ಕೆಪಿಟಿಸಿಎಲ್ ನೌಕರರಿಗೆ ಸಂಬಳ ಹೆಚ್ಚಳದ ಸಿಹಿ ನೀಡಿದ ಡಿಕೆಶಿ
ಬೆಂಗಳೂರು, ಮಾರ್ಚ್ 03: ಸರ್ಕಾರದ ಅವಧಿ ಮುಗಿಯುತ್ತಾ ಬಂದಂತೆ ಸರ್ವರನ್ನೂ ಸಂತುಷ್ಠಗೊಳಿಸುವ ಸೂತ್ರವನ್ನು ರಾಜ್ಯ ಸರ್ಕಾರ ಬಳಸುತ್ತಿದೆ. ರಾಜ್ಯ ಸರ್ಕಾರಿ ನೌಕರರಿಗೆ ವೇತನ ಹೆಚ್ಚಿಸಿ ಆದೇಶ ಹೊರಡಿಸಿದ್ದ ಬೆನ್ನಲ್ಲೆ ಈಗ ಕೆಪಿಟಿಸಿಎಲ್ ನೌಕರರಿಗೆ ಸಂಬಳ ಹೆಚ್ಚಳದ ಸಿಹಿ ಘೋಷಣೆಯಾಗಿದೆ.
ಕೆಪಿಟಿಸಿಎಲ್ ನೌಕರರಿಗೆ ಶೇ26 ರಷ್ಟು ವೇತನವನ್ನು ಹೆಚ್ಚಿಸುವುದಾಗಿ ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ಘೋಷಿಸಿದ್ದಾರೆ. ಇದರ ಜೊತೆಗೆ ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಇನ್ನು ಮುಂದೆ ಸರ್ಕಾರವೇ ನೇರವಾಗಿ ಸಂಬಳ ಪಾವತಿ ಮಾಡುವ ವ್ಯವಸ್ಥೆಗೆ ಅಸ್ತು ಎನ್ನಲಾಗಿದೆ.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಿಂದ ಆಯೋಜಿಸಿದ್ದ ಶಿವಮೊಗ್ಗ ವಲಯ ಕಚೇರಿ ಉದ್ಘಾಟನೆ ಮತ್ತು ಇತರ ಕಟ್ಟಡಗಳ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕೆಪಿಟಿಸಿಎಲ್ ನೌಕರರಿಗೆ ಸಂಬಳ ಹೆಚ್ಚಳ ಆದೇಶವನ್ನು ಮಾರ್ಚ್ 3ರಂದು ಅಧಿಕೃತವಾಗಿ ಹೊರಡಿಸಲಾಗುವುದು ಎಂದಿದ್ದಾರೆ.

ಕೆಪಿಟಿಸಿಎಲ್ ನಲ್ಲಿ 50 ಕ್ಕೂ ಹೆಚ್ಚು ಸಿಬ್ಬಂದಿ ಇದ್ದಾರೆ ಶನಿವಾರದಿಂದಲೇ ಸಂಬಳ ಹೆಚ್ಚಳದ ಆದೇಶ ಜಾರಿಯಾಗಿರುವ ಬಗ್ಗೆ ಸಂತಸವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರವು ಈಗಾಗಲೇ ಲಕ್ಷಾಂತರ ಮಂದಿ ರಾಜ್ಯ ಸರ್ಕಾರಿ ನೌಕರರಿಗೆ ಸಂಬಳ ಹೆಚ್ಚಿಸಿ ಚುನಾವಣೆಗೆ ಮತ ಭದ್ರ ಪಡಿಸಿಕೊಂಡಿದೆ. ಈಗ ಕೆಪಿಟಿಸಿಎಲ್ ಸಿಬ್ಬಂದಿಗೂ ಸಂಬಳ ಹೆಚ್ಚಿಸಿರುವುದು ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಇನ್ನಷ್ಟು ಲಾಭ ತರಲಿದೆ.
ಕೆಎಸ್‌ಆರ್‌ಟಿಸಿ ಮಾತ್ರ ಬಾಕಿ ಉಳಿದಿದ್ದು, ಅವರಿಗೂ ವೇತನ ಹೆಚ್ಚು ಮಾಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಗ್ರಾಮೀಣ ಭಾಗದ ಜೊತೆಗೆ ಮಧ್ಯಮ ವರ್ಗವನ್ನೂ ತುಷ್ಠೀಕರಿಸುತ್ತಿರುವ ಕಾಂಗ್ರೆಸ್ ಸರ್ಕಾರ ಚುನಾವಣೆಗೆ ಮುಂಚೆ ಮತಗಳನ್ನು ಭದ್ರ ಪಡಿಸಿಕೊಳ್ಳುತ್ತಿದೆ.












Click it and Unblock the Notifications