KRS: ಮಹಿಳೆ ಸದಸ್ಯೆ ಮೇಲೆ ಇಬ್ಬರು ಇನ್ಸ್‌ಪೆಕ್ಟರ್ ದೌರ್ಜನ್ಯ: ಕ್ರಮಕ್ಕೆ ಆಗ್ರಹಿಸಿ ಮಹಿಳಾ ಆಯೋಗ ಪತ್ರ
ಬೆಂಗಳೂರು, ಅಕ್ಟೋಬರ್ 01: ಅನ್ಯಾಯಕ್ಕೆ ಒಳಗಾದ ರೈತರ ಪರವಾಗಿ ಧನಿ ಎತ್ತಿರುವ ಕರ್ನಾಟಕ ರಾಷ್ಟ ಸಮಿತಿ ಪಕ್ಷದ (KRS) ಮಹಿಳಾ ಕಾರ್ಯಕರ್ತೆಯರ ಮೇಲೆ ಸ್ವತಃ ಪೊಲೀಸರೇ ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ದೌರ್ಜನ್ಯವೆಸಗಿದ ಪೊಲೀಸರ ಮೇಲೆ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಮಹಿಳಾರ ಆಯೋಗದ ಅಧ್ಯಕ್ಷರು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರ ಮುಖೇನ ಒತ್ತಾಯಿಸಿದ್ದಾರೆ.
ರೈತರಿಗೆ ಅನ್ಯಾವಾಗಿದೆ ಎಂದು ನ್ಯಾಯ ಕೇಳಲು ಹೋದವರ ಮೇಲೆ ಅದರಲ್ಲೂ ಮಹಿಳೆ ಮೇಲೆ ಪೊಲೀಸರು ಎಸಗಿದ್ದಾರೆ ಎನ್ನಲಾದ ದೌರ್ಜನ್ಯವನ್ನು ಖಂಡಿಸಲಾಗಿದೆ. ಈ ಬಗ್ಗೆ ವ್ಯಾಪಕ ಚರ್ಚೆ ಆಗುತ್ತಿದೆ. ಮಾದನಾಯಕನಹಳ್ಳಿ ಮತ್ತು ನೆಲಮಂಗಲ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಅವರು ಪತ್ರ ಬರೆದಿದ್ದಾರೆ.

ನ್ಯಾಯ ಕೇಳಲು ಠಾಣೆಗೆ ಹೋದಾಗ ಮೊಬೈಲ್‌ನಲ್ಲಿ ಠಾಣೆ ಚಿತ್ರಿಕರಿಸುತ್ತಿದ್ದ ಮಹಿಳೆಯ ಮೊಬೈಲ್ ಕಸಿದು ರಸ್ತೆಯಲ್ಲಿ ಎಳೆದುಕೊಂಡು ಹೋಗಿ ದೌರ್ಜನ್ಯ ಮಾಡಲಾಗಿದೆ. ಇದನ್ನು ರಾಜ್ಯ ಮಹಿಳಾ ಆಯೋಗ ನಿರ್ದಾಕ್ಷಿಣ್ಯವಾಗಿ ಖಂಡಿಸುತ್ತದೆ. ದೌರ್ಜನ್ಯ ನಡೆಸಿದ ಪೊಲೀಸರ ವಿರುದ್ಧ ಸೂಕ್ತ ತನಿಖೆ ಆಗಬೇಕು. ಸಂತ್ರಸ್ತರಿಗೆ ನ್ಯಾಯ ಸಿಗಬೇಕು ಎಂದು ಮಹಿಳಾ ಆಯೋಗ ಪತ್ರದಲ್ಲಿ ತಿಳಿಸಿದೆ.
ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ರೈತರ ಪರವಾಗಿ ನ್ಯಾಯ ಕೇಳಲು ಕೆಆರ್‌ಎಸ್ ಪಕ್ಷ ಕಾರ್ಯಕರ್ತರು ತೆರಳಿದ್ದರು. ಆಗ ಸುಳ್ಳು ಪ್ರಕರಣದಲ್ಲಿ ಪೊಲೀಸರ ನಮ್ಮ ಕಾರ್ಯಕರ್ತರನ್ನು ಬಂದಿಸಿದ್ದಾರೆ. ಇದನ್ನು ಪ್ರಶ್ನಿಸಿದ್ದ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರಿಗೆ ನೆಲಮಂಗಲ ಠಾಣೆ ಇನ್ಸ್‌ಪೆಕ್ಟರ್ ನರೇಂದ್ರ ಬಾಬು ಅವರು ಮೊಬೈಲ್ ಕಸಿದು ಬೆದರಿಕೆ ಹಾಕಿದರು. ಇಂತಹ ದೌರ್ಜನ್ಯ ಸರಿಯಲ್ಲ. ಅಧಿಕಾರ ದುರುಪಯೋಗ ಮಾಡಿಕೊಂಡ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಯೋಗ ಕೋರಿದೆ.
