KRS Dam: ವ್ಯಾಪಕ ಮಳೆ; ಕೆಆರ್‌ಎಸ್ ಜಲಾಶಯದ ಒಳಹರಿವು ಹೆಚ್ಚಳ
ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು ಜನರಿಗೆ ಸಮಾಧಾನ ತಂದಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಕೆರೆ ಕಟ್ಟೆಗಳಿಗೆ ಕೂಡ ಅಲ್ಪ ಸ್ವಲ್ಪ ನೀರು ಬಂದಿದೆ. ಇನ್ನು ನದಿಗಳು ಕೂಡ ಮೈದುಂಬಿಕೊಳ್ಳುತ್ತಿದ್ದು, ಜಲಾಶಯಗಳಿಗೆ ಕೂಡ ಒಳಹರಿವು ನಿಧಾನವಾಗಿ ಹೆಚ್ಚುತ್ತಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಕೂಡ ಉತ್ತಮ ಮಳೆಯಾಗುತ್ತಿದ್ದು, ಕರ್ನಾಟಕ ಕಾವೇರಿ ಜಲಾನಯನ ಪ್ರದೇಶದಲ್ಲಿರುವ ಜಲಾಶಯಗಳ ಒಳಹರಿವು ಹೆಚ್ಚುತ್ತಿದೆ. ಕೆಆರ್ ಎಸ್ ಜಲಾಶಯದ ನೀರಿನ ಮಟ್ಟ ಮತ್ತೆ ಹೆಚ್ಚಾಗುತ್ತಿದ್ದು, ಮಳೆ ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಒಳಹರಿವು ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.

ಜಲಾಶಯಗಳ ಇಂದಿನ ಮಟ್ಟ
ಜೂನ್ 6 ಇಂದು ಕೃಷ್ಣ ರಾಜಸಾಗರ ಜಲಾಶಯದ ಒಳಹರಿವು 1470 ಕ್ಯೂಸೆಕ್ಸ್‌ಗೆ ಹೆಚ್ಚಾಗಿದೆ. ಜಲಾಶಯದಿಂದ 550 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ.49.45 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಡ್ಯಾಂನಲ್ಲಿ ಸದ್ಯ 12.97 ಟಿಎಂಸಿ ಅಡಿಯಷ್ಟು ನೀರು ಸಂಗ್ರಹವಾಗಿದೆ.
ಹೇಮಾವತಿ ಜಲಾಶಯದ ಒಳಹರಿವು 389 ಕ್ಯೂಸೆಕ್ಸ್ ಇದ್ದು, 250 ಕ್ಯೂಸೆಕ್ಸ್ ನೀರನ್ನು ಜಲಾಶಯದಿಂದ ಹೊರಬಿಡಲಾಗುತ್ತಿದೆ. 37.10 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವಿರುವ ಜಲಾಶಯದಲ್ಲಿ ಸದ್ಯ 10.01 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.
ಕಬಿನಿ ಜಲಾಶಯದ ಒಳಹರಿವು 475 ಕ್ಯೂಸೆಕ್ಸ್‌ಗಳಷ್ಟಿದ್ದು, 300 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ. ಕಬಿನಿ ಜಲಾಶಯದ ಸಂಗ್ರಹ ಸಾಮರ್ಥ್ಯ 19.52 ಟಿಎಂಸಿಗಳಷ್ಟಾಗಿದ್ದು ಸದ್ಯ ಜಲಾಶಯದಲ್ಲಿ 7.69 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.
ಹಾರಂಗಿ ಜಲಾಶಯದ ಒಳಹರಿವು 295 ಕ್ಯೂಸೆಕ್ಸ್‌ಗಳಿದ್ದು, 200 ಕ್ಯೂಸೆಕ್ಸ್ ನೀರನ್ನು ಜಲಾಶಯದಿಂದ ಹೊರಬಿಡಲಾಗುತ್ತಿದೆ. 8.50 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿರುವ ಹಾರಂಗಿ ಜಲಾಶಯದಲ್ಲಿ ಇಂದಿನ ನೀರಿನ ಮಟ್ಟ 3.05 ಟಿಎಂಸಿ ಇದೆ.
ಇನ್ನೂ ಒಂದು ವಾರ ಮಳೆ
ಇನ್ನೂ ಒಂದು ವಾರ ರಾಜ್ಯದ ಹಲವು ಕಡೆ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ ದಿನಗಳಲ್ಲಿ ಮಳೆ ಮತ್ತಷ್ಟು ಹೆಚ್ಚಾದರೆ ಜಲಾಶಯಗಳ ನೀರಿನ ಹರಿವು ಕೂಡ ಹೆಚ್ಚಾಗಲಿದೆ. ಮೆಟ್ಟೂರು ಜಲಾಶಯಕ್ಕೆ ಕೂಡ ನೀರಿನ ಹರಿವು ಹೆಚ್ಚುವ ಸಾಧ್ಯತೆ ಇದೆ.












Click it and Unblock the Notifications