KEA ಸರ್ವರ್ ಡೌನ್: UGCET ಸೀಟು ಹಂಚಿಕೆ ಪ್ರಕ್ರಿಯೆ ವಿಳಂಬ! ಅಭ್ಯರ್ಥಿಗಳು ಗಮನಿಸಿ, ಕೊನೆ ದಿನ ವಿಸ್ತರಣೆ..
ಬೆಂಗಳೂರು, ಜುಲೈ 12: ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET or UGCET-25) ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ವಿವಿಧ ವೃತ್ತಿಪರ ಕೋರ್ಸ್‌ಗಳ ಸೀಟು ಹಂಚಿಕೆಗೆ, ಆಪ್ಷನ್ ಆಯ್ಕೆಗೆ ಆಹ್ವಾನಿಸಲಾಗಿತ್ತು. ದಾಖಲೆ ಪರಿಶೀಲನೆಗೆ ದಿನಾಂಕ ಪ್ರಕಟಿಸಲಾಗಿತ್ತು. ಇದೀಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸರ್ವರ್ ನಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಈ ಸಂಬಂಧ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಅವರು ಅಭ್ಯರ್ಥಿಗಳಿಗೆ ಮಹತ್ವ ಅಪ್ಡೇಟ್ ನೀಡಿದ್ದಾರ.ೆ
KEA ಸರ್ವರ್ ಡೌನ್ ಆಗಿತ್ತು. ಸಮಸ್ಯೆ ಕಾಣಿಸುತ್ತಿದ್ದಂತೆ ಪರಿಹರಿಸಲಾಗುತ್ತಿದೆ. ಸರ್ವರ್ ಸಮಸ್ಯೆ ಸಹಜ ಸ್ಥಿತಿಗೆ ಮರಳುತ್ತಿದೆ. ಸರ್ವರ್ ಸಮಸ್ಯೆ ಕಾರಣಕ್ಕೆ ