KPSC ನೇಮಕಾತಿ ಅಕ್ರಮ: 9 ಗಂಟೆಗಳ ವಿಚಾರಣೆ ಬಳಿಕ IAS ಅಧಿಕಾರಿ ಜ್ಞಾನೇಂದ್ರ ಕುಮಾರ್ CID ವಶಕ್ಕೆ
ಕರ್ನಾಟಕ ಲೋಕಸೇವಾ ಆಯೋಗದ ಪಶುವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್ ಇನ್ವೆಸ್ಟಿಗೇಶನ್ ಡಿಪಾರ್ಟ್ಮೆಂಟ್ (ಸಿಐಡಿ) ಮಹತ್ವದ ಕಾರ್ಯಾಚರಣೆ ನಡೆಸಿದೆ. ಪ್ರಕರಣದ ತನಿಖೆಯನ್ನ ತೀವ್ರಗೊಳಿಸಿರುವ ಸಿಐಡಿ ಅಧಿಕಾರಿಗಳು, ಶನಿವಾರದಂದು ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ನೇಮಕಾತಿಗಾಗಿ ಹಗಲಿರುಳು ಶ್ರಮಿಸುವ ಅಭ್ಯರ್ಥಿಗಳಿಗೆ ಈ ಕೆಪಿಎಸ್‌ಸಿ ಹಗರಣ ಆಘಾತ ತಂದಿದ್ದು, ಉನ್ನತ ಅಧಿಕಾರಿಯೇ ಇದೀಗ ತನಿಖಾ ಸಂಸ್ಥೆಯ ಬಲೆಗೆ ಬಿದ್ದಿರುವುದು ರಾಜ್ಯದ ಆಡಳಿತ ವಲಯದಲ್ಲಿ ಸಂಚಲನ ಮೂಡಿಸಿದೆ.

ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರನ್ನು ವಶಕ್ಕೆ ಪಡೆಯುವ ಮುನ್ನ, ಶುಕ್ರವಾರದಂದು ಸಿಐಡಿ ಅಧಿಕಾರಿಗಳು ಸತತ ಒಂಬತ್ತು ಗಂಟೆಗಳ ಕಾಲ ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಸಿಐಡಿ ನೀಡಿದ್ದ ನೋಟಿಸ್‌ಗೆ ಪ್ರತಿಕ್ರಿಯಿಸಿ ಅವರು ವಿಚಾರಣೆಗೆ ಹಾಜರಾಗಿದ್ದರು.
ಆದರೆ, ತನಿಖೆಯ ವೇಳೆ ಅವರು ಅಧಿಕಾರಿಗಳಿಗೆ ಸೂಕ್ತ ರೀತಿಯಲ್ಲಿ ಸಹಕರಿಸಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ. ವಿಚಾರಣೆ ಸಂದರ್ಭದಲ್ಲಿ ಅವರು ಕೇಳಿದ ಪ್ರಶ್ನೆಗಳಿಗೆ ನೇರ ಉತ್ತರ ನೀಡದೆ, ವಿರುದ್ಧವಾದ ಹಾಗೂ ಗೊಂದಲಮಯ ಹೇಳಿಕೆಗಳನ್ನು ನೀಡುವ ಮೂಲಕ ತನಿಖಾಧಿಕಾರಿಗಳನ್ನ ದಾರಿ ತಪ್ಪಿಸಲು ಯತ್ನಿಸಿದ್ದಾರೆ. ಇದೇ ಕಾರಣಕ್ಕಾಗಿ, ಪ್ರಕರಣದ ಸತ್ಯಾಸತ್ಯತೆಯನ್ನ ಹೊರತರಲು ಅವರನ್ನು ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮದಲ್ಲಿ ಪಾತ್ರ?
