Cabinet Meeting: ಸಚಿವ ಸಂಪುಟ ಸಭೆಯಲ್ಲಿ KPSC ಪರೀಕ್ಷೆ ಬಗ್ಗೆ ಮಹತ್ವದ ನಿರ್ಣಯ?
ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಿಗೆ ನಡೆಸಿದ ಮರುಪರೀಕ್ಷೆಯಲ್ಲೂ ಲೋಪಗಳು ಕಂಡುಬಂದ ಹಿನ್ನೆಲೆ ಪರೀಕ್ಷೆ ರದ್ದು ಮಾಡುವ ಆಗ್ರಹ ಕೇಳಿಬಂದಿದೆ. ಇಂದು ನಡೆಯಲಿರುವ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆಯಲ್ಲಿ ಅಭ್ಯರ್ಥಿಗಳು ಇದ್ದಾರೆ. ಒಂದು ವೇಳೆ ಸರ್ಕಾರ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳದಿದ್ದರೆ ನಮ್ಮ ಹೋರಾಟದ ವರಸೆಯೇ ಬದಲಾಗಲಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಎಚ್ಚರಿಕೆ ನೀಡಿದ್ದಾರೆ.
ಇಂದು ಸಂಜೆ ರಾಜ್ಯ ಸಚಿವ ಸಂಪುಟದ ಸಭೆ ನಡೆಯುತ್ತಿದೆ. 70 ಸಾವಿರಕ್ಕೂ ಹೆಚ್ಚು ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯದ ಕುರಿತು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸರಿಯಾದ ತೀರ್ಮಾನ ತೆಗೆದುಕೊಳ್ಳುತ್ತದೆ ಎಂಬ ವಿಶ್ವಾಸ ನನ್ನದು. ಸಭೆಯಲ್ಲಿ ಸರಿಯಾದ ತೀರ್ಮಾನ ಆಗದೇ ಹೋದಲ್ಲಿ, ಪರಿಸ್ಥಿತಿ ಕೈ ಮೀರಬಹುದು. ಅದಕ್ಕೆ ನಾನು ಹೊಣೆಯಲ್ಲ ಎಂದು ನಾರಾಯಣಗೌಡ ಹೇಳಿದ್ದಾರೆ.

ಈಗಾಗಲೇ ಎಲ್ಲ ಸಚಿವರಿಗೂ ಆಗಿರುವ ಪ್ರಮಾದದ ಅರಿವಾಗಿದೆ. ಹೀಗಾಗಿ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಿಗೆ ಈಗ ಆಗಿರುವ ಪೂರ್ವಭಾವಿ ಪರೀಕ್ಷೆ ರದ್ದುಗೊಳಿಸಿ, ಹೊಸದಾಗಿ ಅಧಿಸೂಚನೆ ಹೊರಡಿಸುವ ತೀರ್ಮಾನ ತೆಗೆದುಕೊಳ್ಳಬಹುದು ಎಂಬ ನಿರೀಕ್ಷೆಯಲ್ಲಿದ್ದೇನೆ. 7ನೇ ತಾರೀಖಿನಿಂದ ಅನ್ಯಾಯಕ್ಕೆ ಒಳಗಾದ ಅಭ್ಯರ್ಥಿಗಳು, ಅವರ ಪೋಷಕರು ಬೆಂಗಳೂರಿಗೆ ಬರಲಿದ್ದಾರೆ. ನಮ್ಮ ಹೋರಾಟದ ವರಸೆ ಬದಲಾಗುತ್ತದೆ. ದಯವಿಟ್ಟು ಯಾರೂ ನಮ್ಮನ್ನು ದೂರಬೇಡಿ ಎಂದು ಎಚ್ಚರಿಸಿದ್ದಾರೆ.
ಕೆಪಿಎಸ್‌ಸಿಯಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂಬುದು ತಿಳಿದ ನಂತರ ಕರ್ನಾಟಕ ರಕ್ಷಣಾ ವೇದಿಕೆ ನಿರಂತರ ಹೋರಾಟ ಸಂಘಟಿಸುತ್ತಾ ಬಂದಿದೆ. ನಮ್ಮೆಲ್ಲರ ಹೋರಾಟದ ಫಲವಾಗಿಯೇ ಮುಖ್ಯಮಂತ್ರಿಗಳು ಈ ಹಿಂದೆ ಮರುಪರೀಕ್ಷೆಗೆ ಆದೇಶಿಸಿದ್ದರು. ಆದರೆ, ಹೊಣೆಹೇಡಿತನದ ಪರಮಾವಧಿ ಎಂಬಂತೆ ಕೆಪಿಎಸ್‌ಸಿ ಮೊದಲ ಬಾರಿ ಮಾಡಿದ್ದ ತಪ್ಪುಗಳಿಂತ ಹೆಚ್ಚು ತಪ್ಪುಗಳನ್ನು ಮರುಪರೀಕ್ಷೆಯಲ್ಲಿ ಮಾಡಿದೆ ಎಂದು ದೂರಿದ್ದಾರೆ.

