ಲೋಕಸಭೆ ಚುನಾವಣೆ ಬಗ್ಗೆ ಕಾಂಗ್ರೆಸ್ ಪ್ರಚಾರ ಸಮಿತಿಯ ಮಹತ್ವದ ಸಭೆ
ಬೆಂಗಳೂರು, ಸೆಪ್ಟಂಬರ್ 03: ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ ರಾಜ್ಯ ಕಾಂಗ್ರೆಸ್ ಪಾಳೆಯ ಮುಂಬರುವ ಲೋಕಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿದೆ. ಅದಕ್ಕಾಗಿ ಪಕ್ಷ ಸಂಘಟನೆ ಜೊತೆ ಗೆಲುವಿನ ರಣತಂತ್ರ ರೂಪಿಸಲು ಸಜ್ಜಾಗಿದೆ. ಇದರ ಅಂಗವಾಗಿ ಕೆಪಿಸಿಸಿ ಕಚೇರಿಯಲ್ಲಿ ರಾಜ್ಯ ಮತ್ತು ಜಿಲ್ಲಾ ಪ್ರಚಾರ ಸಮಿತಿಯ ಪದಾಧಿಕಾರಿಗಳ ಸಭೆ ಇಂದು ಭಾನುವಾರ (ಸೆ.3) ಆರಂಭವಾಗಿದೆ.
ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರೂ ಆಗಿರುವ ಬೃಹತ್ ಕೈಗಾರಿಕಾ ಸಚಿವ ಎಂಬಿ ಪಾಟೀಲ ಸೇರಿದಂತೆ ಹಲವು ನಾಯಕರು ಈ ಸಭೆಯಲ್ಲಿ ಮಾತನಾಡಲಿದ್ದಾರೆ. ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನವರೆಗೆ ಸಭೆ ಜರುಗಲಿದೆ.

ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಯಶಸ್ಸಿಗೆ ದುಡಿದ ಪ್ರಚಾರ ಸಮಿತಿಯ ರಾಜ್ಯ, ಜಿಲ್ಲಾ ಹಾಗೂ ವಿಧಾನಸಭಾ ಕ್ಷೇತ್ರವಾರು ಸಮಿತಿಗಳ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುವುದು ಸಭೆಯ ಉದ್ದೇಶವಾಗಿದೆ. ಈ ಮೂಲಕ ಪದಾಧಿಕಾರಿಗಳನ್ನು ಹತ್ತಿರದಲ್ಲೇ ಇರುವ ಲೋಕಸಭೆಯ ಸಾರ್ವತ್ರಿಕ ಚುನಾವಣೆಗೆ ಹುರಿದುಂಬಿಸಲು ಕಾಂಗ್ರೆಸ್ ಪಕ್ಷವು ಚಿಂತನೆ ನಡೆಸಿದೆ. ಆ ಕುರಿತು ನಾಯಕರ ಚರ್ಚಿಸುತ್ತಿದೆ.
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಓಟಕ್ಕೆ ತಡೆ ಹಾಕಿರುವ ರಾಜ್ಯ ಕಾಂಗ್ರೆಸ್ ಈಗ ಉತ್ಸಾಹದ ಬುಗ್ಗೆಯಾಗಿದ್ದು, ರಾಷ್ಟ್ರ ಮಟ್ಟದಲ್ಲೂ ಇದೇ ರೀತಿಯ ಫಲಿತಾಂಶ ಬರುವಂತೆ ನೋಡಿಕೊಳ್ಳಲು ಬಯಸುತ್ತಿದೆ. ಇದಕ್ಕೆ ವೇದಿಕೆಯಾಗಿ, ಭಾನುವಾರದ ಸಭೆಯನ್ನು ಕರೆಯಲಾಗಿದೆ ಎಂದು ಪ್ರಚಾರ ಸಮಿತಿಯ ಸಮನ್ವಯಕಾರ ಎ.ಪಿ.ಬಸವರಾಜ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications