KPSC ಪಶುವೈದ್ಯಾಧಿಕಾರಿ ನೇಮಕಾತಿಯಲ್ಲಿ 80 ಲಕ್ಷ ರೂ. ಡೀಲಿಂಗ್: 3 ಎಫ್‌ಐಆರ್ ದಾಖಲು, 2 ಪ್ರಕರಣ ಸಿಐಡಿಗೆ ವರ್ಗ
ಬೆಂಗಳೂರು: ಕರ್ನಾಟಕ ಲೋಕ ಸೇವಾ ಆಯೋಗ ನಡೆಸಿದ ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಹಾಗೂ ಡೀಲಿಂಗ್ ಪ್ರಕರಣ ಈಗ ಮಹತ್ವದ ಘಟ್ಟ ತಲುಪಿದೆ. ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಮೂರು ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿವೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಅವರು ಸ್ಪಷ್ಟಪಡಿಸಿದ್ದಾರೆ.
ಪಾರದರ್ಶಕತೆಗೆ ಹೆಸರಾಗಬೇಕಿದ್ದ ಆಯೋಗದಲ್ಲಿ ಉದ್ಯೋಗ ಮಾರಾಟಕ್ಕಿದೆ ಎಂಬ ಆರೋಪ ಯುವಜನತೆಯ ನಂಬಿಕೆಯನ್ನು ಹುಸಿಗೊಳಿಸಿದೆ. ಈ ಹಗರಣ ಕೇವಲ ಆಡಳಿತಾತ್ಮಕ ವೈಫಲ್ಯವನ್ನಷ್ಟೇ ಅಲ್ಲದೆ, ವ್ಯವಸ್ಥೆಯೊಳಗಿನ ಭ್ರಷ್ಟಚಾರದ ಬೇರು ಎಷ್ಟು ಆಳವಾಗಿವೆ ಎಂಬುದನ್ನು ತೋರಿಸುತ್ತಿದೆ.

ಸಿಐಡಿ ತನಿಖೆಗೆ 2 ಪ್ರಕರಣ ವರ್ಗ
ಮಾಧ್ಯಮ ಪ್ರತಿನಿಧಿಗಳೊಂದಿಗೆ ಈ ಕುರಿತು ಮಾಹಿತಿ ಹಂಚಿಕೊಂಡ ಪೊಲೀಸ್ ಆಯುಕ್ತರು, ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಈ ಅಕ್ರಮಕ್ಕೆ ಸಂಬಂಧಿಸಿದಂತೆ 3 ಎಫ್‌ಐಆರ್ ದಾಖಲಾಗಿರುವುದಾಗಿ ತಿಳಿಸಿದರು. ಈ ಪೈಕಿ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ರಾಜ್ಯ ಪೊಲೀಸ್ ಮಹಾನಿರ್ದೇಶಕರು ಎರಡು ಎಫ್‌ಐಆರ್‌ಗಳನ್ನ ಹೆಚ್ಚಿನ ತನಿಖೆಗಾಗಿ ಸಿಐಡಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ಪ್ರಕರಣದ ತನಿಖೆಯನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಸಿಐಡಿಗೆ ವಹಿಸಲಾಗಿದ್ದು, ಉಳಿದ ಒಂದು ಪ್ರಕರಣದ ಮುಂದಿನ ಕ್ರಮಕ್ಕಾಗಿ ನ್ಯಾಯಾಲಯದ ಅನುಮತಿಯನ್ನು ಕೋರಲಾಗಿದೆ. ನ್ಯಾಯಾಲಯದ ಒಪ್ಪಿಗೆ ದೊರೆತ ಕೂಡಲೇ ಆ ಪ್ರಕರಣದ ತನಿಖೆಯೂ ನಡೆಯಲಿದೆ ಎಂದು ಪೊಲೀಸ್ ಆಯುಕ್ತರು ವಿವರಿಸಿದ್ದಾರೆ.
ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ಹಗರಣ: 80 ಲಕ್ಷ ರೂ. ಲಂಚದ ಆರೋಪ
ಕೆಪಿಎಸ್‌ಸಿ ಮೂಲಕ ರಾಜ್ಯಾದ್ಯಂತ ಒಟ್ಟು 400 ಪಶುವೈದ್ಯಾಧಿಕಾರಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಹಗಲಿರುಳು ಕಷ್ಟಪಟ್ಟು ಓದಿದ್ದ ಸಾವಿರಾರು ಅಭ್ಯರ್ಥಿಗಳು ಪರೀಕ್ಷೆ ಬರೆದು ಫಲಿತಾಂಶದ ನಿರೀಕ್ಷೆಯಲ್ಲಿದ್ದರು. ಆದರೆ, ಈ ನೇಮಕಾತಿ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿಬಂದಿವೆ. ಮಾಹಿತಿಯ ಪ್ರಕಾರ, ಪ್ರತಿ ಹುದ್ದೆಗೆ ಬರೋಬ್ಬರಿ 80 ಲಕ್ಷ ರೂಪಾಯಿಗಳವರೆಗೆ ಲಂಚ ಪಡೆಯಲಾಗಿದೆ ಎಂಬ ಗಂಭೀರ ಆರೋಪಗಳು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿವೆ.
