School Holiday: ನಾಳೆ ಈ ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಣೆ! ಕಾರಣವೇನು?
ಮಡಿಕೇರಿ: ನಾಳೆ ದಸರಾ ರಜೆ ಮುಗಿಸಿಕೊಂಡು ಮಕ್ಕಳು ಮತ್ತೆ ಶಾಲಾ, ಕಾಲೇಜಿಗಳತ್ತ ಮುಖ ಮಾಡಬೇಕಾಗಿದೆ. ಆದ್ರೆ ಮಂಜಿನ ನಗರಿ ಕೊಡಗು ಜಿಲ್ಲೆಯಲ್ಲಿ ಮಾತ್ರ ಇನ್ನೂ ದಸರಾ ಹಬ್ಬದ ಸಡಗರ ಮುಗಿದಿಲ್ಲ ನೋಡಿ. ನಾಡಹಬ್ಬ ದಸರಾ ಎಂದ ತಕ್ಷಣ ಮೈಸೂರು ದಸರಾ ಹೇಗೆ ನೆನಪಿಗೆ ಬರುತ್ತದೆಯೋ, ಅದೇ ರೀತಿ ಕೊಡಗಿನ ಮಡಿಕೇರಿ ದಸರಾ ಕೂಡ ತನ್ನದೇ ಆದ ವಿಶಿಷ್ಟ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿದೆ.
ಈ ಐತಿಹಾಸಿಕ ಮಡಿಕೇರಿ ಮತ್ತು ಗೋಣಿಕೊಪ್ಪಲು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಾದ್ಯಂತ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ನಾಳೆ ರಜೆ ಘೋಷಿಸಿ ಕೊಡಗು ಜಿಲ್ಲಾಧಿಕಾರಿ ಸೋಮಶೇಖರ್ ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ.

ದಸರಾ ಸಂಭ್ರಮದಲ್ಲಿರುವ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಜಿಲ್ಲಾಡಳಿತದ ಈ ನಿರ್ಧಾರವು ದೊಡ್ಡ ರಿಲೀಫ್ ನೀಡಿದೆ. ದಶಮಂಟಪಗಳ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಜನಸಾಗರ ಮತ್ತು ವಾಹನ ದಟ್ಟಣೆಯನ್ನ ಗಮನದಲ್ಲಿಟ್ಟುಕೊಂಡು ಮುನ್ನೆಚ್ಚರಿಕಾ ಕ್ರಮವಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಮಡಿಕೇರಿ ಹಾಗೂ ಗೋಣಿಕೊಪ್ಪಲು ದಸರಾ ವೈಭವ
ಮಡಿಕೇರಿ ದಸರಾ ಕೇವಲ ಒಂದು ಹಬ್ಬವಲ್ಲ, ಅದೊಂದು ಭಾವನೆ. ದಸರಾ ಮಹೋತ್ಸವದ ಪ್ರಯುಕ್ತ ಇಂದು ರಾತ್ರಿ ಮಡಿಕೇರಿ ಹಾಗೂ ಗೋಣಿಕೊಪ್ಪಲಿನಲ್ಲಿ ಐತಿಹಾಸಿಕ ದಸರಾ ಜನೋತ್ಸವವು ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ. ಈ ಅದ್ಧೂರಿ ವೈಭವವನ್ನ ಕಣ್ತುಂಬಿಕೊಳ್ಳಲು ಕೇವಲ ಕೊಡಗು ಜಿಲ್ಲೆ ಮಾತ್ರವಲ್ಲದೆ, ರಾಜ್ಯದ ವಿವಿಧ ಮೂಲೆಗಳಿಂದ ಹಾಗೂ ನೆರೆಯ ರಾಜ್ಯಗಳಿಂದಲೂ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಮತ್ತು ಭಕ್ತರು ಆಗಮಿಸುತ್ತಿದ್ದಾರೆ.
