ್ನು ಹೊಂದಿರುವ ಪರಿಶುದ್ಧ ನಂದಿನಿ ಹಾಲಿನ ಪುಡಿಯನ್ನು ಸರಬರಾಜು ಮಾಡಲಿದೆ.












Click it and Unblock the Notifications