‘ಸುಳ್ಳಿಗೆ ನೋಬೆಲ್ ಪ್ರಶಸ್ತಿ ಕೊಡುವುದಿದ್ದರೆ ಸಿದ್ದರಾಮಯ್ಯ ಅವರಿಗೆ ಕೊಡಬೇಕು’ ಈಶ್ವರಪ್ಪ
ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹಾಗೂ ಹಾಲಿ ಸಿಎಂ ಸಿದ್ದರಾಮಯ್ಯ ಅವರ ಮಧ್ಯೆ ಆಗಾಗ ಸಿಕ್ಕಾಪಟ್ಟೆ ತಿಕ್ಕಾಟ ನಡೆಯುತ್ತಿತ್ತು. ಅದರಲ್ಲೂ ಸಿದ್ದರಾಮಯ್ಯ ಅವರ ವಿರುದ್ಧ, ಕೆ.ಎಸ್. ಈಶ್ವರಪ್ಪ ಗಂಭೀರ ಹೇಳಿಕೆ ನೀಡಿ ಸದಾ ಸುದ್ದಿಯಲ್ಲಿ ಇರುತ್ತಿದ್ದರು. ಆದರೆ ಕೆಲ ತಿಂಗಳ ಹಿಂದೆ ಸಕ್ರಿಯ ರಾಜಕಾರಣದಿಂದ ಹಿಂದೆ ಸರಿದ ಕೆ.ಎಸ್. ಈಶ್ವರಪ್ಪ ಅವರು ಇದೀಗ, ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತೆ ಆಕ್ರೋಶ ಹೊರಹಾಕಿದ್ದಾರೆ.
ಹುಬ್ಬಳ್ಳಿಯಲ್ಲಿ ಇಂದು ಮಾತನಾಡಿರುವ ಕೆ.ಎಸ್. ಈಶ್ವರಪ್ಪ 'ದಲಿತರು, ಹಿಂದುಳಿದವರ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆ. ಸುಳ್ಳಿಗೆ ನೋಬೆಲ್ ಪ್ರಶಸ್ತಿ ಕೊಡುವುದಿದ್ದರೆ ಇವರಿಗೆ ಕೊಡಬೇಕು. ಹಿಂದುಳಿದ ವರ್ಗ ಹಾಗೂ ದಲಿತರ ಕುರಿತಾಗಿ ಕಾಳಜಿ ಇದ್ದಿದ್ದರೆ ಜಾತಿ ಗಣತಿ ಬಿಡುಗಡೆ ಮಾಡಬೇಕಿತ್ತು. ಆ ವರದಿ ಬಿಡುಗಡೆ ಆಗಬೇಕು ಎಂಬುದು ಪಕ್ಷದ ನಿಲುವಾಗಿದೆ' ಎಂದಿದ್ದಾರೆ ಕರ್ನಾಟಕದ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ. ಈ ಮಧ್ಯೆ ಬಿಜೆಪಿ ಆಂತರಿಕ ಕಿತ್ತಾಟದ ಬಗ್ಗೆಯೂ ಈಶ್ವರಪ್ಪ ಮಾತನಾಡಿದ್ದಾರೆ.

ಕೇಂದ್ರ ನಾಯಕರ ಬಗ್ಗೆ ಹೇಳಿಕೆ
ರಾಜ್ಯ ಬಿಜೆಪಿ ಬಗ್ಗೆ ಕೇಂದ್ರ ನಾಯಕರಿಗೆ ಬೇಸರ ಇದೆ ನಿಜ. ಯಾಕೆ ಬೇಸರ ಎಂದು ಕೇಳುತ್ತೇವೆ. ಕೇಂದ್ರ ನಿಯಂತ್ರಣವಿಲ್ಲ ಎಂಬುವುದು ಸುಳ್ಳು, ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ಕೇಂದ್ರದ ನಾಯಕರಿಗೆ ರಾಜ್ಯದ ನಾಯಕರು ಹೆದರುತ್ತಾರೆ ಅನ್ನೋದೆಲ್ಲವು ಕೂಡ ಸುಳ್ಳು. ರಾಜ್ಯದಲ್ಲಿ ಸಂಘಟಿತವಾದ ಪಕ್ಷ ನಮ್ಮದು ಎಂದು ಇದೇ ವೇಳೆ ಕೆ.ಎಸ್. ಈಶ್ವರಪ್ಪ ಅವರು ಹೇಳಿದರು.
ಒಂದಿಬ್ಬರ ಅಸಮಧಾನ ಅಷ್ಟೇ
ಹಾಗೇ ಪಕ್ಷದಲ್ಲಿ ಒಂದಿಬ್ಬರು ವೈಯಕ್ತಿಕ ಅಸಮಧಾನ ವ್ಯಕ್ತಪಡಿಸಿದರೆ ಇಡೀ ಪಕ್ಷದಲ್ಲೇ ಶಿಸ್ತು ಇಲ್ಲ ಅಂತಲ್ಲ. ಒಂದು ಕೋಟಿ ಸದಸ್ಯರು ಇರುವ ಪಕ್ಷದಲ್ಲಿ ಒಂದಿಬ್ಬರು ಅಸಮಧಾನವನ್ನು ವ್ಯಕ್ತಪಡಿಸಿದ್ದಾರೆ. ಪಕ್ಷದ ಹಿರಿಯ ನಾಯಕರು ಕರೆದು ಮಾತನಾಡುತ್ತಾರೆ. ಹೀಗಾಗಿ ಎಲ್ಲವೂ ಸರಿಯಾಗುತ್ತೆ. ಕೆಲವರ ವೈಯಕ್ತಿಕ ಹೇಳಿಕೆಗಳಿಗೆ ಪಕ್ಷವು ಬೆಂಬಲ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು. ಇದೇ ಸಮಯದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ವಿಚಾರ ಕೂಡ ಪ್ರಸ್ತಾಪ ಆಗಿತ್ತು.

ಜಗದೀಶ್ ಶೆಟ್ಟರ್ ವಾಪಸ್ ಬರ್ತಾರಾ?
ಹಾಗೆ ತಮ್ಮ ಮಾತನ್ನು ಮುಂದುವರಿಸಿದ ಕೆ.ಎಸ್. ಈಶ್ವರಪ್ಪ, ಬಿಜೆಪಿ ಒಂದು ಕುಟುಂಬ. ಯಾವುದೋ ಕಾರಣಕ್ಕೆ ಜಗದೀಶ ಶೆಟ್ಟರ್ ಹೊರಗೆ ಹೋಗಿದ್ದಾರೆ. ಅವರ ಜೊತೆಯಲ್ಲಿ ನಾನು ಮಾತನಾಡುವೆ. ನನ್ನ ಆತ್ಮೀಯ ಸ್ನೇಹಿತರು ಅವರು. ನಾನು ಮಾತನಾಡುತ್ತೇನೆ, ಬಂದರೂ ಬರಬಹುದು. ಇದು ನನ್ನ ವೈಯಕ್ತಿಕ ಅಭಿಪ್ರಾಯ ಎನ್ನುತ್ತಿದ್ದಂತೆಯೇ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ಅವರು, ಅವರಾಗಿ ಬಂದರೂ ಕರೆದುಕೊಳ್ಳಲ್ಲ ಎಂದರು.












Click it and Unblock the Notifications