ಊರಿನ ಮೂಲೆ ಮೂಲೆಗಳಿಂದ ಬರುವ ದಶಮಂಟಪಗಳ ಮೆರವಣಿಗೆಯು ರಾತ್ರಿಯಿಂದ ನಾಳೆ ಮುಂಜಾನೆಯವರೆಗೂ ಮುಂದುವರಿಯಲಿದೆ. ಬಣ್ಣ ಬಣ್ಣದ ದೀಪಾಲಂಕಾರಗಳು, ಸ್ತಬ್ಧಚಿತ್ರಗಳು, ಕಲಾತಂಡಗಳ ಪ್ರದರ್ಶನ ಹಾಗೂ ಡಿಜೆ ಸದ್ದಿಗೆ ಇಡೀ ಕೊಡಗು ಜಿಲ್ಲೆಯೇ ನಲಿದಾಡಲಿದ್ದು, ಈ ಜನಸಾಗರವನ್ನ ನಿಯಂತ್ರಿಸುವುದು ಆಡಳಿತಕ್ಕೆ ಒಂದು ದೊಡ್ಡ ಸವಾಲಾಗಿರುತ್ತದೆ.
ಬಸ್ ಸಂಚಾರದಲ್ಲಿ ವ್ಯತ್ಯಯ
ಕೊಡಗು ಜಿಲ್ಲೆಯ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಾಲೆಗಳಿಗೆ ತೆರಳಲು ಹೆಚ್ಚಾಗಿ ಖಾಸಗಿ ಮತ್ತು ಸರ್ಕಾರಿ ಬಸ್‌ಗಳನ್ನೇ ಅವಲಂಬಿಸಿದ್ದಾರೆ. ಆದರೆ, ಇಂದು ರಾತ್ರಿ ಆರಂಭವಾಗುವ ದಶಮಂಟಪಗಳ ಮೆರವಣಿಗೆಯು ನಾಳೆ ಬೆಳಗಿನ ಜಾವದವರೆಗೂ ನಡೆಯುವುದರಿಂದ, ರಸ್ತೆಗಳಲ್ಲಿ ಭಾರೀ ಜನದಟ್ಟಣೆ ಮತ್ತು ವಾಹನ ದಟ್ಟಣೆ ಇರಲಿದೆ. ಇದರ ಪರಿಣಾಮ ಸಾರಿಗೆ ವ್ಯವಸ್ಥೆಯ ಮೇಲೆ ಬೀರಲಿದ್ದು, ನಾಳೆ ಮುಂಜಾನೆ ಖಾಸಗಿ ಮತ್ತು ಸರ್ಕಾರಿ ಬಸ್‌ಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ.
ದೂರದ ಊರುಗಳಿಂದ ಶಾಲೆಗಳಿಗೆ ಬರುವ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್ ಸೌಲಭ್ಯ ಸಿಗದೆ ಪರದಾಡಬಾರದು. ಬಸ್‌ಗಳಿಲ್ಲದೆ ವಿದ್ಯಾರ್ಥಿಗಳು ರಸ್ತೆಗಳಲ್ಲಿ ಕಾಯುತ್ತಾ ನಿಲ್ಲುವುದು ಸುರಕ್ಷಿತವಲ್ಲ ಎಂಬ ದೃಷ್ಟಿಯಿಂದ ಜಿಲ್ಲಾಡಳಿತ ರಜೆಯ ಮಹತ್ವದ ನಿರ್ಧಾರ ಕೈಗೊಂಡಿದೆ.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿ ಆದೇಶ
ಮೆರವಣಿಗೆ ಮುಗಿದ ಬೆನ್ನಲ್ಲೇ ರಸ್ತೆಗಳಲ್ಲಿ ಜನಸಂದಣಿ ಹೆಚ್ಚಿರುವುದರಿಂದ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮತ್ತು ವಿದ್ಯಾರ್ಥಿಗಳ ಸಂಚಾರ ಸುರಕ್ಷತೆಯನ್ನ ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ನಾಳೆ ರಜೆ ನೀಡುವುದು ಸೂಕ್ತ ಎಂದು ಜಿಲ್ಲಾಡಳಿತ ನಿರ್ಧರಿಸಿದೆ.
ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿರುವ ಜಿಲ್ಲಾಧಿಕಾರಿ ಸೋಮಶೇಖರ್, ಕೊಡಗು ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ (ಖಾಸಗಿ) ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಈ ರಜೆ ಅನ್ವಯವಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.


Click it and Unblock the Notifications
