ಕೃಷ್ಣಾ ಮೇಲ್ದಂಡೆ: ಪುನರ್ವಸತಿಗೆ ಸೌಲಭ್ಯ ಜತೆಗೆ ಶಿಕ್ಷಣ ವ್ಯವಸ್ಥೆ: ಸರ್ಕಾರ ಭರವಸೆ
ವಿಜಯಪುರ ಜಿಲ್ಲೆಯ ನಾಲ್ಕೈದು ಹಳ್ಳಿಗಳಲ್ಲಿ ಪುನರ್ವಸತಿ ಕೇಂದ್ರಗಳಿಗೆ ಅಗತ್ಯ ಸೌಲಭ್ಯಗಳ ಜೊತೆಗೆ ಶಾಲಾ ಕಾಲೇಜು, ಪಾಲಿಟೆಕ್ನಿಕ್ ಕಾಲೇಜುಗಳನ್ನೂ ನಿರ್ಮಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ವಿಜಯಪುರ, ಮಾರ್ಚ್ 09: ಜಿಲ್ಲೆಯ ನಾಲ್ಕೈದು ಹಳ್ಳಿಗಳಲ್ಲಿ ಪುನರ್ವಸತಿ ಕೇಂದ್ರಗಳನ್ನು ಅಕ್ಕಪಕ್ಕದಲ್ಲಿಯೇ ನಿರ್ಮಿಸಿ, ಜನರಿಗೆ ಸಾಮಾನ್ಯ ವ್ಯವಸ್ಥೆಗಳನ್ನು ನೀಡುವ ಜೊತೆಗೆ ಶಾಲಾ ಕಾಲೇಜು, ಪಾಲಿಟೆಕ್ನಿಕ್ ಕಾಲೇಜುಗಳನ್ನೂ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಗುರುವಾರ ವಿಜಯಪುರದಲ್ಲಿ 3ನೇ ಹಂತದ ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು. ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ಜಮೀನು ಮನೆ ಕಳೆದುಕೊಂಡಿರುವವರಿಗೆ ಪರಿಹಾರದ ದರವನ್ನು ಏಕಸ್ವರೂಪಗೊಳಿಸಲಾಗಿದೆ. ಪರಿಹಾರದ ತಾರತಮ್ಯ ಸರಿಪಡಿಸಿ ಒಣ ಬೇಸಾಯಕ್ಕೆ 2ಲಕ್ಷದಿಂದ ಗರಿಷ್ಟ 20 ಲಕ್ಷ ರೂ.ವರೆಗೆ ಪರಿಹಾರ ನೀಡಲಾಗುತ್ತಿದೆ ಎಂದರು.

ರೈತರಿಗೆ ನ್ಯಾಯ ಒದಗಿಸುವ ಕೆಲಸ ಮಾಡಲಾಗಿದೆ. ಭೂಸ್ವಾಧೀನಕ್ಕೆ ಜಮೀನು ಮನೆ ಕೊಡಲು ಇಚ್ಛಿಸದವರು ಭೂ ಸ್ವಾಧೀನದ ವಿರುದ್ಧ ನ್ಯಾಯಾಯಲಯಕ್ಕೆ ಹೋಗುವ ಅವಕಾಶದ ಬಗ್ಗೆ ಕಾನೂನು ತಜ್ಞರ ಸಲಹೆಯನ್ನು ಪಡೆಯಲಾಗುವುದು. ಆರ್ ಎಂಡ್ ಆರ್ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಮುಳವಾಡಿ, ಚಿಮ್ಮಲಗಿ ಏತ ನೀರಾವರಿ ಪ್ರದೇಶದಲ್ಲಿ 15 ಲಕ್ಷ ಎಕರೆ ಜಮೀನಿಗೆ ನೀರು ಒದಗಿಸಲಾಗುವುದು. ರೇವಣಸಿದ್ಧೇಶ್ವರ ಏತನೀರಾವರಿಗೆ ಅಡಿಗಲ್ಲು ಹಾಕಲಾಗಿದೆ ಎಂದು ಅವರು ವಿವರಿಸಿದರು.
