ಕೊಪ್ಪಳ : ನಿರುಪಯುಕ್ತ ಬೋರ್ ವೆಲ್ ಮುಚ್ಚಲು ಸೂಚನೆ
ಕೊಪ್ಪಳ, ಜೂ. 20 : ಬಿಜಾಪುರದಲ್ಲಿ ನಡೆದ ಕೊಳವೆ ಬಾವಿ ದುರಂತದ ಬಳಿಕ ಕೊಪ್ಪಳ ಜಿಲ್ಲಾಡಳಿತ ಗ್ರಾಮೀಣ ಪ್ರದೇಶದಲ್ಲಿರುವ ಅನುಪಯುಕ್ತ ಕೊಳವೆ ಬಾವಿಗಳನ್ನು ಮುಚ್ಚುವಂತೆ ಆದೇಶ ನೀಡಿದೆ. ಅನುಪಯುಕ್ತ ತೆರೆದ ಕೊಳವೆ ಬಾವಿಗಳಿದ್ದರೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದೆ.
ಈ ಕುರಿತು ಆದೇಶ ಹೊರಡಿಸಿರುವ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಡಿ ಉದಪುಡಿ ಅವರು, ಗ್ರಾಮೀಣ ಪ್ರದೇಶಗಳಲ್ಲಿ ಅನುಪಯುಕ್ತ ಕೊಳವೆ ಬಾವಿಗಳನ್ನು ಅಥವಾ ತೆರೆದ ಕೊಳವೆ ಬಾವಿಗಳನ್ನು ಮುಚ್ಚಲು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ. [ಬಿಜಾಪುರ: ಮೃತ್ಯಕೂಪದಿಂದ ಬದುಕಿಬರಲಿಲ್ಲ ಅಕ್ಷತಾ]

ಕೊಪ್ಪಳ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ರೀತಿಯ ನೀರು ಸರಬರಾಜು ಯೋಜನೆಗಳಿಗಾಗಿ ಕೊರೆಯಲಾಗಿರುವ ಕೊಳವೆ ಭಾವಿಗಳಲ್ಲಿ ಕೆಲವೊಂದು ಕೊಳವೆ ಬಾವಿಗಳು ವಿಫಲಗೊಂಡಿವೆ. ಇಂತಹ ಬಾವಿಗಳನ್ನು ಮುಚ್ಚುವಂತೆ ಎಲ್ಲ ಗ್ರಾಮ ಪಂಚಾಯತಿಗಳ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ತಾಲೂಕಾ ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಲಾಗಿದೆ. [ಬಾವಿ ಕೊರೆತ : ಸುಪ್ರೀಂಕೋರ್ಟ್ ಮಾರ್ಗದರ್ಶಿ ಸೂತ್ರಗಳು]
ವೈಯಕ್ತಿಕವಾಗಿ ಮನೆಗಳಿಗಾಗಿ ಮತ್ತು ಹೊಲ ಗದ್ದೆಗಳಿಗಾಗಿ ಸಾರ್ವಜನಿಕರು ಕೊರೆಯಿಸಿರುವ ಕೊಳವೆ ಬಾವಿಗಳು ಒಂದು ವೇಳೆ ವಿಫಲಗೊಂಡಿದ್ದಲ್ಲಿ, ಸಾರ್ವಜನಿಕರು ಅದನ್ನು ಮುಚ್ಚಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಸಹ ಚಿಕ್ಕ ಬಾವಿಗೆ ಬಿದ್ದು, ಪ್ರಾಣಹಾನಿ ಸಂಭವಿಸುವ ಸಂಭವಿರುತ್ತದೆ ಎಂದು ಸಿಇಓ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕರು ಈ ಕಾರ್ಯಕ್ಕೆ ಸಹಕಾರ ನೀಡಬೇಕು. ಒಂದು ವೇಳೆ ಯಾವುದೇ ಪ್ರದೇಶದಲ್ಲಿ ಅನುಪಯುಕ್ತ ತೆರೆದ ಕೊಳವೆ ಬಾವಿ ಕಂಡುಬಂದಲ್ಲಿ ಸಾರ್ವಜನಿಕರು ಕೂಡಲೆ ಆಯಾ ಗ್ರಾಮ ಪಂಚಾಯತಿಯ ಕಚೇರಿ ಅಥವಾ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಬೇಕು ಎಂದು ಮನವಿ ಮಾಡಲಾಗಿದೆ.
ಸಾರ್ವಜನಿಕರು ಕೊಪ್ಪಳ - 08539-220399, ಯಲಬುರ್ಗಾ- 08534 - 220136, ಗಂಗಾವತಿ - 08533-230230. ಕುಷ್ಟಗಿ - 08536-267028 ಅಥವಾ ಜಿಲ್ಲಾ ಪಂಚಾಯತ್, ಕೊಪ್ಪಳ- 220002, ದೂರವಾಣಿ ಸಂಖ್ಯೆಗಳಿಗೆ ಮಾಹಿತಿ ನೀಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications