KPSCಯಲ್ಲಿ ಆಯೋಗದಲ್ಲಿ ಮಹಾಹಗರಣ: ಅಧ್ಯಕ್ಷರ ವಿರುದ್ಧವೇ ತಿರುಗಿಬಿದ್ದ ಆಯೋಗ; ರಾಜ್ಯಪಾಲರ ಅಂಗಳಕ್ಕೆ ತಲುಪಿದ ವಿವಾದ!

ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರಾದ ಶಿವಶಂಕರಪ್ಪ ಎಸ್. ಸಾಹುಕಾರ್ ಅವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿರುವ ಗಂಭೀರ ಆರೋಪ ಕೇಳಿಬಂದಿದೆ. ತಮ್ಮ ಪುತ್ರಿಗೆ ಸರ್ಕಾರಿ ಹುದ್ದೆ ಕೊಡುವ ಸಲುವಾಗಿ, ಕುಟುಂಬದ ವಾರ್ಷಿಕ ಆದಾಯ ಪ್ರಮಾಣಪತ್ರದಲ್ಲಿ ಸುಳ್ಳು ಮಾಹಿತಿ ಹಾಕಲು ಅವರು ಸಹಕರಿಸಿದ್ದಾರೆ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ.

ಈ ಹಿನ್ನೆಲೆಯಲ್ಲಿ, ನೈತಿಕ ಹೊಣೆ ಹೊತ್ತು ಅವರು ತಕ್ಷಣವೇ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಯೋಗದ ಸಭೆಯಲ್ಲಿ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ.

Shivashankarappa Sahukar

ಸುಮಾ ಸಾಹುಕಾರ್ ಅವರ 3ಬಿ ಮೀಸಲಾತಿ ವಿವಾದ

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಲ್ಲಿನ 50 ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗಳಿಗೆ 2024ರ ಮಾರ್ಚ್ 15ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಈ ಹುದ್ದೆಗಾಗಿ ಅಧ್ಯಕ್ಷರ ಪುತ್ರಿ ಸುಮಾ ಎಸ್. ಸಾಹುಕಾರ್ ಅವರು 3ಬಿ ಮೀಸಲಾತಿ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು. 1:3 ಅನುಪಾತದ ಅರ್ಹತಾ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಅವರು ಫೆಬ್ರವರಿ 19ರಂದು ಮೂಲ ದಾಖಲೆಗಳ ಪರಿಶೀಲನೆಗೆ ಹಾಜರಾಗಿದ್ದರು.

ದಾಖಲೆಗಳ ಪರಿಶೀಲನೆ ವೇಳೆ, ಅವರು ಸಲ್ಲಿಸಿದ್ದ 2020ರ ಮಾರ್ಚ್ 4ರ ದಿನಾಂಕ ಹೊಂದಿರುವ ಜಾತಿ ಮತ್ತು ಆದಾಯ ಪ್ರಮಾಣಪತ್ರದಲ್ಲಿ ಕುಟುಂಬದ ವಾರ್ಷಿಕ ಆದಾಯ ಕೇವಲ 40 ಸಾವಿರ ಎಂದಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ.

ಶಿವಶಂಕರಪ್ಪ ಸಾಹುಕಾರ್ ಅವರು 2019 ರಿಂದಲೇ ಆಯೋಗದ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದು, ಆಯೋಗದಿಂದ ವೇತನ ಪಡೆಯುತ್ತಿದ್ದಾರೆ. ಹೀಗಿರುವಾಗ ಅವರ ಆದಾಯ ಕೇವಲ 40 ಸಾವಿರ ಎನ್ನುವುದು ಶುದ್ಧ ಸುಳ್ಳು ಎಂಬುದು ಸ್ಪಷ್ಟವಾಗಿದೆ.

2018ರ ಸೆಪ್ಟೆಂಬರ್ 14ರ ಸರ್ಕಾರದ ಆದೇಶದ ಪ್ರಕಾರ, ಹಿಂದುಳಿದ ವರ್ಗಗಳ ಮೀಸಲಾತಿಗೆ ಅನ್ವಯಿಸುವಂತೆ ಆದಾಯ ಮಿತಿಯನ್ನು 6 ಲಕ್ಷದಿಂದ 8 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಅಭ್ಯರ್ಥಿಯು ತಮ್ಮ ತಂದೆ ಸಾಂವಿಧಾನಿಕ ಹುದ್ದೆಯಲ್ಲಿದ್ದಾರೆ ಎಂದು ತಿಳಿದಿದ್ದರೂ ನಿಜವಾದ ಪ್ರಮಾಣಪತ್ರ ಸಲ್ಲಿಸಿರುವುದು ದುರಾಚಾರ ಎಂದು ಪರಿಗಣಿಸಲಾಗಿದೆ.

ಜೂನ್ 19ರಂದು ನಡೆದ ಸಭೆಯಲ್ಲಿ ಕಾರ್ಯದರ್ಶಿ ಕೆ. ಜ್ಯೋತಿ ಅವರು ಈ ಬಗ್ಗೆ ಟಿಪ್ಪಣಿ ಮಂಡಿಸಿದ್ದು, ಮಗಳ ವಿಚಾರ ಕಾರ್ಯಸೂಚಿಯಲ್ಲಿದ್ದ ಕಾರಣ ಸಾಹುಕಾರ್ ಅವರು ಸಭೆಯಿಂದ ಹೊರಗುಳಿದಿದ್ದರು ಹಾಗೂ ಹಿರಿಯ ಸದಸ್ಯ ಬಿ. ಪ್ರಭುದೇವ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿತ್ತು.

