Mallikarjuna Kharge: ಕಲ್ಯಾಣ ಕರ್ನಾಟಕದಲ್ಲಿ ಖರ್ಗೆ ಕಮಾಲ್: ಎಲ್ಲಾ ಐದು ಸ್ಥಾನಗಳು ಕಾಂಗ್ರೆಸ್ ಪಾಲು
ಕಲಬುರಗಿ ಜೂನ್ 5: ಲೋಕಸಭಾ ಚುನಾವಣೆಯ ಫಲಿತಾಂಶ ಕಳೆದ ದಿನ ಬಹಿರಂಗವಾಗಿದ್ದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಲ್ಯಾಣ ಕರ್ನಾಟಕದಲ್ಲಿ ಕಮಾಲ್ ಮಾಡಿದ್ದಾರೆ.
ರಾಜ್ಯದ ಈಶಾನ್ಯ ಭಾಗದಲ್ಲಿರುವ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿನ ಎಲ್ಲಾ ಐದು ಲೋಕಸಭಾ ಮತ ಕ್ಷೇತ್ರಗಳು ಕಾಂಗ್ರೆಸ್ ವಶವಾಗಿದ್ದು, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆನೆ ಬಲ ಬಂದಂತಾಗಿದೆ. ಕಲಬುರಗಿ ಸೇರದಂತೆ, ರಾಯಚೂರು, ಬಳ್ಳಾರಿ, ಕೊಪ್ಪಳ ಹಾಗೂ ಬೀದರ್ ಲೋಕಸಭಾ ಕ್ಷೇತ್ರಗಳಲ್ಲಿ ಭಾರಿ ಬಿರುಸಿನ ಸ್ಪರ್ಧೆ ಏರ್ಪಟ್ಟಿದ್ದರೂ ಮತದಾರರು ಕಾಂಗ್ರೆಸ್ ಕೈ ಹಿಡಿದಿದ್ದಾರೆ.

ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿದ್ದು ರಾಜಕೀಯವಾಗಿ ಗಮನ ಸೆಳೆದಿದೆ. ಈ ಗೆಲುವಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರದ್ದು ಸಿಂಹ ಪಾಲು ಇದೆ ಎನ್ನಲಾಗುತ್ತಿದೆ. ಅಲ್ಲದೆ ರಾಜ್ಯದ ದಕ್ಷಿಣ ಭಾಗ, ಕಿತ್ತೂರು ಕರ್ನಾಟಕ, ಕರಾವಳಿಯಲ್ಲಿ ಕಾಂಗ್ರೆಸ್ ಪಕ್ಷದ ಸಾಧನೆಗೆ ಹೋಲಿಕೆ ಮಾಡಿದರೆ ಕಲ್ಯಾಣ ಕರ್ನಾಟಕದಲ್ಲಿ ಮಾತ್ರ ಎಲ್ಲಾ ಪಂಚ ಕ್ಷೇತ್ರಗಳು ಕೈವಶವಾಗುವುದರೊಂದಿಗೆ ಪಕ್ಷಕ್ಕೆ ದೊಡ್ಡ ಮಟ್ಟದ ಚೈತನ್ಯ ತಂದಿವೆ.
ಕಲ್ಯಾಣ ನಾಡಲ್ಲಿನ ಕಾಂಗ್ರೆಸ್ ಭರ್ಜರಿ ಜಯಕ್ಕೆ ಎಐಸಿಸಿ ಅಧ್ಯಕ್ಷರಾಗಿರುವ ಡಾ.ಮಲ್ಲಿಕಾರ್ಜುನ ಖರ್ಗೆಯವರ ವರ್ಷಸ್ಸೆ ಕಾರಣ ಎನ್ನಲಾಗುತ್ತಿದೆ. ಈ ಬಾರಿ ಕಲ್ಯಾಣದ ಎಲ್ಲಾ ಐದು ಕ್ಷೇತ್ರಗಳಲ್ಲಿನ ಟಿಕೆಟ್ ಹಂಚಿಕೆಯಲ್ಲಿ ಖರ್ಗೆಯವರೇ ಅಳೆದು ತೂಗಿ ಹೊಸಬರಿಗೆ ಕೈ ಹಿಡಿದು ಕಣಕ್ಕಿಳಿಸಿದ್ದರು. ಅವರ ರಾಜಕೀಯ ತಂತ್ರಗಾರಿಕೆ ಕಲ್ಯಾಣ ಕೈವಶವಾಗಿರುವುದರ ಹಿಂದಿನ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.
