ಕುಕನೂರು ಗ್ರಾಮದ ವಿದ್ಯಾರ್ಥಿಗಳಿಗೆ ವೆಲ್ಕಂ ಬ್ರೇಕ್
ಕೊಪ್ಪಳ, ಜ. 20 : ಜನವರಿಗೆ ಕಾಲಿಡುತ್ತಿದ್ದಂತೆ ಅನೇಕ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ, ವಾರ್ಷಿಕೋತ್ಸವ ಹಮ್ಮಿಕೊಳ್ಳುವುದು ವಾಡಿಕೆ. ಹಾಗೆಯೆ, ಇತ್ತೀಚೆಗೆ ಕೊಪ್ಪಳ ಜಿಲ್ಲೆಯ ಕುಕನೂರು ಗ್ರಾಮದಲ್ಲಿ ಜವಾಹರ ನವೋದಯ ವಿದ್ಯಾಲಯದಲ್ಲಿ ಶಾಲಾವಾರ್ಷಿಕೋತ್ಸವ ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಜನ್ನು ಅವರು ಆಗಮಿಸಿದ್ದರು. ಅಧ್ಯಕ್ಷತೆಯನ್ನು ವಿದ್ಯಾಲಯದ ಪ್ರಾಚಾರ್ಯರಾದ ಬಿ.ಎನ್.ಟಿ.ರೆಡ್ಡಿ ವಹಿಸಿದ್ದರು. ತಮ್ಮ ಅತಿಥಿ ಭಾಷಣದಲ್ಲಿ ಜಿಲ್ಲಾಧಿಕಾರಿಯವರು ವಿದ್ಯಾರ್ಥಿಗಳಿಗೆ ಸಮಾಜಮುಖಿ ಕೆಲಸಗಳನ್ನು ಮಾಡಬೇಕು. ಎಲ್ಲರೂ ಡಾಕ್ಟರ್, ಇಂಜಿನಿಯರ್ ಎಂಬ ಆಸೆ ಇಟ್ಟುಕೊಳ್ಳದೇ ಸಮಾಜಕ್ಕಾಗಿ ಉಪಯೋಗವಾಗುವಂತಹ ಕೆಲಸದಲ್ಲಿ ತೊಡಗಿರಿ ಎಂದು ಕಿವಿಮಾತು ಹೇಳಿದರು. [ಕೊಪ್ಪಳ : ಸುಟ್ಟ ಗಾಯವಾಗಿದ್ದ ಶಿವಾನಂದ ಶ್ರೀ ಇನ್ನಿಲ್ಲ]

ಇವತ್ತಿನ ಸಮಾಜಕ್ಕೆ ಒಳ್ಳೆಯ ಯುವಕರ ಉತ್ತಮ ನಾಗರಿಕತ್ವದ ಕೊರತೆ ಇದೆ. ಆ ಕೊರತೆಯನ್ನು ವಿದ್ಯಾರ್ಥಿಗಳಾದ ನೀವು ನೀಗಿಸಬೇಕೆಂದು ವಿದ್ಯಾರ್ಥಿಗಳಿಗೆ ಜನ್ನು ಅವರು ಕರೆಯಿತ್ತರು. ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ವಿತರಣೆ ನಡೆಯಿತು. 10ನೇ, ಮತ್ತು 12ನೇ ತರಗತಿಗಳಿಗೆ ಬೋಧಿಸುವ ಗುರುಗಳಿಗೆ ಅತ್ಯುತ್ತಮ ಫಲಿತಾಂಶ ನೀಡಿದ್ದಕ್ಕಾಗಿ ಪುರಸ್ಕರಿಸಿ ಸನ್ಮಾನಿಸಲಾಯಿತು.
ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. 8ನೇ ತರಗತಿಯ ಮಕ್ಕಳು ಅಭಿನಯಿಸಿದ ನಾಟಕ "ಪ್ಲಾಸ್ಟಿಕ್ ರಾಕ್ಷಸ' ಎಲ್ಲರ ಗಮನ ಸೆಳೆಯಿತು. ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದಾಗುವ ಅನಾಹುತಗಳನ್ನು ನಾಟಕ ಪ್ರತಿಬಿಂಬಿಸುವಂತಿತ್ತು. ಪ್ಲಾಸ್ಟಿಕ್ ಬಳಕೆಯ ನಿಷೇಧವನ್ನು ಮಕ್ಕಳು ನಾಟಕದ ಮೂಲಕ ತುಂಬಾ ಚೆನ್ನಾಗಿ ಅಭಿನಯಿಸಿ ತೋರಿಸಿದರು. ಎಲ್ಲಾ ಮಕ್ಕಳು ಲವಲವಿಕೆಯಿಂದ ಅಭಿನಯಿಸಿದ್ದರು. ನಾಟಕಕ್ಕೆ ವಿದ್ಯಾಲಯದ ಕನ್ನಡ ಗುರುಗಳಾದ ಮನೋಹರ ಕುಲಕರ್ಣಿಯವರ ನಿರ್ದೇಶನವಿತ್ತು.
ವಿ. ಘೋಷ ಸ್ವಾಗತಿಸಿದರು. ಎಸ್.ಎಸ್. ಬಗಾನೆ ವಂದಿಸಿದರು ಮತ್ತು ಎಂ. ಪ್ರಲ್ಹಾದ್ ಕಾರ್ಯಕ್ರಮವನ್ನು ನಿರೂಪಿಸಿದರು. ಒಟ್ಟಿನಲ್ಲಿ, ಅಂತಿಮ ಪರೀಕ್ಷೆಗಳಿಗೆ ಪಟ್ಟುಬಿದ್ದು ಓದುತ್ತಿರುವ ವಿದ್ಯಾರ್ಥಿಗಳಿಗೆ ಮತ್ತು ಅವರನ್ನು ತಯಾರು ಮಾಡುತ್ತಿರುವ ಶಿಕ್ಷಕರಿಗೆ ಈ ಕಾರ್ಯಕ್ರಮ ಸ್ವಾಗತಾರ್ಹ ಬಿಡುವಿನಂತಿತ್ತು.












Click it and Unblock the Notifications