KPSC ಇತಿಹಾಸದಲ್ಲೇ ಮೊದಲು: UPSC ಮಾದರಿಯಲ್ಲಿ 319 'ಗೆಜೆಟೆಡ್ ಪ್ರೊಬೇಷನರಿ' ಹುದ್ದೆಗಳ ನೇಮಕಾತಿ

ರಾಜ್ಯದ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಲಕ್ಷಾಂತರ ಆಕಾಂಕ್ಷಿಗಳಿಗೆ ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ಭರ್ಜರಿ ಸಿಹಿಸುದ್ದಿ ನೀಡಿದೆ. ಈವರೆಗೆ ನೇಮಕಾತಿ ವಿಳಂಬ, ಅಕ್ರಮ ಹಾಗೂ ಸ್ವಜನಪಕ್ಷಪಾತದಂತಹ ಗಂಭೀರ ಆರೋಪಗಳ ಸುಳಿಯಲ್ಲಿ ಸಿಲುಕಿದ್ದ ಕೆಪಿಎಸ್‌ಸಿ, ಇದೇ ಮೊದಲ ಬಾರಿಗೆ ಕೇಂದ್ರ ಲೋಕಸೇವಾ ಆಯೋಗದ ಮಾದರಿಯನ್ನು ಅಳವಡಿಸಿಕೊಂಡು ಒಂದು ಒಳ್ಳೆಯ ಬದಲಾವಣೆಗೆ ಮುಂದಾಗಿದೆ.

2026-27ನೇ ಸಾಲಿನ 39 ಕೆಎಎಸ್ ಹುದ್ದೆಗಳು ಸೇರಿದಂತೆ ಒಟ್ಟು 319 ಗೆಜೆಟೆಡ್ ಪ್ರೊಬೇಷನರಿ ಅಂದರೆ ಗ್ರೂಪ್ 'ಎ' ಮತ್ತು 'ಬಿ' ಹುದ್ದೆಗಳ ಭರ್ತಿಗೆ ಆಯೋಗವು ಶುಕ್ರವಾರ (ಜುಲೈ 31) ಅಧಿಕೃತ ಅಧಿಸೂಚನೆ ಹೊರಡಿಸಲಿದೆ. ಗುರುವಾರ ನಡೆದ ಆಯೋಗದ ತುರ್ತು ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ.

KPSC

319 ಹುದ್ದೆಗಳ ವಿವರ ಮತ್ತು ಅರ್ಜಿ ಸಲ್ಲಿಕೆ ದಿನಾಂಕ

ರಾಜ್ಯ ಸರ್ಕಾರಿ ಸೇವೆಯಲ್ಲಿ ಅತ್ಯುನ್ನತ ಹುದ್ದೆಗಳಾಗಿರುವ ಗೆಜೆಟೆಡ್ ಪ್ರೊಬೇಷನರಿ ನೇಮಕಾತಿ ಪ್ರಕ್ರಿಯೆಯು ಈ ಬಾರಿ ಅತ್ಯಂತ ವೇಗವಾಗಿ ಹಾಗೂ ಪಾರದರ್ಶಕವಾಗಿ ನಡೆಯಲಿದೆ. ಒಟ್ಟು 319 ಹುದ್ದೆಗಳ ಪೈಕಿ 117 ಗ್ರೂಪ್ 'ಎ' ಹಾಗೂ 202 ಗ್ರೂಪ್ 'ಬಿ' ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಪ್ರಮುಖ ಹುದ್ದೆಗಳ ವಿವರ: ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರು (50 ಹುದ್ದೆಗಳು), ಕಾರ್ಯನಿರ್ವಾಹಕ ಅಧಿಕಾರಿ (15), ತಹಶೀಲ್ದಾರ್ ಗ್ರೇಡ್-2 (25), ವಾಣಿಜ್ಯ ತೆರಿಗೆ ಅಧಿಕಾರಿ (74), ಹಾಗೂ ಮುಖ್ಯಾಧಿಕಾರಿ ಗ್ರೇಡ್-1 (20) ಹುದ್ದೆಗಳು ಇದರಲ್ಲಿ ಸೇರಿವೆ.

ಅರ್ಜಿ ಸಲ್ಲಿಕೆ ದಿನಾಂಕ: ಅಭ್ಯರ್ಥಿಗಳು ಇದೇ ಆಗಸ್ಟ್ 1ರಿಂದ ಆಗಸ್ಟ್ 30ರವರೆಗೆ ಕೆಪಿಎಸ್‌ಸಿ ಅಧಿಕೃತ ಜಾಲತಾಣದ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಪ್ರಸ್ತುತ ಜಾರಿಯಲ್ಲಿರುವ ಮೀಸಲಾತಿ ನಿಯಮಗಳನ್ನ ಅನುಸರಿಸಿ ಹುದ್ದೆಗಳನ್ನ ವರ್ಗೀಕರಿಸಲಾಗಿದೆ.

