ಆರ್‌ಎಸ್‌ಎಸ್ ಬ್ಯಾನ್ ಮಾಡಲು ಪ್ರಿಯಾಂಕ್ ಖರ್ಗೆ ಇನ್ನು ಬಚ್ಚಾ: ಕೆಎಸ್ ಈಶ್ವರಪ್ಪ
ಕಲಬುರಗಿ, ಮೇ 30: ಆರ್‌ಎಸ್‌ಎಸ್ ಹಾಗೂ ಬಜರಂಗ ದಳವನ್ನು ನಿಷೇಧದ ಬಗ್ಗೆ ಮಾತನಾಡಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಯನ್ನು ಖಂಡಿಸಿರುವ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ ಅವನಿನ್ನು ಬಚ್ಚಾ ಎಂದು ಹೇಳಿದ್ದಾರೆ.
ಆರ್‌ಎಸ್‌ಎಸ್ ದೇಶಭಕ್ತರ ಸಂಘಟನೆಯಾಗಿದೆ. ಅದು ಯಾವುದೇ ಸಮಾಜಘಾತುಕ ಚಟುವಟಿಕೆಗಳಲ್ಲಿ ಭಾಗವಹಿಸಿಲ್ಲ. ಆದರೂ ಆರ್‌ಎಸ್‌ಎಸ್ ನಿಷೇಧಿಸುವುದಾಗಿ ಹೇಳುತ್ತಿರುವ ಪ್ರಿಯಾಂಕ್ ಖರ್ಗೆ ಇನ್ನೂ ಬಚ್ಚಾ. ಅವನೇನು ಮಾಡಲು ಸಾಧ್ಯ ಎಂದು ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಆರ್‌ಎಸ್‌ಎಸ್ ನಿಷೇಧ ಮಾಡುವುದಿಲ್ಲ ಎಂದು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿ ಮುಗಿಸಿದ್ದಾರೆ. ಅವರ ಹೇಳಿಕೆಯ ಬಳಿಕವೂ ಸಚಿವ ಪ್ರಿಯಾಂಕ್ ಖರ್ಗೆ ಪದೇ ಪದೇ ನಿಷೇಧ ಮಾಡುತ್ತೇವೆ ಎಂದು ಹೇಳುತ್ತಿರುವುದು ಸರಿಯಲ್ಲ. ಆರ್‌ಎಸ್‌ಎಸ್ ದೇಶದ್ರೋಹಿಗಳಿಗೆ ಸಿಂಹ ಸ್ವಪ್ನವಾಗಿದೆ. ಹಾಗಾಗಿಯೇ ದೇಶದಾದ್ಯಂತ ಕೋಟ್ಯಂತರ ಕಾರ್ಯಕರ್ತರನ್ನು ಹೊಂದಿದೆ. ಇಲ್ಲಿ ಸಂಘವನ್ನು ನಿಷೇಧಿಸುತ್ತೇವೆ ಎಂದು ಹೇಳುವ ಮೂಲಕ ಪ್ರಿಯಾಂಕ್ ಅನಗತ್ಯ ವಿವಾದ ಸೃಷ್ಟಿಸುತ್ತಿದ್ದಾರೆ ಎಂದರು.
ಸಚಿವ ಪ್ರಿಯಾಂಕ್ ಖರ್ಗೆ ಅವರ ತಂದೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯದಲ್ಲಿ ಮಾದರಿಯಾಗಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಸ್ಥಾನದಲ್ಲಿದ್ದು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಅವರೇ ಇಂತಹ ಮಾತನಾಡಿಲ್ಲ. ಅಲ್ಲದೆ ಸಿಎಂ ಸಿದ್ದರಾಮಯ್ಯ ಅವರೂ ಹೇಳಿದ ನಂತರವೂ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ. ಪ್ರಿಯಾಂಕ್ ಖರ್ಗೆ ಅವರ ತಂದೆಯವರ ಸಲಹೆ ಮಾರ್ಗದರ್ಶನ ಪಡೆದುಕೊಂಡು ಸಚಿವ ಸ್ಥಾನ ನಿರ್ವಹಿಸಲಿ, ರಾಜಕಾರಣದಲ್ಲಿ ಮುನ್ನಡೆಯಲಿ ಎಂದು ಈಶ್ವರಪ್ಪ ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನವೇ ಐದೂ ಗ್ಯಾರಂಟಿಗಳ ಅನುಷ್ಠಾನಕ್ಕೆ ಸೂಚನೆ ನೀಡಲಾಗುವುದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಹೇಳಿದ್ದರು. ಇದೀಗ ಎರಡು ಕ್ಯಾಬಿನೆಟ್ ಸಭೆಗಳಾದರೂ ಗ್ಯಾರಂಟಿಗಳಿಗೆ ಅನುಮೋದನೆಯೂ ಸಿಕ್ಕಿಲ್ಲ. ನಾವು ಸುಖಾಸುಮ್ಮನೆ ಎಲ್ಲವನ್ನೂ ಟೀಕಿಸುವುದಿಲ್ಲ. ಒಂದು ತಿಂಗಳು ಕಾಯ್ದು ನೋಡುತ್ತೇವೆ. ಆಗಲೂ ಜಾರಿಯಾಗದಿದ್ದರೆ ಪ್ರತಿಭಟನೆ ನಡೆಸುತ್ತೇವೆ ಎಂದು ಈಶ್ವರಪ್ಪ ತಿಳಿಸಿದರು.












Click it and Unblock the Notifications