ಸಾಲು ಸಾಲು ಹಗರಣಗಳ ಸುಳಿಯಲ್ಲಿ KPSC: 33 ಇಲಾಖೆಗಳ 5341 ಹುದ್ದೆಗಳ ನೇಮಕಾತಿ ಜವಾಬ್ದಾರಿ ಈಗ KEA ಹೆಗಲಿಗೆ
ದಶಕಗಳ ಕಾಲ ರಾಜ್ಯದ ಯುವಜನರ ಸರ್ಕಾರಿ ಉದ್ಯೋಗದ ಕನಸು ನನಸು ಮಾಡುತ್ತಿದ್ದ ಕರ್ನಾಟಕ ಲೋಕಸೇವಾ ಆಯೋಗ ( ಕೆಪಿಎಸ್ ಸಿ) ಇಂದು ತನ್ನ ಅಸ್ತಿತ್ವವನ್ನ ಕಳೆದುಕೊಳ್ಳುವ ಹಾದಿಯಲ್ಲಿದೆ.
ಹೌದು, ಕೆಪಿಎಸ್‌ಸಿ ಆಯೋಗದ ನೇಮಕಾತಿಯಲ್ಲಿ ನಡೆಯುತ್ತಿರುವ ಸಾಲು ಸಾಲಾಗಿ ಹಗರಣ ಹಾಗೂ ಅಕ್ರಮಗಳಿಂದಾಗಿ ಸರ್ಕಾರವು ಆಯೋಗದ ಬಹುಪಾಲು ನೇಮಕಾತಿ ಪ್ರಕ್ರಿಯೆಗಳಿಗೆ ಕಡಿವಾಣ ಹಾಕಿದೆ. ಇದರ ಬದಲು, ಈ ಮಹತ್ವದ ಜವಾಬ್ದಾರಿಯನ್ನ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ವಹಿಸಲು ಸರ್ಕಾರ ಮುಂದಾಗಿದ್ದು, ಕೆಪಿಎಸ್‌ಸಿ ಇದೀಗ ಕೆಲಸವಿಲ್ಲದೆ ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕೆಇಎ ನೇಮಕಾತಿ ಹೊಣೆ: 33 ಇಲಾಖೆಗಳ 5,341 ಹುದ್ದೆಗಳಿಗೆ ಪರೀಕ್ಷೆ
ಸಾಮಾನ್ಯವಾಗಿ ಕೆಪಿಎಸ್‌ಸಿ ಪ್ರತಿ ವರ್ಷ 20ಕ್ಕೂ ಹೆಚ್ಚು ಅಧಿಸೂಚನೆಗಳನ್ನ ಹೊರಡಿಸುತ್ತಿತ್ತು. ಆದ್ರೆ, ಇದೇ ಮೊದಲ ಬಾರಿಗೆ 33 ವಿವಿಧ ಸರ್ಕಾರಿ ಇಲಾಖೆಗಳ 5,341 ಹುದ್ದೆಗಳ ಭರ್ತಿ ಜವಾಬ್ದಾರಿಯನ್ನ ಕೆಇಎ ಹೆಗಲಿಗೆ ಹಾಕಲಾಗಿದೆ. ಈ ಹಿಂದೆ ಕೆಇಎ ಕೇವಲ ಬೆರಳೆಣಿಕೆಯ ಇಲಾಖೆಗಳ ಪರೀಕ್ಷೆಗಳನ್ನ ಮಾತ್ರ ನಡೆಸುತ್ತಿತ್ತು.
ಆದರೆ, ಕಳೆದ ಆರು ತಿಂಗಳಿಂದ ಪೊಲೀಸ್ ಕಾನ್‌ಸ್ಟೇಬಲ್, ಗ್ರಾಮ ಆಡಳಿತಾಧಿಕಾರಿ (ವಿಎಒ), ಭೂಮಾಪನ, ಕೃಷಿ, ತೋಟಗಾರಿಕೆ ಹಾಗೂ ಜೂನಿಯರ್ ಇಂಜಿನಿಯರ್ ಸೇರಿ ಅನೇಕ ಪ್ರಮುಖ ನೇಮಕಾತಿ ಪ್ರಕ್ರಿಯೆಗಳು ಕೆಇಎ ಮೂಲಕವೇ ನಡೆಯುತ್ತಿವೆ.
ಕರ್ನಾಟಕ ಸರ್ಕಾರಿ ಉದ್ಯೋಗ: ಯುವಜನರ ನಂಬಿಕೆ ಉಳಿಸುವ ಯತ್ನ
2022ರಿಂದ ಈಚೆಗೆ ಕೆಪಿಎಸ್‌ಸಿ ನಡೆಸಿದ ಬಹುತೇಕ ಪರೀಕ್ಷೆಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ, ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದಂತಹ ಗಂಭೀರ ಆರೋಪಗಳು ಕೇಳಿಬಂದಿವೆ. ಆಯೋಗದ ಉನ್ನತ ಮಟ್ಟದ ಅಧಿಕಾರಿಗಳ ವಿರುದ್ಧವೂ ದೂರುಗಳು ದಾಖಲಾಗಿವೆ.