ಮನೆ ನಿರ್ಮಾಣಕ್ಕೆ ಸರ್ಕಾರದಿಂದ ವಿಶೇಷ ಯೋಜನೆ
ಪುನರ್ವಸತಿ ಮತ್ತು ಪುನರ್ನಿಮಾಣಕ್ಕಾಗಿ ಯೋಜನೆಗಳಿಗೆ ಜಮೀನು ಕಳೆದುಕೊಳ್ಳುವ ರೈತರ ಬದುಕು ಉತ್ತಮವಾಗಿ ರೂಪಿಸಬೇಕೆಂಬುದು ಸರ್ಕಾರದ ಉದ್ದೇಶ. ಪುರ್ನವಸತಿ ಕೇಂದ್ರದಲ್ಲಿ ಮೂಲಭೂತ ಸೌಕರ್ಯ, ಶಾಲೆ, ರಸ್ತೆಗಳಿಲ್ಲ ಎಂದು ಹಲವು ದೂರಗಳು ಬರುತ್ತಿವೆ. ಮನೆ ಕಳೆದುಕೊಳ್ಳುವವರಿಗೆ ಮನೆಯ ಪ್ರಸ್ತುತ ಬೆಲೆಯ ಜೊತೆಗೆ ಶೇ.20 ರಷ್ಟು ಪರಿಹಾರ ನೀಡುವ ಹೊಸ ಚಿಂತನೆಯನ್ನು ಮಾಡಲಾಗಿದೆ. ಪುನರ್ವಸತಿ ಮತ್ತು ಪುನರ್‌ನಿರ್ಮಾನ ಕೇಂದ್ರಗಳಲ್ಲಿ ನಷ್ಟ ಅನುಭವಿಸಿದವರಿಗೆ ಜಮೀನು ನೀಡುವುದರ ಜೊತೆಗೆ ಮನೆಯನ್ನು ನಿರ್ಮಿಸಿಕೊಡುವ ವಿಶೇಷ ಯೋಜನೆಯನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ನೀರಾವರಿಗೆ ಆದ್ಯತೆ: ಅಗತ್ಯ ವ್ಯವಸ್ಥೆ
ಕೃಷ್ಣೆಯ ತೀರದ ರೈತರು, ನದಿಯ ನೀರನ್ನು ಬಳಸುವ ವ್ಯವಸ್ಥೆ ಇರಲಿಲ್ಲ. ಇಲ್ಲಿನ ರೈತರ ಪ್ರಾಮಾಣಿಕರು ಮತ್ತು ಕಾಯಕನಿಷ್ಠೆ ಇರುವವರು. ಕೃಷ್ಣೆಯ ನೀರು ಹಾಗೂ ಮಣ್ಣು ನಿಸರ್ಗ ಕೊಟ್ಟಿರುವ ವರವಾಗಿದ್ದು, ಗುಣಮಟ್ಟದ ಬೆಳೆಯನ್ನು ಇಲ್ಲಿ ಬೆಳೆಯಲಾಗುತ್ತದೆ. ವಿಜಯಪುರ, ಬೆಳಗಾವಿ, ಬಾಗಲಕೋಟೆಗಳಲ್ಲಿ ಉತ್ತಮ ಗುಣಮಟ್ಟದ ಕಬ್ಬನ್ನು ಬೆಳೆಯಲಾಗುತ್ತಿದೆ. ಪಂಚನದಿಗಳು ಹರಿಯುವ ಪ್ರದೇಶದಲ್ಲಿ ನೀರಾವರಿ ಸಮರ್ಥವಾಗಿಲ್ಲದಿರುವುದು ಚಿಂತನೆಯ ವಿಷಯವಾಗಿದೆ. ಈಗ ಪರಿಸ್ಥಿತಿ ಸುಧಾರಿಸುತ್ತಿದೆ. ಮೊದಲಿನಿಂದಲೂ ರಾಜ್ಯದಲ್ಲಿ ನೀರಾವರಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಬೇಕಾಗಿತ್ತು. ಅದಾಗದ್ದರಿಂದ ಈಗ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.
ಸಚಿವರಾದ ಗೋವಿಂದ ಕಾರಜೋಳ, ಮುರುಗೇಶ್ ನಿರಾಣಿ, ಶಾಸಕ ಎಂ.ಬಿ ಪಾಟೀಲ್ ಸೇರಿದಂತೆ ಸ್ಥಳೀಯ ಮುಖಂಡರು ಪಾಲ್ಗೊಂಡಿದ್ದರು.












Click it and Unblock the Notifications