KPSC: ಕೆಪಿಎಸ್‌ಸಿ ಮರುಪರೀಕ್ಷೆಯಲ್ಲೂ ತಪ್ಪು ಅನುವಾದ, ಫೆ.18ಕ್ಕೆ ಬೃಹತ್‌ ಪ್ರತಿಭಟನೆಗೆ ಕರೆ

ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸಿರುವ ಕೆಎಎಸ್‌ ಮರು ಪರೀಕ್ಷೆಯಲ್ಲೂ ಕನ್ನಡಾನುವಾದದ ಎಡವಟ್ಟು ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆಯು (ಕರವೇ) ಇದೇ ಫೆಬ್ರವರಿ 18ರಂದು ಬೆಂಗಳೂರಿನಲ್ಲಿ ದೊಡ್ಡ ಹೋರಾಟವನ್ನು ಹಮ್ಮಿಕೊಂಡಿದೆ. ಕೆಪಿಎಸ್‌ಸಿಯಿಂದ ಅನ್ಯಾಯಕ್ಕೆ ಒಳಗಾದ ಸಾವಿರಾರು ವಿದ್ಯಾರ್ಥಿಗಳು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದೆ.

ಈ ಹಿಂದೆ ಪ್ರಶ್ನೆ ಪತ್ರಿಕೆಯಲ್ಲಿ ಕನ್ನಡಾನುವಾದದ ಸಮಸ್ಯೆ ಕಂಡುಬಂದಿದ್ದರಿಂದ ಆದ ಅನ್ಯಾಯದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಚಳವಳಿ ಹಮ್ಮಿಕೊಂಡಿತ್ತು. ನಮ್ಮ ಚಳವಳಿಗೆ ಸ್ಪಂದಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮರುಪರೀಕ್ಷೆಗೆ ಆದೇಶಿಸಿದ್ದರು. ಮುಖ್ಯಮಂತ್ರಿಗಳ ತೀರ್ಮಾನವನ್ನು ನಾವೆಲ್ಲ ಒಕ್ಕೊರಲಿನಿಂದ ಅಭಿನಂದಿಸಿದ್ದೆವು ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಹೇಳಿದ್ದಾರೆ.

KPSC KAS Re-Exam Translation Error Sparks Protest In Bengaluru

ಆದರೆ, ಮರುಪರೀಕ್ಷೆಯಲ್ಲೂ ಕನ್ನಡಾನುವಾದದ ಸಮಸ್ಯೆ ಮತ್ತೆ ಕಂಡುಬಂದಿದೆ. ಹೋರಾಟದ ಸಂದರ್ಭದಲ್ಲಿ ನಾವು ಕನ್ನಡದಲ್ಲೇ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ನಂತರ ಅದನ್ನು ಇಂಗ್ಲಿಷ್‌ಗೆ ಅನುವಾದಿಸುವಂತೆ ಆಗ್ರಹಿಸಿದ್ದೆವು. ಕರ್ನಾಟಕದ ಆಡಳಿತ ಭಾಷೆ ಕನ್ನಡವಾದ್ದರಿಂದ ಇದೇ ಸಹಜವಾಗಿ ನಡೆಯಬೇಕಿತ್ತು. ಆದರೆ ದುರಂಹಕಾರಿ ಅಧಿಕಾರಿಗಳಿಂದಾಗಿ ಮತ್ತೆ ಇಂಗ್ಲಿಷ್‌ನಲ್ಲಿ ಪ್ರಶ್ನೆ ಪತ್ರಿಕೆ ತಯಾರಿಸಿ, ಕನ್ನಡಕ್ಕೆ ತಪ್ಪು ತಪ್ಪಾಗಿ ಅನುವಾದಿಸಲಾಗಿದೆ. ಇದರಿಂದಾಗಿ ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳಿಗೆ ವಂಚನೆ ಎಸಗಲಾಗಿದೆ ಎಂದು ದೂರಿದ್ದಾರೆ.

ಈಗ ಫಲಿತಾಂಶದಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ತೀರಾ ಕನಿಷ್ಟ ಪ್ರಮಾಣದಲ್ಲಿ ಉತ್ತೀರ್ಣರಾಗಿದ್ದಾರೆ ಎಂಬ ಮಾಹಿತಿ ಇದೆ. ಇದಕ್ಕೆ ಕೆಟ್ಟದಾಗಿ ಸಿದ್ಧಪಡಿಸಿದ ಕನ್ನಡಾನುವಾದದ ಪ್ರಶ್ನೆ ಪತ್ರಿಕೆಗಳೇ ಕಾರಣ ಎಂದು‌ ಕನ್ನಡದ ವಿದ್ಯಾರ್ಥಿಗಳು ಹೇಳುತ್ತಿದ್ದಾರೆ. ಇವರೆಲ್ಲ ಗ್ರಾಮೀಣ ಭಾಗದ ವಿದ್ಯಾರ್ಥಿಗಳು, ಸಾಮಾಜಿಕವಾಗಿ ಹಿಂದುಳಿದ ಜನವರ್ಗಗಳಿಂದ ಬಂದವರು, ಇಂಥವರಿಗೆ ಅನ್ಯಾಯವಾಗುತ್ತಿದ್ದರೂ ಸರ್ಕಾರ ಮೌನವಾಗಿ ಕುಳಿತುಕೊಳ್ಳಲು ಹೇಗೆ ಸಾಧ್ಯ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