ಅರ್ಹ ಮತ್ತು ಪ್ರತಿಭಾವಂತ ಅಭ್ಯರ್ಥಿಗಳಿಗೆ ಅನ್ಯಾಯ ಮಾಡಲಾಗಿದ್ದು, ಹಣವಿದ್ದವರಿಗೆ ಮಣೆ ಹಾಕಲಾಗಿದೆ ಎಂಬುದು ಪ್ರಮುಖ ದೂರಿನ ಅಂಶವಾಗಿದೆ.
KPSC ಹಗರಣವನ್ನ ಸಿಬಿಐಗೆ ಒಪ್ಪಿಸುವಂತೆ ಬಿ.ವೈ. ವಿಜಯೇಂದ್ರ ಆಗ್ರಹ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೆಪಿಎಸ್‌ಸಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಉದ್ಯೋಗಾಕಾಂಕ್ಷಿಗಳು, ವಿದ್ಯಾರ್ಥಿಗಳು ಮತ್ತು ಪಶುವೈದ್ಯಕೀಯ ಪದವೀಧರರು ಬೀದಿಗಿಳಿದು ತೀವ್ರ ಹೋರಾಟ ಆರಂಭಿಸಿದ್ದಾರೆ. "ನಮಗೆ ನ್ಯಾಯ ಬೇಕು, ಭ್ರಷ್ಟರನ್ನು ಕೂಡಲೇ ಬಂಧಿಸಬೇಕು, ಮತ್ತು ನೇಮಕಾತಿ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಬೇಕು" ಎಂದು ಆಗ್ರಹಿಸಿ ನಿರಂತರವಾಗಿ ಪ್ರತಿಭಟನೆಗಳು ನಡೆಯುತ್ತಿವೆ.
ರಾಜ್ಯದಲ್ಲಿ ನಡೆಯುತ್ತಿರುವ ಸರ್ಕಾರಿ ನೇಮಕಾತಿ ಅಕ್ರಮಗಳು, ಕರ್ನಾಟಕ ಲೋಕಸೇವಾ ಆಯೋಗ (KPSC)ದಲ್ಲಿನ ಭ್ರಷ್ಟಾಚಾರ ಹಾಗೂ ಖಾಲಿ ಇರುವ ಲಕ್ಷಾಂತರ ಸರ್ಕಾರಿ ಹುದ್ದೆಗಳ ಭರ್ತಿಯಲ್ಲಿ ಕಾಂಗ್ರೆಸ್ ಸರ್ಕಾರದ ಸಂಪೂರ್ಣ ವೈಫಲ್ಯದಿಂದ ರಾಜ್ಯದ ಯುವಜನರ ಭವಿಷ್ಯ ಸಂಕಷ್ಟಕ್ಕೆ ಸಿಲುಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ಇಂದು ಪ್ರೀಡಂ ಪಾರ್ಕ್ ನಲ್ಲಿ ಕೆ ಪಿ ಎಸ್ ಸಿ ಸೇರಿದಂತೆ ವಿವಿಧ ಉದ್ಯೋಕಾಂಕ್ಷಿಗಳು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಪ್ರತಿಯೊಬ್ಬ ಉದ್ಯೋಗಾಕಾಂಕ್ಷಿ, ವಿದ್ಯಾರ್ಥಿ ಹಾಗೂ ಅರ್ಹ ಅಭ್ಯರ್ಥಿಯ ಧ್ವನಿಯಾಗಿ ಭಾರತೀಯ ಜನತಾ ಪಕ್ಷದ ಎಲ್ಲಾ ಶಾಸಕರು ಮತ್ತು ನಾಯಕರು ಒಗ್ಗಟ್ಟಿನಿಂದ ಹೋರಾಟ ಮುಂದುವರಿಸಲಿದ್ದಾರೆ. ಯುವಕರಿಗೆ ನ್ಯಾಯ ದೊರೆಯುವವರೆಗೆ ಬಿಜೆಪಿ ತನ್ನ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಬಿ.ವೈ. ವಿಜಯೇಂದ್ರ ಅವರು ಸ್ಪಷ್ಟಪಡಿಸಿದರು
ಒಟ್ಟಾರೆಯಾಗಿ, ಕೆಪಿಎಸ್‌ಸಿ ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು ಅತ್ಯಗತ್ಯವಾಗಿದೆ. ಭ್ರಷ್ಟಾಚಾರದ ಕಳಂಕ ಹೊತ್ತಿರುವ ಈ ಪ್ರಕರಣವು ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಪ್ರಶ್ನಿಸುವಂತೆ ಮಾಡಿದೆ. ಸಿಐಡಿ ತನಿಖೆಯಿಂದಷ್ಟೇ ಪ್ರಕರಣದ ಹಿಂದಿರುವ ಪ್ರಭಾವಿ ಕೈಗಳ ಬಣ್ಣ ಬಯಲಾಗಬೇಕಿದೆ. ಮುಂದೆ ಈ ಪ್ರಕರಣ ಯಾವ ತಿರುವು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications
