ಪ್ರಧಾನಿ ಮೋದಿ, ಸಿಎಂ ಸಿದ್ದು ಬಗ್ಗೆ ಕೋಡಿಶ್ರೀಗಳ ಭವಿಷ್ಯ
ಬಾಗಲಕೋಟೆ, ಜೂ 22: ತಾಳೆಗೆರೆ ಮೂಲಕ ಭವಿಷ್ಯ ನುಡಿಯುವ ಕೋಡಿಮಠದ ಶ್ರೀಗಳು ಮತ್ತೊಮ್ಮೆ ದೇಶದ ಮತ್ತು ರಾಜ್ಯದ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ಒಂದು ವರ್ಷ ಪೂರೈಸಿರುವ ಕೇಂದ್ರದ ನರೇಂದ್ರ ಮೋದಿ ಸರಕಾರಕ್ಕೆ ಹಲವು ಕಂಟಕಗಳು ಎದುರಾಗಲಿವೆ ಎಂದು ಶ್ರೀಗಳು ಭವಿಷ್ಯ ನುಡಿಯುವ ಮೂಲಕ ಬಿಜೆಪಿಯವರ ಮಂಡೆಬಿಸಿ ಮಾಡಿದ್ದಾರೆ.
ಭಾನುವಾರ (ಜೂ 21) ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಶ್ರೀಗಳು, ಲಲಿತ್ ಮೋದಿ ಹಗರಣದಿಂದ ಮುಂದಿನ ದಿನಗಳಲ್ಲಿ ಕೇಂದ್ರ ಸರಕಾರಕ್ಕೆ ಕಂಟಕ ತಪ್ಪಿದ್ದಲ್ಲ ಎಂದು ಹೇಳಿದ್ದಾರೆ. (ನೇಪಾಳ ಭೂಕಂಪ: ಶ್ರೀಗಳು ಭವಿಷ್ಯ ನುಡಿದಿದ್ರಾ)
ರಾಜಕೀಯ ಅಸ್ಥಿರತೆ, ನೈಸರ್ಗಿಕ ವಿಕೋಪಗಳ ಬಗ್ಗೆ ಅರಸೀಕೆರೆ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು ನುಡಿಯುವ ತಾಳೆಗೆರೆ ಭವಿಷ್ಯದ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಕುತೂಹಲವಿರುತ್ತದೆ.
ನಾನು ಭವಿಷ್ಯ ಹೇಳುವುದಿಲ್ಲ, ಭವಿಷ್ಯ ನಾನೇ ರೂಪಿಸುತ್ತೇನೆ ಎಂದು ಹೇಳುವ ಕೋಡಿ ಶ್ರೀಗಳು, ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಏಕ ಪಕ್ಷೀಯ ಸರಕಾರ ಅಧಿಕಾರಕ್ಕೆ ಬರುವುದಿಲ್ಲ, ನೂತನ ಸರ್ಕಾರ ಅಲ್ಪಕಾಲದಲ್ಲಿ ಬಿದ್ದು ಹೋಗಿ ಮರು ಚುನಾವಣೆ ನಡೆಸುವ ಸಾಧ್ಯತೆ ಇದೆ ಎಂದಿದ್ದರು.
ಭಾನುವಾರ ಶ್ರೀಗಳು ರಾಜ್ಯ ಮತ್ತು ಕೇಂದ್ರ ಸರಕಾರದ ಬಗ್ಗೆ ನುಡಿದ ಭವಿಷ್ಯವನ್ನು ಸ್ಲೈಡಿನಲ್ಲಿ ಮುಂದಿವರಿಸಲಾಗಿದೆ..