ಪ್ರಕರಣ ಬಗ್ಗೆ KRS ಪಕ್ಷ ಹೇಳಿದ್ದೇನು?
ಕರ್ನಾಟಕ ರಾಷ್ಟ್ರೀಯ ಸಮಿತಿ ಪಕ್ಷ (KRS) ಸಾಮಾಜಿಕ ಜಾಲತಾಣದಲ್ಲಿ ಬಗ್ಗೆ ಪ್ರತಿಕ್ರಿಯಿಸಿ ಮಾಹಿತಿ ಹಂಚಿಕೊಂಡಿದೆ.
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ ಅಂತ ಭಾವಿಸಿದ್ದೇವೆ ಇಲ್ಲಾ, ಬ್ರಿಟಿಷರಿಂದ ಅಧಿಕಾರ ಹಸ್ತಾಂತರವಾಗಿದೆ. ಕೆಆರ್‌ಎಸ್ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿ, ನಾವು ಮಹಿಳೆ ಮೇಲೆ ಹಲ್ಲೆ ಮಾಡಿದ್ದೇವೆ ಅಂತ ಸುಳ್ಳು ಕಂಪ್ಲೇಂಟ್ ಕೊಟ್ಟಿದ್ದಾರೆ ಎಂದು ಪಕ್ಷ ಆರೋಪಿಸಿದೆ.
ಕೆಆರ್‌ಎಸ್ ಪಕ್ಷದ ಕಾರ್ಯಕರ್ತರ ಮೇಲೆ ಠಾಣೆ ಹೊರಗಡೆಯೇ ಇಷ್ಟು ಹಲ್ಲೆ ಮಾಡಿದ್ದಾರೆ. ಇನ್ನು ಪೊಲೀಸ್ ಸ್ಟೇಷನ್ ಒಳಗೆ ಎಷ್ಟು ಹಲ್ಲೆ ಮಾಡಿರಬಹುದು, ಕೋರ್ಟ್ ನಿರ್ದೇಶನ ಕೊಟ್ಟಿದೆ ಪ್ರತಿಯೊಂದು ಪೊಲೀಸ್ ಠಾಣೆಯಲ್ಲಿ ಸಿಸಿಟಿವಿ ಅಳವಡಿಸಬೇಕು ಎಂಬುದಿದೆ. ಕೋರ್ಟ್ ಆದೇಶವನ್ನು ಗಾಳಿಗೆ ತೂರಿ ತಮ್ಮ ಇಚ್ಛೆ ಬಂದಂತೆ ನಡೆದುಕೊಳ್ಳುತ್ತಿದ್ದಾರೆ. ಇವರೆಲ್ಲ ಭ್ರಷ್ಟ ಪೊಲೀಸ್ ಅಧಿಕಾರಿಗಳು ಎಂದು ಕೆಆರ್‌ಎಸ್ ಆರೋಪಿಸಿದೆ.
ರೈತರು ಇವತ್ತು ಆತ್ಮಹತ್ಯೆಗಳು ಮಾಡಿಕೊಳ್ಳುತ್ತಿರುವುದಕ್ಕೆ ಕಾರಣ ಈ ಭ್ರಷ್ಟ ಸರ್ಕಾರಗಳು ಅವರಿಗೆ ಬೆಂಬಲಿಸುತ್ತಿರುವ ಭ್ರಷ್ಟ ಪೊಲೀಸ್ ಅಧಿಕಾರಿಗಳು. ಇದೆಲ್ಲ ಬೆಳವಣಿಗೆ ನೋಡಿದ ಮೇಲಾದರೂ ಕನ್ನಡಿಗರು ಎಚ್ಚೆತ್ತುಕೊಳ್ಳಬೇಕು ಎಂದು ಕೆಆರ್‌ಎಸ್ ಕರೆ ನೀಡಿದೆ. ಈ ಪ್ರಕರಣ, ಆರೋಪಗಳ ವ್ಯಾಪಕ ಚರ್ಚೆ ಆಗುತ್ತಿವೆ. ಶೀಘ್ರವೇ ಈ ಬಗ್ಗೆ ತನಿಖೆ ನಡೆದರೆ ಸತ್ಯ ಏನೆಂದು ಗೊತ್ತಾಗಲಿದೆ.












Click it and Unblock the Notifications