ಅತೃಪ್ತರಿಗೆ ಮೂಗುದಾರ, ಶಾಸಕರಿಗೆ ವಿಪ್ ಜಾರಿ ಮಾಡಿದ ಕಾಂಗ್ರೆಸ್
ಬೆಂಗಳೂರು, ಫೆಬ್ರವರಿ 05: ಬಜೆಟ್ ಅಧಿವೇಶನಕ್ಕೆ ಆರು ಮಂದಿ ಕಾಂಗ್ರೆಸ್ ಶಾಸಕರು ಗೈರಾಗುವಂತೆ ಮಾಡಲು ಬಿಜೆಪಿ ಯತ್ನ ನಡೆಸುತ್ತಿದೆ ಎಂದು ಗೊತ್ತಾದ ಕೂಡಲೇ ಎದುರು ತಂತ್ರ ಹೂಡಿರುವ ಕಾಂಗ್ರೆಸ್ ತನ್ನ ಶಾಸಕರಿಗೆ ವಿಪ್ ಹೊರಡಿಸಿದೆ.
ಕಾಂಗ್ರೆಸ್‌ನ ಎಲ್ಲ ಶಾಸಕರು ಕಡ್ಡಾಯವಾಗಿ ಬಜೆಟ್ ಅಧಿವೇಶನಕ್ಕೆ ಹಾಜರಾಗಬೇಕು ಎಂದು ವಿಪ್ ನೀಡಲಾಗಿದೆ. ವಿಪ್ ಜಾರಿ ಆಗಿರುವ ಕಾರಣ ಶಾಸಕರು ಭಯದಿಂದಾದರೂ ಅಧಿವೇಶನಕ್ಕೆ ಹಾಜರಾಗುತ್ತಾರೆಂಬುದು ಕಾಂಗ್ರೆಸ್ ನಂಬಿಕೆ.
ಫೆಬ್ರವರಿ 6 ರಂದು ಅಧಿವೇಶನ ಆರಂಭದಿಂದ ಅಧಿವೇಶನ ಅಂತ್ಯವಾಗುವವರೆಗೂ ಅಧಿವೇಶನಕ್ಕೆ ಕಡ್ಡಾಯವಾಗಿ ಹಾಜರಾಗಬೇಕು ಎಂದು ಕೆಪಿಸಿಸಿಯ ಮುಖ್ಯ ಸಚೇತಕ ಗಣೇಶ್ ಹುಕ್ಕೇರಿ ಅವರು ಕಾಂಗ್ರೆಸ್‌ನ ಎಲ್ಲ ಶಾಸಕರಿಗೆ ವಿಪ್ ಜಾರಿ ಮಾಡಿದ್ದಾರೆ.

ಬಿಜೆಪಿಯು ಕಾಂಗ್ರೆಸ್ ಶಾಸಕರನ್ನು ಗೈರಾಗಿಸಿ ಬಜೆಟ್‌ಗೆ ಅನುಮೋದನೆ ದೊರಕದಂತೆ ಮಾಡಿ, ಅವಿಶ್ವಾಸ ಗೊತ್ತುವಳಿ ಮಂಡಿಸಲು ಸಜ್ಜಾಗಿದೆ ಹಾಗಾಗಿಯೇ ಕಾಂಗ್ರೆಸ್ ತನ್ನ ಶಾಸಕರಿಗೆ ವಿಪ್ ಜಾರಿ ಮಾಡಿ ಪ್ರತಿತಂತ್ರವನ್ನು ಪ್ರಯೋಗಿಸಿದೆ.
ವಿಪ್ ಉಲ್ಲಂಘಿಸಿದರೆ ಪಕ್ಷದಿಂದ ಉಚ್ಛಾಟನೆ ಜೊತೆಗೆ ಶಾಸಕ ಸ್ಥಾನವನ್ನು ಕಳೆದುಕೊಳ್ಳುವ ಭೀತಿಯಿರುವ ಕಾರಣದಿಂದಾದರೂ ಅತೃಪ್ತ ಶಾಸಕರು ಕಾಂಗ್ರೆಸ್ ನ ಹಿಡಿತಕ್ಕೆ ಬರುತ್ತಾರೆಂದು ಕೆಪಿಸಿಸಿ ಯೋಚಿಸಿದೆ.












Click it and Unblock the Notifications