ಕೊಡಗು ಜಿಲ್ಲಾಧಿಕಾರಿ ಕಚೇರಿಗೆ ಬೀಗ ಹಾಕಿದ ಒಡೆಯರ್!
ಕೊಡಗು, ಮೇ 8 : ಕೊಡಗು ಜಿಲ್ಲಾಡಳಿತ ಮತ್ತು ಎಚ್.ಸಿ.ಎನ್.ಒಡೆಯರ್ ನಡುವಿನ ಗದ್ದಲ ಮುಂದುವರೆದಿದೆ. ಕೋಟೆ ಆವರಣದಲ್ಲಿರುವ ಜಿಲ್ಲಾಧಿಕಾರಿ ಕಚೇರಿ (ಅರಮನೆಗೆ) ಬೀಗ ಹಾಕಿರುವ ಒಡೆಯರ್ ವಿರುದ್ಧ ಜಿಲ್ಲಾಡಳಿತ ಪೊಲೀಸರಿಗೆ ದೂರು ನೀಡಿದೆ. ಈ ಅರಮನೆ ತಮಗೆ ಸೇರಿದ್ದು ಎಂದು ಒಡೆಯರ್ ಪ್ರತಿಪಾದಿಸುತ್ತಿದ್ದಾರೆ.
ಎಚ್.ಸಿ.ಎನ್. ಒಡೆಯರ್ ಕಳೆದವಾರ ಕೊಡಗು ಜಿಲ್ಲಾಡಳಿತಕ್ಕೆ ಪತ್ರವೊಂದನ್ನು ಬರೆದು, ಕೊಡಗನ್ನು ಆಳಿದ ರಾಜ ವಂಶಸ್ಥನಾದ ನನಗೆ ಜಿಲ್ಲಾಧಿಕಾರಿ ಕಚೇರಿ ಇರುವ ಅರಮನೆ ಸೇರಬೇಕು. ಆದ್ದರಿಂದ ನೀವು ಕಚೇರಿಯನ್ನು ಸ್ಥಳಾಂತರ ಮಾಡಿ, ಕಟ್ಟಡವನ್ನು ನನಗೆ ಹಸ್ತಾಂತರಿಸಿ ಎಂದು ಮನವಿ ಮಾಡಿದ್ದರು.

ಬುಧವಾರ ಕಚೇರಿಯ ಮುಂಭಾಗದ ಗೇಟ್, ಆಹಾರ ಇಲಾಖೆಯ ಸಮೀಪದ ದ್ವಾರಗಳಿಗೆ ಬೀಗ ಹಾಕಿರುವ ಒಡೆಯರ್, ಬೀಗದ ಮೇಲೆ ಎಚ್.ಸಿ.ಎನ್. ಒಡೆಯರ್, ಮಹಾರಾಜ ಆಫ್ ಕೂರ್ಗ್, ಓನರ್ ಆಫ್ ಮರ್ಕರಾ ಪ್ಯಾಲೇಸ್ ಎಂದು ಬರೆಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಗೆ ಬೀಗ ಹಾಕಿದ ಒಡೆಯರ್ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ.
ಜಿಲ್ಲಾಧಿಕಾರಿ ಹೇಳುವುದೇನು ? : ಒಡೆಯರ್ ಪತ್ರದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಅನುರಾಗ್ ತಿವಾರಿ, ಜಿಲ್ಲಾಧಿಕಾರಿಗಳ ಕಚೇರಿ ಇರುವ ಕಟ್ಟಡ ತಮಗೆ ಸೇರಿದ್ದು ಎಂಬುದಕ್ಕೆ ಒಡೆಯರ್ ಅವರು ಯಾವುದೇ ಸೂಕ್ತ ದಾಖಲೆ ನೀಡಿಲ್ಲ. ಕಟ್ಟಡಕ್ಕೆ ಬೀಗ ಹಾಕುವ ಮೂಲಕ ಸರ್ಕಾರಿ ಆಸ್ತಿಯನ್ನು ವಶಪಡಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಈ ಕುರಿತು ಪೊಲೀಸರಿಗೆ ದೂರು ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಈ ಅರಮನೆಯನ್ನು ರಾಜವಂಶಸ್ಥರಿಂದ ಬ್ರಿಟಿಷರು ತಮ್ಮ ವಶಕ್ಕೆ ಪಡೆದರು. ಸ್ವಾತಂತ್ರ್ಯ ಬಂದ ನಂತರ ಇದು ಸರ್ಕಾರಿ ಕಚೇರಿಯಾಗಿದೆ. ಅಂದಿನಿಂದಲೂ ಕರ್ನಾಟಕ ಸರ್ಕಾರದ ವಶದಲ್ಲಿ ಕಚೇರಿ ಇದೆ. ಒಡೆಯರ್ ಹೇಳಿಕೆ ನಿಜವಾದರೆ ಅವರು ಸೂಕ್ತ ದಾಖಲೆಗಳೊಂದಿಗೆ ನ್ಯಾಯಾಲಯಕ್ಕೆ ದೂರು ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಒಡೆಯರ್ ಹೇಳುವುದಿಷ್ಟು : ಅರಮನೆ ಸರ್ಕಾರಕ್ಕೆ ಸೇರಿದ್ದು ಎಂಬುದಕ್ಕೆ ಜಿಲ್ಲಾಧಿಕಾರಿ ಬಳಿಯೂ ಸೂಕ್ತ ದಾಖಲೆಗಳಿಲ್ಲ ಎಂದು ಹೇಳಿರುವ ಒಡೆಯರ್ ಅವರು, ಕೊಡಗಿನ ರಾಜರಾಗಿದ್ದ ದೊಡ್ಡ ವೀರರಾಜೇಂದ್ರ ಅವರ ಮಗಳಾದ ಮಹಾರಾಣಿ ದೇವಮ್ಮಾಜಿ ಅವರನ್ನು ಮಲ್ಲಪ್ಪ ಅವರು ವಿವಾಹವಾಗಿದ್ದರು. ನಾನು ಅವರ ಮರಿಮೊಮ್ಮಗನಾಗಿದ್ದೇನೆ. ಆದ್ದರಿಂದ ಅರಮನೆ ನನಗೆ ಸೇರಬೇಕು ಎಂದು ಪ್ರತಿಪಾದಿಸಿದ್ದಾರೆ.












Click it and Unblock the Notifications