ಬಿಬಿಎಂಪಿ ಚುನಾವಣೆ ಬಳಿಕ ನಂದಿನಿ ಹಾಲಿನ ದರ ಏರಿಕೆ
ಬೆಂಗಳೂರು, ಆಗಸ್ಟ್ 13 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ನಂತರ ನಂದಿನಿ ಹಾಲಿನ ದರ ಹೆಚ್ಚಾಳವಾಗುವ ಸಾಧ್ಯತೆ ಇದೆ. ಕೆಎಂಎಫ್ ಮಾಡಿದ ತಪ್ಪಿಗೆ ಗ್ರಾಹಕರ ಮೇಲೆ ಹೊರೆ ಹಾಕಲಾಗುತ್ತಿದೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ದೂರಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರೇವಣ್ಣ ಅವರು, ಪಶು ಆಹಾರದ ಕಚ್ಚಾವಸ್ತು ಖರೀದಿಯಿಂದ ಆಗುತ್ತಿರುವ ನಷ್ಟವನ್ನು ತುಂಬಿಕೊಳ್ಳಲು ಹಾಲಿನ ದರ ಹಾಗೂ ಪಶು ಆಹಾರ ದರ ಹೆಚ್ಚಿಸಲು ಕೆಎಂಎಫ್ ಮುಂದಾಗಿದೆ ಎಂದು ಆರೋಪಿಸಿದರು. [ಕ್ಷೀರಭಾಗ್ಯ ಯೋಜನೆ 5 ದಿನಕ್ಕೆ ವಿಸ್ತರಣೆ]

ಕೆಎಂಎಫ್ ಆಡಳಿತ ಮಂಡಳಿ ಸಭೆಯಲ್ಲಿ ಕಳೆದ 3 ತಿಂಗಳಿನಿಂದ ಕೆಎಂಎಫ್‌ನ ಐದು ಪಶು ಆಹಾರ ಉತ್ಪಾದನೆ ಘಟಕಗಳು 16.87 ಕೋಟಿ ರೂ. ನಷ್ಟ ಅನುಭವಿಸಿವೆ ಎಂದು ಚರ್ಚೆ ನಡೆಸಲಾಗಿದೆ. ಈ ನಷ್ಟ ತುಂಬಿಕೊಳ್ಳಲು ಗ್ರಾಹಕರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ ಎಂದು ಹೇಳಿದರು. [ಬಿಬಿಎಂಪಿ ಚುನಾವಣಾ ವೇಳಾಪಟ್ಟಿ]
ಹಿಂದೆ ಪಶು ಆಹಾರಕ್ಕೆ ಬೇಕಾಗುವ ಕಚ್ಚಾವಸ್ತುವನ್ನು ಬೆಳೆ ಕಟಾವಿನ ಸಂದರ್ಭದಲ್ಲಿಯೇ ಖರೀದಿಸಿ ದಾಸ್ತಾನು ಮಾಡಲಾಗುತ್ತಿತ್ತು. ಈಗ ಕೆಎಂಎಫ್ ಆಡಳಿತದ ವೈಫಲ್ಯದಿಂದಾಗಿ ಅಗತ್ಯವಿದ್ದಾಗ ಕಚ್ಚಾವಸ್ತು ಖರೀದಿ ಮಾಡಲಾಗುತ್ತಿದ್ದು, ಇದರಿಂದ ನಷ್ಟ ಉಂಟಾಗುತ್ತಿದೆ ಎಂದು ತಿಳಿಸಿದರು. [ಸದ್ಯಕ್ಕೆ ನಂದಿನಿ ಹಾಲಿನ ದರ ಏರಿಕೆಯಿಲ್ಲ]
ಕಳೆದ ಮೂರು ತಿಂಗಳಲ್ಲಿ 16.87 ಕೋಟಿ ರೂ. ನಷ್ಟ ಉಂಟಾಗಿದೆ. ಇದನ್ನು ತಪ್ಪಿಸಲು ಈಗ ಹೆಚ್ಚುವರಿಯಾಗಿ ಪ್ರತಿ ಟನ್‌ಗೆ ನೀಡುತ್ತಿರುವ 1500 ರೂ. ರಿಯಾಯಿತಿ ಮೊತ್ತವನ್ನು ಕಡಿತಗೊಳಿಸಲು ಕೆಎಂಎಫ್ ಮುಂದಾಗಿದೆ. ರಿಯಾಯಿತಿ ಕಡಿತಗೊಂಡರೆ ಹಾಲು ಉತ್ಪಾದಕರು ಹೆಚ್ಚಿನ ದರ ನೀಡಿ ಪಶು ಆಹಾರ ಖರೀದಿಸಬೇಕಾಗುತ್ತದೆ ಎಂದು ರೇವಣ್ಣ ಆತಂಕ ವ್ಯಕ್ತಪಡಿಸಿದರು.
ಹಾಲಿನ ದರ 4 ರೂ. ಹೆಚ್ಚಳ : ಕೆಎಂಎಫ್ ಆಡಳಿತ ಮಂಡಳಿಯ ವೈಫಲ್ಯದಿಂದಾಗಿ ನಷ್ಟ ಉಂಟಾಗುತ್ತಿದೆ. ಇದನ್ನು ತಪ್ಪಿಸಲು ಪ್ರತಿ ಲೀಟರ್ ಹಾಲಿನ ದರವನ್ನು 4 ರೂ. ಹೆಚ್ಚಿಸಲು ಕೆಎಂಎಫ್ ಅಧ್ಯಕ್ಷರು ಮುಂದಾಗಿದ್ದಾರೆ. ಬಿಬಿಎಂಪಿ ಚುನಾವಣೆ ಬಳಿಕ ದರ ಹೆಚ್ಚಾಗಬಹುದು ಎಂದು ರೇವಣ್ಣ ಅವರು ಹೇಳಿದರು.












Click it and Unblock the Notifications