Kiccha Sudeep: ಬಿಜೆಪಿ ಪರ ಪ್ರಚಾರಕ್ಕೆ ಬರ್ತಾರಾ ಕಿಚ್ಚ ಸುದೀಪ್? ಬೊಮ್ಮಾಯಿ ಏನಂದ್ರು?
ಹಾವೇರಿ, ಮಾರ್ಚ್ 26: ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಅವರು ಬಿಜೆಪಿ ಪರ ಪ್ರಚಾರ ನಡೆಸಿದ್ದ ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ ಅವರು, ಲೋಕಸಭೆ ಚುನಾವಣೆ ಸಮೀಪಿಸಿದ್ದು, ಮತ್ತೆ ಬಿಜೆಪಿ ಪರವಾಗಿ ಪ್ರಚಾರಕ್ಕೆ ಬರುತ್ತಾರಾ ಎಂಬ ಪ್ರಶ್ನೆ ರಾಜ್ಯ ರಾಜಕೀಯದಲ್ಲಿ ಹುಟ್ಟಿಕೊಂಡಿದೆ.
ಈ ಕುರಿತು ಹಾವೇರಿಯಲ್ಲಿ ಮಂಗಳವಾರ ಮಾಧ್ಯಮಗಳ ಜೊತೆಗೆ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ಯಾರೂ ಬರುವುದು ಇನ್ನೂ ಖಚಿತವಾಗಿಲ್ಲ. ಎಲ್ಲವೂ ಪಕ್ಷದಿಂದ ತೀರ್ಮಾನ ಆಗುತ್ತದೆ. ಚುನಾವಣಾ ಪ್ರಚಾರಕ್ಕೆ ಬರುವ ಸ್ಟಾರ್ ಪ್ರಚಾರಕರ ಜೊತೆ ಮಾತುಕತೆ ನಡೆಯುತ್ತಿದೆ. ಸ್ಟಾರ್ ಪ್ರಚಾರಕರ ಕುರಿತು ಪಕ್ಷ ತೀರ್ಮಾನ ಮಾಡಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ರಾಜ್ಯ, ರಾಷ್ಟ್ರ ನಾಯಕರು ಹಾಗೂ ಸೆಲೆಬ್ರಿಟಿಗಳು ಪ್ರಚಾರದಲ್ಲಿ ಭಾಗಿ ಆಗಲಿದ್ದಾರೆ. ನಮಗೆ ಜನರಿಂದ ಅದ್ಭುತವಾದ ಪ್ರತಿಕ್ರಿಯೆ ಸಿಗುತ್ತಿದೆ. ಜನ ಬೆಂಬಲ ಕೊಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಗಾಳಿ ಕರ್ನಾಟಕದ ಉದ್ದಗಲಕ್ಕೂ ಇದೆ ಎಂದು ತಿಳಿಸಿದರು.
ಹಲವು ಕ್ಷೇತ್ರಗಳಿಗೆ ಹಾಲಿ ಬಿಜೆಪಿ ಅಭ್ಯರ್ಥಿಗಳ ಬದಲಾವಣೆಗೆ ಒತ್ತಡ ಹೇರುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಹಾಲಿ ಕೊಪ್ಪಳ ಸಂಸದರಾದ ಕರಡಿ ಸಂಗಣ್ಣ ಅವರಿಗೆ ಮಾತಾಡಿದ್ದೇನೆ, ಅವರೂ ಪಕ್ಷದ ತೀರ್ಮಾನವನ್ನು ಒಪ್ಪಿಕೊಂಡಿದ್ದಾರೆ. ಇಂದು ಯಡಿಯೂರಪ್ಪನವರು ದಾವಣಗೆರೆಗೆ ಹೋಗುತ್ತಾರೆ, ದಾವಣಗೆರೆಯದ್ದೂ ಸರಿಯಾಗಲಿದೆ. ನಾಳೆ ಯಡಿಯೂರಪ್ಪ ಬೆಳಗಾವಿಗೆ ಹೋಗುತ್ತಾರೆ, ಅಲ್ಲಿಯೂ ಕೂಡಾ ಸರಿಯಾಗುತ್ತದೆ ಎಂದು ತಿಳಿಸಿದರು.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆಗೆ ಬೆಂಬಲ ನೀಡುವುದಿಲ್ಲ ಎಂಬ ಶಾಸಕ ಎಸ್ ಟಿ ಸೋಮಶೇಖರ್ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಉಹಾಪೋಹಗಳಿಗೆ ನಾನು ಉತ್ತರ ಕೊಡುವುದಿಲ್ಲಅವರವರ ನಿರ್ಣಯಕ್ಕೆ ಅವರೇ ಉತ್ತರ ಕೊಡುತ್ತಾರೆ ಎಂದರು.
ಯಡಿಯೂರಪ್ಪ ಆಪ್ತರಿಗೆ ಸಿಎಂ ಸಿದ್ದರಾಮಯ್ಯ ಗಾಳ ಹಾಕಿರುವ ಕುರಿತು ಕೇಳಿದ ಪ್ರಶ್ನೆಗೆ ಚುನಾವಣೆ ಯುದ್ದ ಭೂಮಿಯಲ್ಲಿ ಅವರವರ ರಣತಂತ್ರ ಅವರು ಮಾಡುತ್ತಾರೆ. ನಮ್ಮ ರಣತಂತ್ರ ನಾವು ಮಾಡುತ್ತೇವೆ. ಜನ ಮಾಲೀಕರು, ಜನ ತೀರ್ಮಾನ ಮಾಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.












Click it and Unblock the Notifications