KPSC ಅಕ್ರಮದ ಹಣದಲ್ಲಿ ಪ್ರೇಯಸಿಗೆ 23 ಲಕ್ಷದ ಒಡವೆ ಗಿಫ್ಟ್: ಭಾಲ್ಕಿ ಬ್ಯಾಂಕ್ ಅಧ್ಯಕ್ಷನಿಂದ ಬಿಲ್ ಪಾವತಿ, ಸಿಐಡಿ ತನಿಖೆ ಚುರುಕು
ರಾಜ್ಯದಲ್ಲಿ ಭಾರಿ ಸಂಚಲನ ಮೂಡಿಸಿರುವ ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಹಗರಣದ ಪ್ರಮುಖ ರೂವಾರಿ ಎನ್ನಲಾದ ಐಎಎಸ್ ಜ್ಞಾನೇಂದ್ರ ಕುಮಾರ್, ಅಕ್ರಮವಾಗಿ ಗಳಿಸಿದ ಹಣದಲ್ಲಿ ತನ್ನ ಪ್ರೇಯಸಿಗೆ ಬರೋಬ್ಬರಿ 23 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಖರೀದಿಸಿ ಉಡುಗೊರೆಯಾಗಿ ನೀಡಿದ್ದ ವಿಚಾರ ಈಗ ಸಿಐಡಿ ತನಿಖೆಯಿಂದ ಬಯಲಾಗಿದೆ.
ಅಚ್ಚರಿಯ ವಿಚಾರವೆಂದರೆ, ಈ ದುಬಾರಿ ಚಿನ್ನಾಭರಣದ ಬಿಲ್ ಪಾವತಿಯಾಗಿರುವುದು ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟಣದ ಓಂ ಲಕ್ಷ್ಮಿ ಸೌಹಾರ್ದ ಸಹಕಾರಿ ಬ್ಯಾಂಕ್ ಅಧ್ಯಕ್ಷರ ಖಾತೆಯಿಂದ ಎಂಬುದು ಪ್ರಕರಣದ ಗಂಭೀರತೆಯನ್ನ ಮತ್ತಷ್ಟು ಹೆಚ್ಚಿಸಿದೆ.

ಭಾಲ್ಕಿ ಪಟ್ಟಣದ ಓಂ ಲಕ್ಷ್ಮಿ ಸೌಹಾರ್ದ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಓಂಕಾರ ಕನಶೆಟ್ಟಿ ಅವರ ವೈಯಕ್ತಿಕ ಖಾತೆಯಿಂದಲೇ ಬೆಂಗಳೂರಿನ ಪ್ರತಿಷ್ಠಿತ ಚಿನ್ನದ ಅಂಗಡಿಗೆ 15 ಲಕ್ಷ ರೂಪಾಯಿ ಹಣ ವರ್ಗಾವಣೆಯಾಗಿರುವುದು ದೃಢಪಟ್ಟಿದೆ.
ಈ ಕುರಿತು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ಓಂಕಾರ ಕನಶೆಟ್ಟಿ, "ಆರೋಪಿ ಜ್ಞಾನೇಂದ್ರ ಕುಮಾರ್ ಯಾರೆಂಬುದೇ ನನಗೆ ತಿಳಿದಿಲ್ಲ. ಆದರೆ, ಬಸವರಾಜ್ ಕಣ್ಣಾಳೆ ಎಂಬುವವರು ನನ್ನ ಖಾತೆಗೆ 70 ಲಕ್ಷ ರೂಪಾಯಿ ಹಣ ಜಮೆ ಮಾಡಿದ್ದರು. ಕೃಷಿ ಭೂಮಿ ಮಾರಾಟ ಮತ್ತು ಕಮಿಷನ್ ದಂಧೆಗೆ ಸಂಬಂಧಿಸಿದ ಹಣ ಅದಾಗಿತ್ತು. ಕಣ್ಣಾಳೆ ಅವರು ಫೋನ್ ಮಾಡಿ ಹೇಳಿದ ಸೂಚನೆಯ ಮೇರೆಗೆ ನಾನು 15 ಲಕ್ಷ ರೂಪಾಯಿಗಳನ್ನು ಚಿನ್ನದ ಅಂಗಡಿಯ ಖಾತೆಗೆ ವರ್ಗಾವಣೆ ಮಾಡಿದ್ದೇನೆ" ಎಂದು ತಿಳಿಸಿದ್ದಾರೆ. ಬ್ಯಾಂಕ್‌ನಲ್ಲಿ ಕಣ್ಣಾಳೆ ಹೆಸರಿನಲ್ಲಿ ಯಾವುದೇ ಖಾತೆ ಇಲ್ಲ ಎಂದಿರುವ ಅವರು, ಈ ವಹಿವಾಟಿನ ಕುರಿತು ಸಿಐಡಿ ಅಧಿಕಾರಿಗಳ ಮುಂದೆ ಸಂಪೂರ್ಣ ಮಾಹಿತಿ ನೀಡುವುದಾಗಿ ಹೇಳಿದ್ದಾರೆ.