ಈ ಬೆಳವಣಿಗೆಯಿಂದಾಗಿ ಕರ್ನಾಟಕ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿ ಹಗಲಿರುಳು ಓದುತ್ತಿರುವ ಲಕ್ಷಾಂತರ ಅಭ್ಯರ್ಥಿಗಳಲ್ಲಿ ಆತಂಕ ಹಾಗೂ ನಿರಾಸೆ ಮೂಡಿದೆ. ಪಾರದರ್ಶಕತೆ ಕಾಪಾಡುವ ಮತ್ತು ಅಭ್ಯರ್ಥಿಗಳ ವಿಶ್ವಾಸವನ್ನ ಮರಳಿ ಗಳಿಸುವ ಉದ್ದೇಶದಿಂದ ಸರ್ಕಾರ ಈ ಕಠಿಣ ನಿರ್ಧಾರ ಕೈಗೊಂಡಿದೆ.
ಕೆಪಿಎಸ್‌ಸಿ ಪರೀಕ್ಷೆ ರದ್ದು
ನೇಮಕಾತಿಯಲ್ಲಿ ಲೋಪ ಕಂಡುಬಂದಾಗ ಪರೀಕ್ಷೆ ರದ್ದುಗೊಳಿಸಿ ಮರುಪರೀಕ್ಷೆ ನಡೆಸುವುದು ಅನಿವಾರ್ಯವಾಗುತ್ತದೆ. ಉದಾಹರಣೆಗೆ, 2024ರಲ್ಲಿ ನಡೆದ 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಪರೀಕ್ಷೆಯಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದರಿಂದ ಎರಡು ಬಾರಿ ಪರೀಕ್ಷೆ ನಡೆಸಲಾಯಿತು.
ಇದರಿಂದ ಸರ್ಕಾರಕ್ಕೆ 2 ರಿಂದ 3 ಕೋಟಿ ರೂಪಾಯಿಗಳ ಆರ್ಥಿಕ ಹೊರೆ ಬಿದ್ದಿತ್ತು. ಇದರ ಜೊತೆಗೆ, ದೂರದ ಊರುಗಳಿಂದ ಪರೀಕ್ಷೆ ಬರೆಯಲು ಬರುವ ಬಡ ಮತ್ತು ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಪ್ರಯಾಣ, ವಸತಿ ಮತ್ತು ಅರ್ಜಿ ಶುಲ್ಕದ ಹೊರೆಯೂ ದುಪ್ಪಟ್ಟಾಗುತ್ತದೆ.
ಕೆಪಿಎಸ್‌ಸಿ ಮತ್ತು ಕೆಇಎ: ಮುಂದಿನ ದಾರಿ ಏನು?
ಎಲ್ಲಾ ನೇಮಕಾತಿಗಳನ್ನ ಒಂದೇ ಸಂಸ್ಥೆಗೆ ವಹಿಸುವುದರಿಂದ ಕೆಇಎ ಮೇಲೂ ಆಡಳಿತಾತ್ಮಕ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಭವಿಷ್ಯದಲ್ಲಿ ಕೆಪಿಎಸ್‌ಸಿ ಮತ್ತು ಕೆಇಎ ನಡುವೆ ಜವಾಬ್ದಾರಿಗಳನ್ನು ಸಮರ್ಪಕವಾಗಿ ಹಂಚಿಕೆ ಮಾಡುವ ಮೂಲಕ ಪರೀಕ್ಷೆಗಳನ್ನ ನಿಗದಿತ ಸಮಯಕ್ಕೆ, ಯಾವುದೇ ಅಕ್ರಮಗಳಿಲ್ಲದೆ ನಡೆಸುವ ಸವಾಲು ಸರ್ಕಾರದ ಮುಂದಿದೆ.
ಒಂದು ವೇಳೆ ಕೆಪಿಎಸ್‌ಸಿ ತನ್ನ ವ್ಯವಸ್ಥೆಯನ್ನ ಸರಿಪಡಿಸಿಕೊಳ್ಳದೆ ಹೋದರೆ, ಮುಂದಿನ ದಿನಗಳಲ್ಲಿ ಆಯೋಗವು ಸಂಪೂರ್ಣವಾಗಿ ನೇಪಥ್ಯಕ್ಕೆ ಸರಿಯುವುದು ಖಚಿತ.


Click it and Unblock the Notifications