2016ನೇ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ಜ್ಞಾನೇಂದ್ರ ಕುಮಾರ್, ಫೆಬ್ರವರಿ 2024 ರಿಂದ ಮಾರ್ಚ್ 2026ರವರೆಗೆ ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಣಾಧಿಕಾರಿಯಾಗಿ ಮಹತ್ವದ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದರು. ಅವರ ಅಧಿಕಾರದ ಅವಧಿಯಲ್ಲೇ ಪಶುವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆ ನಡೆದಿದ್ದು, ಇದರಲ್ಲಿ ಭಾರಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಲಾಗಿದೆ. ಪರೀಕ್ಷಾ ದಾಖಲೆಗಳ ನಿರ್ವಹಣೆಯಲ್ಲಿನ ಲೋಪ, ಅಭ್ಯರ್ಥಿಗಳ ಒಎಂಆರ್ ಶೀಟ್‌ಗಳ ತಿರುಚುವಿಕೆ ಹಾಗೂ ಈ ಪ್ರಕ್ರಿಯೆಯಲ್ಲಿ ಮಧ್ಯವರ್ತಿಗಳು ಮತ್ತು ಇತರೆ ಅಧಿಕಾರಿಗಳ ಶಾಮೀಲಿನ ಕುರಿತು ಸಿಐಡಿ ಆಳವಾದ ತನಿಖೆ ನಡೆಸುತ್ತಿದೆ.
ಪರೀಕ್ಷಾ ನಿಯಂತ್ರಣಾಧಿಕಾರಿಯಾಗಿದ್ದ ಜ್ಞಾನೇಂದ್ರ ಕುಮಾರ್ ಅವರಿಗೆ ಈ ಅಕ್ರಮದ ಬಗ್ಗೆ ಮೊದಲೇ ಮಾಹಿತಿ ಇತ್ತೇ ಅಥವಾ ಈ ಭ್ರಷ್ಟಾಚಾರದಲ್ಲಿ ಅವರ ನೇರ ಪಾತ್ರವಿದೆಯೇ ಎಂಬುದರ ಬಗ್ಗೆ ಅಧಿಕಾರಿಗಳು ಸಾಕ್ಷ್ಯ ಕಲೆಹಾಕುತ್ತಿದ್ದಾರೆ. ಸದ್ಯ ಅವರು ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯಲ್ಲಿ ಎಂಎಸ್‌ಎಂಇ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇಡಿ ದಾಳಿ ಮತ್ತು ನಾಪತ್ತೆ ವದಂತಿಯ ಹಿಂದಿನ ಸತ್ಯ
ಈ ವಾರದ ಆರಂಭದಲ್ಲಿ ಜ್ಞಾನೇಂದ್ರ ಕುಮಾರ್ ಅವರಿಗೆ ಸಂಬಂಧಿಸಿದ ಕಚೇರಿ ಹಾಗೂ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯ ಕೂಡ ದಾಳಿ ನಡೆಸಿ, ಮಹತ್ವದ ದಾಖಲೆಗಳನ್ನ ಪರಿಶೀಲಿಸಿತ್ತು. ಇಡಿ ದಾಳಿಯ ಬೆನ್ನಲ್ಲೇ ಅವರು ದಿಢೀರನೆ ಬೆಂಗಳೂರು ಬಿಟ್ಟು ತೆರಳಿದ್ದರು. ತನಿಖೆಗೆ ಹೆದರಿ ಅವರು ನಾಪತ್ತೆಯಾಗಿದ್ದಾರೆ ಎಂಬ ವದಂತಿಗಳು ರಾಜ್ಯಾದ್ಯಂತ ವ್ಯಾಪಕವಾಗಿ ಹಬ್ಬಿದ್ದವು ಮತ್ತು ಇದು ಭಾರಿ ವಿವಾದಕ್ಕೂ ಕಾರಣವಾಗಿತ್ತು.
ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿದ್ದ ರಾಜ್ಯ ಸರ್ಕಾರ, "ಅವರ ತಂದೆಗೆ ತೀವ್ರ ಆರೋಗ್ಯ ಸಮಸ್ಯೆ ಎದುರಾಗಿದ್ದರಿಂದ ಕೌಟುಂಬಿಕ ತುರ್ತು ಪರಿಸ್ಥಿತಿಯ ಹಿನ್ನೆಲೆಯಲ್ಲಿ ಅವರು ಉತ್ತರ ಪ್ರದೇಶಕ್ಕೆ ತೆರಳಿದ್ದಾರೆ" ಎಂದು ತಿಳಿಸಿತ್ತು.
ಮುಂದಿನ ಹಂತವಾಗಿ ಜ್ಞಾನೇಂದ್ರ ಕುಮಾರ್ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಹೆಚ್ಚಿನ ತನಿಖೆಗಾಗಿ ಕಸ್ಟಡಿಗೆ ನೀಡುವಂತೆ ಸಿಐಡಿ ಮನವಿ ಮಾಡುವ ನಿರೀಕ್ಷೆಯಿದೆ.


Click it and Unblock the Notifications