ಸಿದ್ದುಗೆ ನೋ ಪ್ರಾಬ್ಲಂ
ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಸರ್ಕಾರಕ್ಕೆ ಸದ್ಯಕ್ಕೆ ಯಾವುದೇ ತೊಂದರೆಯಿಲ್ಲ. ಸಿಎಂ ಸಿದ್ದರಾಮಯ್ಯ ಸದ್ಯದ ಮಟ್ಟಿಗೆ ನಿರಾಂತಕವಾಗಿ ಆಡಳಿತ ನಡೆಸಬಹುದು ಎಂದು ಶ್ರೀಗಳು ಭವಿಷ್ಯ ನುಡಿದಿದ್ದಾರೆ.

ಮಳೆ,ಬೆಳೆ
ರಾಜ್ಯದಲ್ಲಿ ಈ ಬಾರಿ ಮುಂಗಾರು ಉತ್ತಮವಾಗಿ ಇರಲಿದೆ. ಮಳೆ, ಬೆಳೆ ಚೆನ್ನಾಗಿ ಆಗಿ ರೈತನಿಗೆ ಹೆಚ್ಚಿನ ತೊಂದರೆಯಾಗುವುದಿಲ್ಲ. ಆದರೆ ಉತ್ತರ ಭಾರತದಲ್ಲಿ ವರುಣನ ಆರ್ಭಟ ಜೋರಾಗಿ ಇರಲಿದೆ ಎಂದು ಶ್ರೀಗಳು ತನ್ನ ಭವಿಷ್ಯದ ಮೂಲಕ ಎಚ್ಚರಿಕೆ ನೀಡಿದ್ದಾರೆ.

ಮೋದಿಗೆ ಕಂಟಕ
ಐಪಿಎಲ್ ಮಾಜಿ ಬಾಸ್ ಲಲಿತ್ ಮೋದಿ - ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಗರಣ ಮುಂದಿನ ದಿನಗಳಲ್ಲಿ ಮೋದಿ ಸರಕಾರಕ್ಕೆ ಕಂಟಕವಾಗಿ ಪರಿಣಮಿಸಲಿದೆ. ಈ ವಿದ್ಯಮಾನದಿಂದ 'ನಡೆಯುವ ಹಾದಿ ಮೂರು ಭಾಗವಾದೀತು' ಎಂದು ಕೋಡಿ ಮಠದ ಶ್ರೀಗಳು ಎಚ್ಚರಿಕೆ ನೀಡಿದ್ದಾರೆ.

ಕಾರ್ತಿಕ ಮಾಸದ ನಂತರ
ಕಾರ್ತಿಕ ಮಾಸ ಮತ್ತು ಸಂಕ್ರಾತಿಯ ಬಳಿಕ ದೇಶದಲ್ಲಿ ದೊಡ್ಡ ಅನಾಹುತ ಸಂಭವಿಸಲಿದೆ. ಪ್ರಮುಖವಾಗಿ ಉತ್ತರ ಭಾರತದಲ್ಲಿ ಪ್ರಾಕೃತಿಕ ವಿಕೋಪ, ವರುಣನಿಂದ ಹಾನಿ ಸಂಭವಿಸಲಿದೆ ಎಂದು ಶ್ರೀಗಳು ಬಾಗಲಕೋಟೆಯಲ್ಲಿ ಭವಿಷ್ಯ ನುಡಿದಿದ್ದಾರೆ.

ಚಳಿಗಾಲದ ಅಧಿವೇಶನ
ಸಿದ್ದುಗೆ ಸದ್ಯ ನೋ ಪ್ರಾಬ್ಲಂ ಅಂದಿರುವ ಶ್ರೀಗಳು, ಕಳೆದ ಬೆಳಗಾವಿ ಚಳಿಗಾಲದ ಅಧಿವೇಶನದ ವೇಳೆ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡ ಸಂದರ್ಭದಲ್ಲಿ, ಸಿದ್ದರಾಮಯ್ಯ ಸರಕಾರ ಇನ್ನು ಹತ್ತು ತಿಂಗಳಲ್ಲಿ ಪತನಗೊಳ್ಳುತ್ತದೆ ಎಂದು ಭವಿಷ್ಯ ನುಡಿದಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.












Click it and Unblock the Notifications