Kodi Mutt Swamiji: ಒಂದಿಬ್ಬರು ಪ್ರಧಾನಿಗಳು ಸಾಯುತ್ತಾರೆ: ಭೂಕಂಪ, ಜಲಕಂಟಕ ಬರುತ್ತದೆ ಎಂದ ಕೋಡಿಮಠ ಶ್ರೀ
2023ರ ಭೀಕರ ಬರಗಾಲ, ಪ್ರವಾಹ ಎರಡನ್ನೂ ಕಂಡಿರುವ ಭಾರತ 2024ರಲ್ಲಿ ಆದರೂ ಪ್ರಕೃತಿ ವಿಕೋಪ ಬಾರದಂತೆ ಇರಲಿ ಎನ್ನುವಾಗಲೇ ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಭೀಕರ ಭವಿಷ್ಯ ನುಡಿದಿದ್ದಾರೆ. 2024ರಲ್ಲಿ ದಿನಗಳು ಒಳ್ಳೆಯದಾಗಿರುವುದಿಲ್ಲ ಎಂದು ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿರುವ ಅವರು, 2024ರಲ್ಲಿ ಅಕಾಲಿಕ ಮಳೆ, ಬಾಂಬ್ ಸ್ಫೋಟಗೊಳ್ಳುವ ಸಾಧ್ಯತೆ ಇದ್ದು, ಯುದ್ಧಭೀತಿ ಇರಲಿದೆ ಎಂದು ಹೇಳಿದರು. ಜನ ತಲ್ಲಣಗೊಳ್ಳಲಿದ್ದು, ಭೂಕಂಪನ ಮತ್ತು ಜಲಕಂಟಕ ಕೂಡ ಎದುರಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಪ್ರಧಾನಿಗಳ ಸಾವು
2024ರಲ್ಲಿ ಜಗತ್ತಿನಾದ್ಯಂತ ಒಂದಿಬ್ಬರು ಪ್ರಧಾನಿಗಳು ಸಾವಿಗೀಡಾಗಲಿದ್ದಾರೆ ಎಂದು ಅವರು ಹೇಳಿದ್ದಾರೆ. ಈ ವರ್ಷ ದೊಡ್ಡ ದೊಡ್ಡ ಅವಘಡಗಳು ಸಂಭವಿಸುತ್ತವೆ. ಅಕಾಲಿಕ ಮಳೆಯಿಂದಾಗಿ ಭಾರಿ ಸಮಸ್ಯೆ ಉಂಟಾಗಲಿದ್ದು, ಲಕ್ಷಾಂತರ ಜನರಿಗೆ ತೊಂದರೆಯಾಗಲಿದೆ ಎಂದು ಹೇಳಿದ್ದಾರೆ. ಬಾಂಬ್ ಸ್ಫೋಟದಲ್ಲಿ ನೂರಾರು ಜನ ಸಾವನ್ನಪ್ಪುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಮತೀಯ ಸಮಸ್ಯೆಗಳಿಂದ ಜನ ಹೆಚ್ಚು ದುಃಖ ಅನುಭವಿಸಲಿದ್ದಾರೆ. ಜಗತ್ತಿನ ಪ್ರಭಾವಿ ಜನ ಸಾವನ್ನಪ್ಪಲಿದ್ದಾರೆ. ಮತ್ತೊಮ್ಮೆ ರೋಗ ಹರಡುವ ಸಾಧ್ಯತೆ ಇದ್ದು, ದೊಡ್ಡ ಸುನಾಮಿಯೊಂದು ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹೇಳಿದರು. ಇದೆಲ್ಲದರಿಂದ ಕಾಪಾಡುವ ಶಕ್ತಿ ದೈವಕ್ಕಿದ್ದು, ದೇವರ ಮೊರೆಹೋಗಬೇಕು ಎಂದರು.
ರಾಮಮಂದಿರದ ಬಗ್ಗೆ ಹೇಳಿದ್ದೇನು?
ಇತ್ತೀಚೆಗೆ ಅಯೋಧ್ಯೆಯಲ್ಲಿ ಉದ್ಘಾಟನೆಯಾದ ರಾಮನ ದೇವಸ್ಥಾನದ ಬಗ್ಗೆ ಮಾತನಾಡಿದ ಕೋಡಿಮಠ ಶ್ರೀಗಳು, ಭಾರತೀಯರಲ್ಲಿ ಆಧ್ಯಾತ್ಮಿಕ ಚಿಂತನೆ ಹೆಚ್ಚಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ರಾಮಜನ್ಮಭೂಮಿಯಲ್ಲಿ ದೇವಸ್ಥಾನ ನಿರ್ಮಾಣವಾಗಿರುವುದು ಒಳ್ಳೆಯ ಸೂಚನೆ ಎಂದು ಹೇಳಿದರು. ರಾಜಕೀಯದಲ್ಲಿ ಧರ್ಮವನ್ನು ಬೆರೆಸುವುದು ಉಚಿತವಲ್ಲ ಎಂದರು.
ದೇಶ ಹಾಗೂ ರಾಜ್ಯ ರಾಜಕೀಯದ ಬಗ್ಗೆ ಯುಗಾದಿಯ ಬಳಿಕ ಭವಿಷ್ಯ ನುಡಿಯಲಾಗುತ್ತದೆ. ಅದಕ್ಕೂ ಮುನ್ನ ಭವಿಷ್ಯ ಹೇಳುವುದು ಸರಿಯಲ್ಲ ಎಂದು ಹೇಳಿದರು.











Click it and Unblock the Notifications