KRS Dam: ಕೆಆರ್ಎಸ್ ಜಲಾಶಯದ ಒಳಹರಿವು 39,276 ಕ್ಯೂಸೆಕ್ಸ್‌ಗೆ ಹೆಚ್ಚಳ; ಕಬಿನಿ ಒಳಹರಿವು ಭಾರಿ ಏರಿಕೆ
ಕೇರಳ ಮತ್ತು ಕರ್ನಾಟಕದ ಪಶ್ಚಿಮ ಘಟ್ಟಗಳು ಮತ್ತು ಕಾವೇರಿ ಜಲಾಯನಯನ ಪ್ರದೇಶ ಸೇರಿ ಹಲವು ಕಡೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ನದಿಗಳು ಉಕ್ಕಿ ಹರಿಯುವಂತೆ ಮಾಡಿದೆ. ಜಲಾಶಯಗಳಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಮುಂದಿನ ದಿನಗಳಲ್ಲಿ ಮಳೆ ಮತ್ತಷ್ಟು ಅಬ್ಬರಿಸುವ ಸೂಚನೆ ಕೊಟ್ಟಿದೆ.
ಕೃಷ್ಣರಾಜ ಸಾಗರ ಜಲಾಶಯದ ಒಳಹರಿವು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದು ಈ ಭಾಗದ ರೈತರಲ್ಲಿ ಖುಷಿ ತಂದಿದೆ. ಜುಲೈ ಮಧ್ಯಭಾಗದಲ್ಲೇ ಜಲಾಶಯದ ಶೇಕಡ 60ಕ್ಕೂ ಹೆಚ್ಚು ಭರ್ತಿಯಾಗಿದ್ದು ಇದೇ ರೀತಿ ಮುಂದುವರೆದರೆ ಕೆಲವು ದಿನಗಳಲ್ಲೇ ತುಂಬುವ ಸಾಧ್ಯತೆ ಕೂಡ ಇದೆ.

ಕಳೆದ ಎರಡು ದಿನಗಳಿಂದ ಭಾರಿ ಮಳೆಯಾದ ಪರಿಣಾಮ ಕೆಆರ್ ಎಸ್ ಜಲಾಶಯಕ್ಕೆ ಹರಿದುಬರುತ್ತಿರುವ ನೀರಿನ ಪ್ರಮಾಣ 39,276 ಕ್ಯೂಸೆಕ್ಸ್‌ಗೆ ಏರಿಕೆಯಾಗಿದೆ. 124.80 ಗರಿಷ್ಠ ಅಡಿ ಸಾಮರ್ಥ್ಯವಿರುವ ಜಲಾಶಯದಲ್ಲಿ ಸದ್ಯ 108.80 ಅಡಿ ನೀರು ಭರ್ತಿಯಾಗಿದೆ. 49.452 ಟಿಎಂಸಿ ಒಟ್ಟು ಸಂಗ್ರಹ ಸಾಮರ್ಥ್ಯವಿದ್ದು, ಈಗ 30.532 ಟಿಎಂಸಿ ನೀರು ಸಂಗ್ರಹದಲ್ಲಿದೆ. ಜಲಾಶಯದದಿಂದ ಕಾಲುವೆಗೆ 2289 ಕ್ಯೂಸೆಕ್ಸ್ ನೀರು ಹರಿಸಲಾಗುತ್ತಿದ್ದು, ನದಿಗೆ 579 ಕ್ಯೂಸೆಕ್ಸ್ ನೀರು ಹೊರಬಿಡಲಾಗುತ್ತಿದೆ.
ಕಬಿನಿ ಜಲಾಶಯಕ್ಕೆ ಭಾರಿ ನೀರು
ಕಬಿನಿ ಜಲಾಶಯಕ್ಕೂ ಭಾರಿ ಪ್ರಮಾಣದಲ್ಲಿ ನೀರು ಹರಿದುಬರುತ್ತಿದ್ದು ಹೆಚ್ಚಿನ ನೀರನ್ನು ಜಲಾಶಯದಿಂದ ಹೊರಬಿಡಲಾಗುತ್ತಿದೆ. ಸದ್ಯ 29,310 ಕ್ಯೂಸೆಕ್ಸ್ ಒಳಹರಿವು ಇದ್ದು 36,000 ಕ್ಯೂಸೆಕ್ಸ್ ನೀರನ್ನು ಜಲಾಶಯದಿಂದ ಹೊರಬಿಡಲಾಗುತ್ತಿದೆ. 19.52 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 18.47 ಟಿಎಂಸಿ ನೀರು ಭರ್ತಿಯಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚುವರಿ ನೀರನ್ನು ಜಲಾಶಯದಿಂದ ಹೊರಬಿಡಲಾಗುತ್ತಿದೆ.
#KRS Dam - Mandya
— ರವಿ ಕೀರ್ತಿ ಗೌಡ (@ravikeerthi22) July 16, 2024
16th July 2024 , 4 PM
FRL - 124.80 ft
PRL - 108.80 ft
Storage - 30.532 / 49.452 TMC
Inflow - 39,276 cusecs
Outflow - River : 579 cusecs
Canal : 1710 cusecs
Total Outflow - 2289 cusecs
Storage - 61.74%
ಕಾವೇರಿ ಕೊಳ್ಳದ ವ್ಯಾಪ್ತಿಯಲ್ಲಿ ಬರುವ ಹೇಮಾವತಿ ಜಲಾಶಯಕ್ಕೆ 22,100 ಕ್ಯೂಸೆಕ್ಸ್ ಒಳಹರಿವು ಇದ್ದು, ಹಾರಂಗಿ ಜಲಾಶಯಕ್ಕೆ 13,600 ಕ್ಯೂಸೆಕ್ಸ್ ಒಳಹರಿವು ಇದೆ.
ಭಾರಿ ಮಳೆ ಎಚ್ಚರಿಕೆ
ಜುಲೈ 18ರವರೆಗೂ ರಾಜ್ಯದ ಕರಾವಳಿ, ಮಲೆನಾಡು ಭಾಗದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಕೇರಳ ವಯನಾಡು ಪ್ರದೇಶಕ್ಕೂ ಕೂಡ ರೆಡ್ ಅಲರ್ಟ್ ನೀಡಲಾಗಿದೆ. ಮಳೆ ಹೀಗೆ ಮುಂದುವರೆದರೆ ಕೆಆರ್ ಎಸ್ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರಲಿದೆ.
ಕಳೆದ ವರ್ಷ ಬರಗಾಲದಿಂದ ಬೆಳೆ ಕೂಡ ಬೆಳೆಯಲಾಗದೆ ನಷ್ಟ ಅನುಭವಿಸಿದ್ದ ಕಾವೇರಿ ಜಲಾನಯನ ಭಾಗದ ರೈತರಿಗೆ ಈ ಬಾರಿ ಮಳೆ ಖುಷಿ ಕೊಟ್ಟಿದೆ. ಮುಂದಿನ ದಿನಗಳಲ್ಲಿ ಹೀಗೆ ವ್ಯಾಪಕ ಮಳೆಯಾದರೆ ತಮಿಳುನಾಡಿನ ಕ್ಯಾತೆ ಕೂಡ ತಪ್ಪಲಿದ್ದು, ರಾಜ್ಯದ ರೈತರು ನೆಮ್ಮದಿಯಾಗಿ ಬೆಳೆ ಬೆಳೆಯಬಹುದಾಗಿದೆ.












Click it and Unblock the Notifications