ಕೆಆರ್‌ಎಸ್ ಮಟ್ಟ 100 ಅಡಿ ತಲುಪಿದ ನಂತರ ನಾಲೆಗಳಿಗೆ ನೀರು: ರೈತರಿಗೆ ಚೆಲುವರಾಯಸ್ವಾಮಿ ಕೊಟ್ಟ ಸಲಹೆಯೇನು?
ಮಂಡ್ಯ, ಜುಲೈ 01: ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ 100 ಅಡಿ ತಲುಪಿದ ನಂತರ ನಾಲೆಗಳಿಗೆ ನೀರು ಹರಿಸಲಾಗುವುದು ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚೆಲುವರಾಯಸ್ವಾಮಿ ತಿಳಿಸಿದರು.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿ, ನಾಲೆಗಳಿಗೆ ನೀರು ಹರಿಸಲು ಸದ್ಯಕ್ಕೆ ಯಾವುದೇ ತೊಂದರೆಯಿಲ್ಲ. ನಾಲಾ ಆಧುನೀಕರಣ ಕಾಮಗಾರಿಯಿಂದಲೂ ಅಡ್ಡಿಯಿಲ್ಲ. ಈಗ ನೀರು ಬಿಟ್ಟರೆ ಕೇವಲ ಕೆರೆ-ಕಟ್ಟೆಗಳು ತುಂಬಬಹುದು. ಆದರೆ, ಬೆಂಗಳೂರಿಗೆ ಕಷ್ಟವಾಗಬಹುದು. ನಾಲೆಯಲ್ಲಿ ನೀರು ಬಿಟ್ಟರು ರೈತರು ಭತ್ತದ ಒಟ್ಲುಪಾತಿ, ಬಿತ್ತನೆ ಮಾಡುತ್ತಾರೆ. ಆದರೆ, ಮುಂದಿನ ದಿನಗಳಲ್ಲಿ ಮಳೆಯಾಗದಿದ್ದರೆ ಏನು ಮಾಡೋದು ಎಂದು ಚಲುವರಾಯಸ್ವಾಮಿ ಪ್ರಶ್ನಿಸಿದರು.

ಕೆಆರ್‌ಎಸ್ ನೀರಿನ ಮಟ್ಟ 100 ತಲುಪಿದ ನಂತರ ನೀರು ಬಿಡಲು ಚಿಂತಿಸಲಾಗಿದೆ. ನೀರಿಲ್ಲದಿದ್ದರೆ ರೈತರ ಶ್ರಮವೆಲ್ಲಾ ವ್ಯರ್ಥವಾಗುತ್ತದೆ. ಇನ್ನಷ್ಟು ಆರ್ಥಿಕ ನಷ್ಟವಾಗುತ್ತದೆ. ಒಂದು ತಿಂಗಳ ಕಾಲ ಸತತ ನೀರು ಹರಿಸಿದರಷ್ಟೇ ಮಳವಳ್ಳಿ, ಮದ್ದೂರಿನ ಕಡೆಯ ಭಾಗಕ್ಕೆ ಸರಿಯಾಗಿ ನೀರು ತಲುಪುತ್ತದೆ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದರು.
ಕಳೆದ ವರ್ಷ ಬರಗಾಲ ಆವರಿಸಿದ್ದರಿಂದ ರೈತರು ಕಬ್ಬನ್ನು ಬೆಳೆದಿಲ್ಲ. ಈ ಹಿನ್ನೆಲೆಯಲ್ಲಿ ಕಬ್ಬು ಕೊರತೆ ಆಗಬಹುದು. ಈ ಬಾರಿ ಬರಗಾಲ ಇರುವ ಹಿನ್ನೆಲೆ ಕಬ್ಬು ಕೊರತೆ ಆಗಬಹುದು. ಪ್ರಸ್ತುತ 1.90 ಲಕ್ಷ ಕಬ್ಬು ಒಪ್ಪಿಗೆಯಾಗಿದ್ದು, ಉಳಿದ ಕಬ್ಬನ್ನು ನಾನ್ ಒಪ್ಪಿಗೆ ಮತ್ತು ಹೊರ ಜಿಲ್ಲೆಯ ಮೂಲಕ ಕಬ್ಬನ್ನು ತಂದು ನುರಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು. 2023-24ನೇ ಸಾಲಿನಲ್ಲಿ 2,41,305 ಮೆಟ್ರಿಕ್ ಟನ್ ಕಬ್ಬು ನುರಿಸಲಾಗಿದೆ. ಅಲ್ಲದೆ, ಕಬ್ಬು ಸರಬರಾಜು ಮಾಡಿದ ರೈತಗೆ ಸಂಪೂರ್ಣವಾಗಿ ಹಣವನ್ನು ಪಾವತಿಸಲಾಗಿರುತ್ತದೆ ಎಂದರು.
ಈ ವಾರ ಕಳೆದ ನಂತರ ಸಭೆ ನಡೆಸಿ ಹೊಸ ಕಾರ್ಖಾನೆ ಸ್ಥಾಪನೆ ಬಗ್ಗೆ ಚಿಂತನೆ ಮಾಡುತ್ತೇವೆ. ಕಾರ್ಖಾನೆ ವಿದ್ಯುತ್ ಬಿಲ್ ಮನ್ನಾ ಮಾಡಲು ವಿಧಾನ ಪರಿಷತ್ ಶಾಸಕ ದಿನೇಶ್ ಗೂಳಿಗೌಡ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.
ಲಾಭ-ನಷ್ಟ ನೋಡಿ ರೈತರ ಜೀವನಾಡಿ ಮೈಶುಗರ್ ಕಾರ್ಖಾನೆಯನ್ನು ನಡೆಸುತ್ತಿಲ್ಲ, ರೈತರ ಹಿತದೃಷ್ಟಿಯಿಂದ ನಡೆಸಲಾಗುತ್ತಿದೆ. ಪ್ರಸಕ್ತ ಸಾಲಿನ ಮೈಶುಗರ್ ಕಾರ್ಖಾನೆಯ ಬಾಯ್ಲರ್‌ಗೆ ಅಗ್ನಿ ಸ್ಪರ್ಶ ಸಲ್ಲಿಸಿದ ನಂತರ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಕಾರ್ಖಾನೆಗೆ ಲಾಭ ಬರುತ್ತದೆ ಎಂಬ ನಂಬಿಕೆ ಮೇಲೆ ನಡೆಸಲಾಗುತ್ತಿದೆ. ಸ್ಥಗಿತವಾಗಿದ್ದ ಮೈಶುಗರ್ ಕಾರ್ಖಾನೆಯನ್ನು ಪುನರ್ ಆರಂಭಗೊಳಿಸಲು ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಕಳೆದ ಸಾಲಿನಲ್ಲಿ 50 ಕೋಟಿ ರೂ. ನೀಡಿ ಆರಂಭಿಸಲಾಗಿತ್ತು. ಈ ವರ್ಷ ಯಾವುದೇ ತೊಂದರೆ ಇಲ್ಲವಾಗಿದೆ ಎಂದರು.












Click it and Unblock the Notifications