ಬೀದರ್‌ನಲ್ಲಿ ಅತಿ ಚಿಕ್ಕ ವಯಸ್ಸಿನ ಸಾಗರ್ ಖಂಡ್ರೆಯನ್ನು ಕಣಕ್ಕೆ ಇಳಿಸಿರುವುದು, ರಾಯಚೂರಿನಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಜಿ ಕುಮಾರ್‌ನಾಯಕ್‌ಗೆ ಮಣೆ ಹಾಕಿದ್ದು, ಕೊಪ್ಪಳದಲ್ಲಿನ ಬಿಜೆಪಿ ಗುಂಪುಗಾರಿಕೆಯ ಲಾಭ ಪಡೆಯಲು ಬಸವರಾಜ ಹಿಟ್ನಾಳ್ ಅವರನ್ನೇ ಕಣಕ್ಕಿಸಿ ಯಶಸ್ಸು ಕಂಡಿರೋದು, ತಮ್ಮ ಸೋಲಿನ ಸೇಡು ತೀರಿಸಿಕೊಳ್ಳಲು ಕಲಬುರಗಿ ಕಣದಲ್ಲಿ ತಾವು ನಿಲ್ಲದೆ ಅಳಿಯ ರಾಧಾಕೃಷ್ಣರನ್ನು ಅಖಾಡಕ್ಕಿಳಿಸಿದ್ದು, ಬೇರು ಮಟ್ಟದ ಕೆಲಸಗಾರ ಎಂದು ಗುರುತಿಸಿಕೊಂಡಿರುವ ಮಾಜಿ ಸಚಿವ ತುಕಾರಾಮ್ ಅವರಿಗೆ ಬಳ್ಳಾರಿಯಿಂದ ಟಿಕೆಟ್ ಕೊಟ್ಟು ಬಿಜೆಪಿಯ ರಾಮುಲುಗೆ ಸೆಡ್ಡು ಹೊಡೆದಿದ್ದು ಹೀಗೆ ಖರ್ಗೆಯವರು ಉರುಳಿಸಿದ ರಾಜಕೀಯ ದಾಳಗಳೆಲ್ಲವು ನಿಖರ ಗುರಿ ತಲುಪಿದೆ.
ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್ ನಡೆಸಿದ ಬಹಿರಂಗ ರ್ಯಾಲಿಗಳನ್ನು ಪಾಲ್ಗೊಂಡ ಮುಖಂಡರು, ಖರ್ಗೆಯವರು ಅಭಿವೃದ್ಧಿ ಮಂತ್ರ ಜಪಿಸಿದರೆ ಹೊರತು ಉಳಿದ್ಯಾವ ಸಂಗತಿಗಳಿಗೂ ಮಹತ್ವ ನೀಡಿರಲಿಲ್ಲ. ಕಲ್ಯಾಣಕ್ಕೆ ಅಡಚಣೆ ಒಡ್ಡಿರುವ ಯುವಕರಲ್ಲಿನ ನಿರುದ್ಯೋಗ, ಮೂಲ ಸವಲತ್ತಿನ ಅಭಿವೃದ್ಧಿ ಬಗ್ಗೆಯೇ ಹೇಳಿದ್ದು ಜನಮನಕ್ಕೆ ನಾಟಿತು ಎನ್ನಲಾಗಿದೆ.
ಲೋಕಸಭಾ ಚುನಾವಣೆ ಫಲಿತಾಂಶ
543 ಲೋಕಸಭಾ ಸೀಟುಗಳ ಪೈಕಿ 291ರಲ್ಲಿ ಎನ್‌ಡಿಎ ಮುನ್ನಡೆ ಸಾಧಿಸಿದೆ. ಇದರಲ್ಲಿ ಬಿಜೆಪಿ ಮುನ್ನಡೆ ಗಳಿಸಿರುವ ಸ್ಥಾನಗಳ ಸಂಖ್ಯೆ 240 ಮಾತ್ರ. ಕರ್ನಾಟಕದ 28 ಕ್ಷೇತ್ರಗಳಲ್ಲಿ 17 ಕ್ಷೇತ್ರಗಳಲ್ಲಿ ಬಿಜೆಪಿ, 9 ಕಾಂಗ್ರೆಸ್ ಹಾಗೂ 2 ಜೆಡಿಎಸ್ ಪಡೆದುಕೊಂಡಿದೆ.












Click it and Unblock the Notifications