ಬೆಂಗಳೂರಿಗಷ್ಟೇ ಸೀಮಿತವಾಗಿದ್ದ 'ಎನಿವೇರ್ ನೋಂದಣಿ' ವ್ಯವಸ್ಥೆ ಎಲ್ಲಾ ಜಿಲ್ಲೆಗಳಿಗೂ ವಿಸ್ತರಣೆ, ಏನಿದು?
ಬೆಂಗಳೂರು, ಜುಲೈ. 16: ನೋಂದಣಿ ಇಲಾಖೆಯನ್ನು ಮತ್ತಷ್ಟು ಜನಸ್ನೇಹಿಗೊಳಿಸುವ ಉದ್ದೇಶದಿಂದ ಜಾರಿಗೊಳಿಸಲಾಗಿದ್ದ ಹಾಗೂ ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದ 'ಎನಿವೇರ್ ನೋಂದಣಿ' ವ್ಯವಸ್ಥೆಯನ್ನು ಆಗಸ್ಟ್ ತಿಂಗಳಿನಿಂದ ಪ್ರತಿಯೊಂದು ಜಿಲ್ಲೆಗಳಿಗೂ ವಿಸ್ತರಿಸುವಂತೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸೂಚಿಸಿದ್ದಾರೆ.
"ಉಪ ನೋಂದಣಾಧಿಕಾರಿ ಕಚೇರಿ ಎಂದರೆ ಜನದಟ್ಟಣೆ ಸಾಮಾನ್ಯ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜನಸಾಮಾನ್ಯರನ್ನು ಸರಕಾರಿ ಕಚೇರಿಗಳಲ್ಲಿ ಕಾಯಿಸುವುದೂ ಒಂದು ರೀತಿಯ ಶೋಷಣೆ ಎಂಬುದರಲ್ಲಿ ಎರಡು ಮಾತಿಲ್ಲ. ಇದೇ ಕಾರಣಕ್ಕೆ ಬೆಂಗಳೂರಿನಲ್ಲಿ ಈಗಾಗಲೇ 'ಎನಿವೇರ್ ನೋಂದಣಿ' ವ್ಯವಸ್ಥೆ ಜಾರಿಗೊಳಿಸಲಾಗಿದೆ. ಆದರೆ, ಈ ವ್ಯವಸ್ಥೆ ಬೆಂಗಳೂರಿಗೆ ಮಾತ್ರ ಸೀಮಿತವಾಗದೆ ಆಗಸ್ಟ್ ತಿಂಗಳಿನಿಂದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಬೇಕು' ಎಂದಿದ್ದಾರೆ.

'ಎನಿವೇರ್ ನೋಂದಣಿ' ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಬೆಳಗಾವಿ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಇದೇ ವರ್ಷ ಮಾರ್ಚ್ 14 ರಿಂದ ಪರಿಚಯಿಸಿದ್ದು, ಜನರಿಂದಲೂ ಉತ್ತಮ ಸ್ಪಂದನೆ ದೊರೆಯುತ್ತಿದೆ. ಹೀಗಾಗಿ ಮುಂದಿನ ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ತಲಾ 4 ಜಿಲ್ಲೆಗಳಲ್ಲಿ ಈ ವ್ಯವಸ್ಥೆಯನ್ನು ಪರಿಚಯಿಸಿ. ನಂತರದ ತಿಂಗಳಲ್ಲಿ ಈ ಸಂಖ್ಯೆಯನ್ನು 8 ಕ್ಕೆ ಏರಿಸಿ. ಈ ವರ್ಷಾಂತ್ಯದೊಳಗೆ ಎಲ್ಲಾ ಜಿಲ್ಲೆಗಳಲ್ಲೂ ಎನಿವೇರ್ ರಿಜಿಸ್ಟ್ರೇಷನ್ ಲಭ್ಯವಾಗುವಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಏನಿದು ಏನಿವೇರ್ ರಿಜಿಸ್ಟ್ರೇಷನ್?