KPSC KAS Re-Exam Translation Error Sparks Protest In Bengaluru

ಅನ್ಯಾಯಕ್ಕೆ ಒಳಗಾದ ಹಲವಾರು ವಿದ್ಯಾರ್ಥಿಗಳು ಪ್ರತಿನಿತ್ಯ ನನ್ನೊಂದಿಗೆ ಮಾತನಾಡುತ್ತಿದ್ದಾರೆ. ಅವರ ಸಂಕಟಗಳನ್ನು ಹೇಳುತ್ತಿದ್ದಾರೆ. ಅವರ ಭವಿಷ್ಯದ ಬದುಕು ಬೀದಿಗೆ ಬಿದ್ದಂತಾಗಿದೆ. ಎಷ್ಟೋ ವರ್ಷಗಳಿಂದ ಅವರು ಈ ಪರೀಕ್ಷೆಗಾಗಿ ಸಿದ್ಧತೆ ನಡೆಸಿದ್ದರು. ಇದಕ್ಕಾಗಿ ಅವರ ಪೋಷಕರೂ ತ್ಯಾಗ ಮಾಡಿದ್ದಾರೆ. ಈ ಪರೀಕ್ಷೆಯಲ್ಲಿ ಅವರು ಅನುತ್ತೀರ್ಣಗೊಂಡರೆ, ಬಹುತೇಕರು ವಯೋಮಿತಿಯ ಕಾರಣಕ್ಕೆ ಮುಂದೆ ಇನ್ನೊಂದು ಪರೀಕ್ಷೆ ಬರೆಯಲು ಸಾಧ್ಯವಿಲ್ಲ. ಯಾರೋ ದುಷ್ಟ ಅಧಿಕಾರಿಗಳು ಮಾಡಿದ ದ್ರೋಹಕ್ಕೆ ಅವರ ಬದುಕು ನರಕವಾಗಿದೆ ಎಂದು ಹರಿಹಾಯ್ದಿದ್ದಾರೆ.

ಪರೀಕ್ಷೆ ಬರೆದವರಿಗೆಲ್ಲ ಕೆಎಎಸ್ ಹುದ್ದೆ ಲಭಿಸುವುದಿಲ್ಲ. ಆದರೆ, ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದ ಲಕ್ಷಾಂತರ ವಿದ್ಯಾರ್ಥಿಗಳನ್ನು ಬೇಕೆಂದೇ ತಪ್ಪುತಪ್ಪಾದ ಪ್ರಶ್ನೆ ಪತ್ರಿಕೆ ಕೊಟ್ಟು, ಅಂಕಗಳಿಸಿದಂತೆ ತಡೆಯಲಾಯಿತು ಎಂಬ ಅನ್ಯಾಯ ಪ್ರಜ್ಞೆ ಅವರನ್ನು ಕೊನೆಯವರೆಗೂ ಬಾಧಿಸಲಿದೆ. ಅಧಿಕಾರಿಗಳಾಗುವ ನಮ್ಮ ಆಸೆಗೆ ರಾಜ್ಯ ಸರ್ಕಾರವೇ ತಣ್ಣೀರೆರಚಿತು, ನಮಗೆ ಮೋಸ ಮಾಡಿತು ಎಂದು ಅವರು ಭಾವಿಸುತ್ತಾರೆ, ಇದು ಬೇಕಾಗಿರಲಿಲ್ಲ. ಇದಕ್ಕೆ ನೇರವಾಗಿ ಕೆಪಿಎಸ್‌ಸಿ ಮತ್ತು ರಾಜ್ಯ ಸರ್ಕಾರವೇ ಹೊಣೆ. ಇದನ್ನು ಸರಿಪಡಿಸುವ ಜವಾಬ್ದಾರಿಯನ್ನೂ ಸರ್ಕಾರವೇ ಹೊರಬೇಕಿದೆ ಎಂದು ಎಚ್ಚರಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹಿಂದೆ ಮಾಡಿದಂತೆ ಕೂಡಲೇ ಮಧ್ಯೆ ಪ್ರವೇಶಿಸಿ, ಈ ಫಲಿತಾಂಶವನ್ನು ತಡೆಹಿಡಿಯಬೇಕು. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯ ಸರಿಪಡಿಸಲು ಪರಿಹಾರ ಸೂತ್ರವನ್ನು ರೂಪಿಸಬೇಕು. ತಪ್ಪಿತಸ್ಥ ಅಧಿಕಾರಿಗಳ ಮೇಲೆ ಮೊಕದ್ದಮೆ ಹೂಡಿ ಜೈಲಿಗೆ ಕಳಿಸಬೇಕು. ಕೆಪಿಎಸ್‌ಸಿ ನಡೆಸಿರುವ ಕೆಎಎಸ್ ಪರೀಕ್ಷೆಗಳಲ್ಲಿ ಮತ್ತೆ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ‌ ಫೆ.18ರಂದು ಬೆಂಗಳೂರಿನಲ್ಲಿ ಹೋರಾಟ ಹಮ್ಮಿಕೊಂಡಿದೆ. ಸಾಂಕೇತಿಕ ಪ್ರತಿಭಟನೆಯಲ್ಲೇ ಹತ್ತಾರು ಸಾವಿರ ಮಂದಿ ನೆರೆಯುತ್ತಿದ್ದಾರೆ. ಅನ್ಯಾಯ ಸರಿಪಡಿಸದೇ ಹೋದಲ್ಲಿ ಅದರ ಪರಿಣಾಮ ಗಂಭೀರವಾಗಿರುತ್ತದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+