ಆಯೋಗದ ಕಠಿಣ ನಿರ್ಣಯಗಳು ಹಾಗೂ ಕ್ರಿಮಿನಲ್ ಮೊಕದ್ದಮೆ

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಆಯೋಗವು ಸಭೆಯಲ್ಲಿ ಹಲವು ಕಠಿಣ ನಿರ್ಣಯಗಳನ್ನು ತೆಗೆದುಕೊಂಡಿದೆ.

1. ಆಯೋಗದ ಘನತೆ ಕಾಪಾಡುವ ನಿಟ್ಟಿನಲ್ಲಿ ಹಾಗೂ ನಿಷ್ಪಕ್ಷಪಾತ ತನಿಖೆಗಾಗಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ತಕ್ಷಣ ರಾಜೀನಾಮೆ ನೀಡಬೇಕು.

2. ಅಭ್ಯರ್ಥಿ ಸುಮಾ ಸಲ್ಲಿಸಿರುವ 3ಬಿ ಮೀಸಲಾತಿಯನ್ನು ತಿರಸ್ಕರಿಸಬೇಕು ಹಾಗೂ ಅವರನ್ನು ಅನರ್ಹಗೊಳಿಸಬೇಕು.

3. ಅಭ್ಯರ್ಥಿಗೆ ಸುಳ್ಳು ಆದಾಯ ಪ್ರಮಾಣಪತ್ರ ಪಡೆಯಲು ಸಹಕರಿಸಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು.

4. ಅಭ್ಯರ್ಥಿಯನ್ನು ಆಯೋಗ ನಡೆಸುವ ಯಾವುದೇ ನೇಮಕಾತಿಯಲ್ಲಿ ಭಾಗವಹಿಸದಂತೆ ಶಾಶ್ವತವಾಗಿ ನಿರ್ಬಂಧಿಸಬೇಕು.

5. ಆಯೋಗದ ಕಾರ್ಯಗಳು ಸುಗಮವಾಗಿ ನಡೆಯಲು ಮುಂದಿನ ನೇಮಕಾತಿ ಪ್ರಕ್ರಿಯೆಗಳನ್ನು ಮೊದಲನೇ ಹಿರಿಯ ಸದಸ್ಯರ ನೇತೃತ್ವದಲ್ಲಿ ನಡೆಸಬೇಕು.

6. ಆಯೋಗದ ಕಾರ್ಯದರ್ಶಿಗಳು ಈ ಬಗ್ಗೆ ವಿವರವಾದ ವರದಿಯನ್ನು ತಕ್ಷಣವೇ ಸರ್ಕಾರಕ್ಕೆ ಹಾಗೂ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ನೀಡಲಿದ್ದಾರೆ.

ಶೈಕ್ಷಣಿಕ ದಾಖಲೆಗಳ ಮೇಲೂ ಅನುಮಾನ

ಸುಮಾ ಅವರು ವಿಜ್ಞಾನ ಪದವಿಯ 4ನೇ ಸೆಮಿಸ್ಟರ್‌ನ ಪೂರ್ಣ ಅಂಕಪಟ್ಟಿ ಸಲ್ಲಿಸಿಲ್ಲ ಹಾಗೂ ಆನ್‌ಲೈನ್ ಅರ್ಜಿಯೊಂದಿಗೆ ಒಂದೇ ದಾಖಲೆಗಳನ್ನು ಮರು ಅಪ್‌ಲೋಡ್ ಮಾಡಿದ್ದಾರೆ ಎಂಬುದು ತಿಳಿದುಬಂದಿದೆ. ಒಂದೊಮ್ಮೆ ಅಭ್ಯರ್ಥಿ ಆಯ್ಕೆಯಾದರೆ ದಾಖಲೆಗಳ ಪರಿಶೀಲನೆ ಷರತ್ತಿಗೆ ಒಳಪಡಿಸಬೇಕು ಎಂದು ಸಭಾ ಟಿಪ್ಪಣಿಯಲ್ಲಿ ಉಲ್ಲೇಖಿಸಲಾಗಿದೆ.

ಈ ನಡುವೆ, ಜೂನ್ 10 ರಂದು ಪ್ರಕಟವಾದ ಕೈಗಾರಿಕಾ ವಿಸ್ತರಣಾಧಿಕಾರಿ 13 (ಹೈ-ಕ) ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಅಧ್ಯಕ್ಷರ ಮೊದಲ ಪುತ್ರಿ ಅನುರಾಧಾ ಎಸ್.ಎಸ್. ಅವರು 200 ಅಂಕಗಳಿಗೆ 165 ಅಂಕ (ಶೇ 82.50) ಗಳಿಸಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ, ಆಯೋಗದ ಸದಸ್ಯರು ಲೋಕಭವನಕ್ಕೆ ತೆರಳಿ ರಾಜ್ಯಪಾಲ ಥಾವರಚಂದ್ ಗೆಹಲೋಟ್‌ ಅವರಿಗೆ ಶಿವಶಂಕರಪ್ಪ ಸಾಹುಕಾರ್ ವಿರುದ್ಧ ದೂರು ನೀಡಿದ್ದಾರೆ. ರಾಜ್ಯಪಾಲರು ಕಾರ್ಯದರ್ಶಿಯವರನ್ನು ಕರೆಸಿ ಮಾಹಿತಿ ಪಡೆದುಕೊಂಡಿದ್ದು, ಸಾಹುಕಾರ್ ಕೂಡ ರಾಜ್ಯಪಾಲರನ್ನು ಭೇಟಿಯಾಗಿದ್ದಾರೆ ಎಂದು ಲೋಕಭವನದ ಮೂಲಗಳು ತಿಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+