ಯಾವುದೇ ವ್ಯಕ್ತಿಯು ನೋಂದಣಿ ದಸ್ತಾವೇಜನ್ನು ಜನ ಸಂದಣಿ ಇಲ್ಲದ ಜಿಲ್ಲೆಯ ವ್ಯಾಪ್ತಿಯ ಯಾವುದಾದರೂ ಉಪನೋಂದಣಿ ಕಚೇರಿಯಲ್ಲಿ ತಮ್ಮ ಆಸ್ತಿ ದಸ್ತಾವೇಜನ್ನು ನೋಂದಾಯಿಸಿಕೊಳ್ಳಲು 'ಎನಿವೇರ್ ರಿಜಿಸ್ಟ್ರೇಷನ್' ವ್ಯವಸ್ಥೆಯ ಅಡಿಯಲ್ಲಿ ಸರ್ಕಾರ/ಕಂದಾಯ ಇಲಾಖೆ ಅವಕಾಶ ಮಾಡಿಕೊಟ್ಟಿದೆ.
ದಸ್ತಾವೇಜುಗಳ ನೋಂದಣಿಗಳಲ್ಲಿನ ವಿಳಂಬ ತಡೆಗಟ್ಟಿ ನೋಂದಣಿ ಪ್ರಕ್ರಿಯೆಯನ್ನು ಸುಲಭಗೊಳಿಸುವ, ಸಬ್ ರಿಜಿಸ್ಟ್ರಾರ್ ಕಚೇರಿ ಎದುರು ಜನರಿಗೆ ಕಾಯುವ ಶೋಷಣೆಯಿಂದ ಮುಕ್ತಿ ನೀಡುವ ಹಾಗೂ ಕಚೇರಿ ಸಿಬ್ಬಂದಿ ಮೇಲೆ ಕೆಲಸದ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಎನಿವೇರ್ ರಿಜಿಸ್ಟ್ರೇಷನ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.
ಈ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಮೊದಲು ಬೆಂಗಳೂರು ನಗರ ಜಿಲ್ಲೆಯ ಗಾಂಧಿನಗರ, ಬಸವನಗುಡಿ, ಜಯನಗರ, ಶಿವಾಜಿನಗರ ಹಾಗೂ ರಾಜಾಜಿನಗರ ಜಿಲ್ಲಾ ನೋಂದಣಿ ಕಚೇರಿಯ ವ್ಯಾಪ್ತಿಯ ಉಪನೋಂದಣಿ ಕಚೇರಿಗಳಲ್ಲಿ ಜಾರಿಗೆ ತರಲಾಗಿತ್ತು.
ಎನಿವೇರ್ ನೋಂದಣಿ ವ್ಯವಸ್ಥೆಯು ಬೆಂಗಳೂರು ನಗರ ಜಿಲ್ಲೆಯಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಜನ ಸಾಮಾನ್ಯರಿಗೆ ನೋಂದಣಿ ವಿಚಾರದಲ್ಲಿ ತ್ವರಿತ ಸೇವೆ ನೀಡಲು ಈ ಯೋಜನೆ ಸಹಕಾರಿಯಾಗಿದೆ. ಜನರೂ ಇದರ ಉಪಯೋಗವನ್ನು ಬಳಸಿಕೊಳ್ಳುತ್ತಿದ್ದಾರೆ. ಇದೇ ಕಾರಣಕ್ಕೆ ಈ ಯೋಜನೆಯನ್ನು ಇದೀಗ ರಾಜ್ಯಾದ್ಯಂತ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ.
ಈ ನೂತನ ಯೋಜನೆಯು ಸಾರ್ವಜನಿಕರಿಗೆ ಉಪಯುಕ್ತವಾಗುವ ಜೊತೆಗೆ, ದಸ್ತಾವೇಜಿನ ನೋಂದಣಿಯಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ. ನೋಂದಣಿ ಪ್ರಕ್ರಿಯೆಯಲ್ಲಿ ವಿಳಂಬವನ್ನು ತಡೆಗಟ್ಟುತ್ತದೆ. ಕಚೇರಿ ನೋಂದಣಿ ಕೆಲಸವನ್ನೂ ಜಿಲ್ಲೆಯಾದ್ಯಂತ ಎಲ್ಲ ಕಚೇರಿಗಳಿಗೂ ಸಮಾನವಾಗಿ ಹಂಚಿಕೆ ಮಾಡಲು ಈ ಯೋಜನೆ ಸಹಕಾರಿಯಾಗಿರಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.












Click it and Unblock the Notifications