23 ಲಕ್ಷ ಮೌಲ್ಯದ ಚಿನ್ನ ಜಪ್ತಿ
ಕೆಪಿಎಸ್‌ಸಿ ಅಕ್ರಮದಿಂದ ಬಂದ ಹಣದಲ್ಲಿ ಜ್ಞಾನೇಂದ್ರ ಕುಮಾರ್ ತನ್ನ ಗೆಳತಿಯನ್ನ ಬೆಂಗಳೂರಿನ ಡಿಕನ್ಸನ್ ರಸ್ತೆಯಲ್ಲಿರುವ ಜ್ಯುವೆಲ್ಲರಿ ಶಾಪ್‌ಗೆ ಕರೆದೊಯ್ದು ಆಭರಣ ಕೊಡಿಸಿದ್ದನು. ಇದನ್ನ ಬೆನ್ನತ್ತಿದ ಸಿಐಡಿ ಅಧಿಕಾರಿಗಳು, ಮೊದಲು ಆ ಚಿನ್ನದ ಅಂಗಡಿಗೆ ಭೇಟಿ ನೀಡಿ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳು ಹಾಗೂ ಬಿಲ್ ಅನ್ನ ವಶಕ್ಕೆ ಪಡೆದಿದ್ದಾರೆ. ಇದೀಗ ಕಾರ್ಯಾಚರಣೆ ಮುಂದುವರಿಸಿ, ಜ್ಞಾನೇಂದ್ರನ ಗೆಳತಿಯ ಬಳಿಯಿದ್ದ ಆ ಎಲ್ಲಾ 23 ಲಕ್ಷ ಮೌಲ್ಯದ ಒಡವೆಗಳನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಹಗರಣದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರ ಹೆಜ್ಜೆ ಗುರುತುಗಳನ್ನ ಅಧಿಕಾರಿಗಳು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.
5 ಕೋಟಿ ಕಪ್ಪು ಹಣದ ವಹಿವಾಟು: 273 ಮಂದಿಯ ವಿಚಾರಣೆ
ಪಶುವೈದ್ಯಾಧಿಕಾರಿ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಬರೋಬ್ಬರಿ 5 ಕೋಟಿ ರೂಪಾಯಿಗಳ ಕಪ್ಪು ಹಣದ ವಹಿವಾಟು ನಡೆದಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಅಲ್ಲದೆ, ವಿವಿಧ ಬ್ಯಾಂಕ್ ಖಾತೆಗಳಿಗೆ 85 ಲಕ್ಷ ರೂಪಾಯಿ ವರ್ಗಾವಣೆಯಾಗಿರುವುದು ಕೂಡ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಈಗಾಗಲೇ 273 ಮಂದಿಯನ್ನ ವಿಚಾರಣೆಗೆ ಒಳಪಡಿಸಿದ್ದು, ಈ ಪೈಕಿ 12 ಅಭ್ಯರ್ಥಿಗಳು ಸೇರಿದಂತೆ ಹಲವು ಆರೋಪಿಗಳು ಅಕ್ರಮ ಎಸಗಿರುವುದನ್ನ ಒಪ್ಪಿಕೊಂಡಿದ್ದಾರೆ.
ಮತ್ತೋರ್ವ ಪ್ರಮುಖ ಆರೋಪಿ ಬಸವರಾಜ್ ಕಣ್ಣಾಳೆ ಬಂಧನಕ್ಕೆ ಬಲೆ ಬೀಸಲಾಗಿದ್ದು, ಆತ ಶೀಘ್ರದಲ್ಲೇ ಸಿಕ್ಕಿಬೀಳುವ ಸಾಧ್ಯತೆಯಿದೆ. ಇದೇ ವೇಳೆ, ಕೆಪಿಎಸ್‌ಸಿ ಮಾಜಿ ಸದಸ್ಯ ಹಂಸ ಹುಸೇನ ಅವರು ವಿಚಾರಣೆಗೆ ಗೈರಾದ ಹಿನ್ನೆಲೆಯಲ್ಲಿ, ಅವರಿಗೆ ಮತ್ತೊಮ್ಮೆ ನೋಟಿಸ್ ಜಾರಿ ಮಾಡಲು ಸಿಐಡಿ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.


Click it and Unblock the Notifications