ಮರುಪರೀಕ್ಷೆಯ ಎರಡೂ ಪ್ರಶ್ನೆಪತ್ರಿಕೆಗಳಲ್ಲಿ 80 ತಪ್ಪುಗಳಾಗಿವೆ. ಇದರಿಂದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಮತ್ತೆ ಸಂಕಷ್ಟಕ್ಕೆ ಸಿಲುಕಿದಾಗ ಕರ್ನಾಟಕ ರಕ್ಷಣಾ ವೇದಿಕೆ ಹೋರಾಟಕ್ಕೆ ಇಳಿಯಿತು. ಫ್ರೀಡಂಪಾರ್ಕ್‌ನಲ್ಲಿ ನಡೆದ ಪ್ರತಿಭಟನೆಗೆ ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಬಂದಿದ್ದರು. ನಾನು ಮೂರುಬಾರಿ ಮುಖ್ಯಮಂತ್ರಿಗಳನ್ನು ಖುದ್ದಾಗಿ ಭೇಟಿ ಮಾಡಿ ಮಾತನಾಡಿದ್ದೇನೆ. ಸಚಿವರು, ಶಾಸಕರ ಜೊತೆ ಮಾತಾಡಿದೆ, ವಿರೋಧ ಪಕ್ಷದ ನಾಯಕರ ಜೊತೆಯೂ ಮಾತಾಡಿದ್ದೇನೆ ಎಂದಿದ್ದಾರೆ.
ಕೆಪಿಎಸ್‌ಸಿ ಕುರಿತಾದ ಈ ಹೋರಾಟದಲ್ಲಿ ನಾವು ಪ್ರಜಾಪ್ರಭುತ್ವ ಮಾರ್ಗದ ಎಲ್ಲ ಹೋರಾಟದ ವಿಧಾನಗಳನ್ನು ಬಳಸಿದ್ದೇವೆ. ಕೊನೆಗೆ ಮುಖ್ಯಮಂತ್ರಿಗಳ ಮನಸ್ಸು ಕರಗಲಿ ಎಂದು ರಕ್ತದಲ್ಲೂ ಪತ್ರ ಬರೆದಿದ್ದೇವೆ. ನಾನು ಕೂಡ ನನ್ನ ರಕ್ತದಲ್ಲೇ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ. ಇವತ್ತು ಸಂಪುಟ ಸಭೆಯಲ್ಲಿ ಸರಿಯಾದ ತೀರ್ಮಾನ ಆಗದೇ ಹೋದಲ್ಲಿ ಪರಿಸ್ಥಿತಿ ಕೈ ಮೀರಬಹುದು. ಅದಕ್ಕೆ ನಾನು ಹೊಣೆಯಲ್ಲ. ಸರ್ಕಾರ ಪರಿಸ್ಥಿತಿ ಕೈ ಮೀರಿ ಹೋಗುವುದಕ್ಕೆ ಅವಕಾಶ ನೀಡದೆ, ಸರಿಯಾದ ನಿರ್ಧಾರ ಕೈಗೊಳ್ಳಲಿ ಎಂದು ಆಶಿಸುತ್ತೇನೆ ಎಂದು ನಾರಾಯಣಗೌಡ ಸಲಹೆ ನೀಡಿದ್ದಾರೆ.












Click it and Unblock the Notifications