ಕೊಪ್ಪಳ : ಯಲ್ಲಾಲಿಂಗನ ಕೊಲೆ ಪ್ರಕರಣದ ತನಿಖೆ ಸಿಐಡಿಗೆ
ಕೊಪ್ಪಳ, ಜೂ. 20 : ಸಾರ್ವಜನಿಕರು ಆಕ್ರೋಶಕ್ಕೆ ಮಣಿದಿರುವ ಸರ್ಕಾರದ ಕೊಪ್ಪಳದ ಯಲ್ಲಾಲಿಂಗನ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿದೆ. ಗ್ರಾಮ ಪಂಚಾಯಿತಿ ಕಾಮಗಾರಿಗಳಲ್ಲಿ ನಡೆದ ಅವ್ಯವಹಾರಗಳನ್ನು ಬೆಳಕಿಗೆ ತಂದಿದ್ದ ಯಲ್ಲಾಲಿಂಗ ಜನವರಿ 10ರಂದು ಕೊಲೆಯಾಗಿದ್ದ. ಸಚಿವ ಶಿವರಾಜ ತಂಗಡಗಿ ಆಪ್ತರು ಕೊಲೆ ಮಾಡಿದ್ದಾರೆ ಎಂಬ ಆರೋಪವಿದೆ.
ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ಯಲ್ಲಾಲಿಂಗನ ಕೊಲೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದ್ದಾರೆ. ಸಿಐಡಿ ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ. [ಕೊಪ್ಪಳ ಕಂದಾಯ ಇಲಾಖೆಯಲ್ಲಿ ಕೆಲಸ ಖಾಲಿ ಇದೆ]

ಘಟನೆ ವಿವರ : ಹುಲಿಹೈದರ್ ಗ್ರಾಮ ಪಂಚಾಯಿತಿಯಲ್ಲಿ ನಡೆದ ಅವ್ಯವಹಾರದ ಬಗ್ಗೆ ಸುದ್ದಿವಾಹಿನಿಯೊಂದಕ್ಕೆ ಬೈಟ್ ಕೊಟ್ಟಿದ್ದ ಯಲ್ಲಾಲಿಂಗ (17)ನ ಶವ ಕೊಪ್ಪಳ ರೈಲ್ವೆ ನಿಲ್ದಾಣ ಬಳಿಯ ಹಳಿಯಲ್ಲಿ 2015ರ ಜನವರಿ 10ರಂದು ಪತ್ತೆಯಾಗಿತ್ತು. [ಸಿಐಡಿ ತನಿಖೆ ಹೇಗೆ ನಡೆಯುತ್ತೇ?]
ದ್ವಿತೀಯ ಪಿಯುಸಿ ವಿದ್ಯಾರ್ಥಿ ಯಲ್ಲಾಲಿಂಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೊದಲು ಪೊಲೀಸರು ಹೇಳಿದ್ದರು. ಯಲ್ಲಾಲಿಂಗನ ಪೋಷಕರು ದೂರು ಕೊಟ್ಟ ಮೇಲೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು ಮತ್ತು 6 ಆರೋಪಿಗಳನ್ನು ಬಂಧಿಸಿದ್ದರು.
ಸಚಿವರ ಬೆಂಬಲಿಗನ ಕೈವಾಡ : ಯಲ್ಲಾಲಿಂಗನಿಗೆ ಸಣ್ಣ ನೀರಾವರಿ ಸಚಿವ ಶಿವರಾಜ ತಂಗಡಗಿ ಅವರ ಬೆಂಬಲಿಗ ಹನುಮೇಶ ನಾಯಕ ಆಗಾಗ ಬೆದರಿಕೆ ಹಾಕುತ್ತಿದ್ದ ಎಂಬ ಆರೋಪವಿದೆ. ಪ್ರಕರಣ ಸಂಬಂಧ ಆರು ಜನರನ್ನು ಬಂಧಿಸಿದರೂ ಹನುಮೇಶ ನಾಯಕನನ್ನು ಬಂಧಿಸಿರಲಿಲ್ಲ. ಇದರ ವಿರುದ್ಧ ಭಾರೀ ಪ್ರತಿಭಟನೆಗಳು ನಡೆದಿದ್ದವು.
ಪ್ರಕರಣದ ಪ್ರಮುಖ ಆರೋಪಿ ಹನುಮೇಶ ನಾಯಕನನ್ನು ಬಂಧಿಸದಿರುವ ಬಗ್ಗೆ ಪ್ರತಿಭಟನೆ ನಡೆದವು ಮತ್ತು ಸಚಿವ ತಂಗಡಗಿ ರಾಜೀನಾಮೆಗೂ ಒತ್ತಾಯಮಾಡಲಾಗಿತ್ತು. ಜನರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ಸರ್ಕಾರ ಸಿಐಡಿಗೆ ವಹಿಸಿ ಆದೇಶ ಹೊರಡಿಸಿದೆ.












Click it and Unblock the Notifications