ಕೇವಲ 10 ತಿಂಗಳಲ್ಲಿ ನೇಮಕಾತಿ ಪೂರ್ಣಗೊಳಿಸಲು ವೇಳಾಪಟ್ಟಿ ಪ್ರಕಟ

ಸಾಮಾನ್ಯವಾಗಿ ವರ್ಷಗಳ ಕಾಲ ಎಳೆಯುತ್ತಿದ್ದ ನೇಮಕಾತಿ ಪ್ರಕ್ರಿಯೆಗೆ ಮುಕ್ತಿ ಹಾಡಲು ಆಯೋಗ ನಿರ್ಧರಿಸಿದೆ. ಈ ಕುರಿತು ಪ್ರಜಾವಾಣಿಗೆ ಮಾಹಿತಿ ನೀಡಿರುವ ಕೆಪಿಎಸ್‌ಸಿ ಕಾರ್ಯದರ್ಶಿ ಕೆ. ಜ್ಯೋತಿ ಅವರು, 'ಯುಪಿಎಸ್‌ಸಿ ಮಾದರಿಯಲ್ಲೇ ಕೇವಲ ಹತ್ತೂವರೆ ತಿಂಗಳ ಅವಧಿಯಲ್ಲಿ ಇಡೀ ನೇಮಕಾತಿ ಪ್ರಕ್ರಿಯೆ ಮುಗಿಸಲು ಸ್ಪಷ್ಟ ವೇಳಾಪಟ್ಟಿ ಸಿದ್ಧಪಡಿಸಲಾಗಿದೆ' ಎಂದು ತಿಳಿಸಿದ್ದಾರೆ.

ಆಯೋಗವು ಬಿಡುಗಡೆ ಮಾಡಿರುವ ಹೊಸ ವೇಳಾಪಟ್ಟಿ ವಿವರ ಹೀಗಿದೆ:

ಪೂರ್ವಭಾವಿ ಪರೀಕ್ಷೆ (Prelims Exam): 2026ರ ನವೆಂಬರ್ 15

ಪೂರ್ವಭಾವಿ ಪರೀಕ್ಷೆ ಫಲಿತಾಂಶ: 2026ರ ಡಿಸೆಂಬರ್ 15

ಮುಖ್ಯ ಪರೀಕ್ಷೆ (Mains Exam): 2027ರ ಫೆಬ್ರವರಿ 12, 14, 16 ಮತ್ತು 18 (ಒಟ್ಟು 4 ದಿನಗಳು)

ಮುಖ್ಯ ಪರೀಕ್ಷೆಯ ಫಲಿತಾಂಶ: 2027ರ ಏಪ್ರಿಲ್ 27

ವ್ಯಕ್ತಿತ್ವ ಪರೀಕ್ಷೆ (Interview): 2027ರ ಮೇ 10ರಿಂದ ಮೇ 31ರವರೆಗೆ

ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಣೆ: 2027ರ ಜೂನ್ 5

ನಂತರ ಆಕ್ಷೇಪಣೆಗಳನ್ನ ಆಹ್ವಾನಿಸಿ ಜೂನ್ ಅಂತ್ಯದಲ್ಲೇ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲಾಗುತ್ತದೆ.

ಅಕ್ರಮಗಳಿಗೆ ಬ್ರೇಕ್ ಹಾಕಲು ಹೈಟೆಕ್ ಭದ್ರತಾ ಕ್ರಮಗಳು

ಪರೀಕ್ಷೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಕೆಪಿಎಸ್‌ಸಿ ಈ ಬಾರಿ ಕಠಿಣ ಹಾಗೂ ಅತ್ಯಾಧುನಿಕ ತಂತ್ರಜ್ಞಾನಗಳನ್ನ ಅಳವಡಿಸಿಕೊಳ್ಳುತ್ತಿದೆ. ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳ ಒಎಂಆರ್ ಶೀಟ್ ಸ್ಪಷ್ಟವಾಗಿ ಸೆರೆಹಿಡಿಯುವ ರೀತಿಯಲ್ಲಿ ಹೈ-ರೆಸಲ್ಯೂಶನ್ ಸಿಸಿಟಿವಿ ಕ್ಯಾಮೆರಾಗಳನ್ನ ಅಳವಡಿಸಲಾಗುತ್ತದೆ. ನಕಲಿ ಅಭ್ಯರ್ಥಿಗಳನ್ನ ತಡೆಯಲು ಫೇಶಿಯಲ್‌ ರೆಕಗ್ನೀಶನ್‌ ಸಿಸ್ಟಮ್‌ ಹಾಗೂ ಮೊಬೈಲ್ ಜಾಮರ್‌ಗಳನ್ನ ಕಡ್ಡಾಯಗೊಳಿಸಲಾಗಿದೆ.

ಇದಲ್ಲದೆ, ಪರೀಕ್ಷೆ ಮುಗಿದ ತಕ್ಷಣ ಈ ಹಿಂದೆ ಅಂಚೆ ಮೂಲಕ ಉತ್ತರ ಪತ್ರಿಕೆಗಳನ್ನ ರವಾನಿಸುತ್ತಿದ್ದ ಪದ್ಧತಿಯನ್ನ ರದ್ದು ಮಾಡಿದ್ದು, ಇದೀಗ ಪೊಲೀಸ್ ಭದ್ರತೆಯಲ್ಲಿ ಕೆಪಿಎಸ್‌ಸಿ ಕೇಂದ್ರ ಕಚೇರಿಗೆ ನೇರವಾಗಿ ತಲುಪಿಸಲು ವ್ಯವಸ್ಥೆ ಮಾಡಲಾಗಿದೆ. ಕಚೇರಿ ತಲುಪಿದ ತಕ್ಷಣವೇ ಉತ್ತರ ಪತ್ರಿಕೆಗಳ ಸ್ಕ್ಯಾನಿಂಗ್ ಕಾರ್ಯ ಆರಂಭವಾಗಲಿದ್ದು, ಯಾವುದೇ ಅಕ್ರಮಕ್ಕೆ ಆಸ್ಪದ ನೀಡದಂತೆ ಆಯಾ ಜಿಲ್ಲಾಧಿಕಾರಿಗಳ ನೇರ ಉಸ್ತುವಾರಿಯಲ್ಲಿ ಪರೀಕ್ಷೆಗಳನ್ನು ನಡೆಸಲು ಆಯೋಗ ಸಜ್ಜಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+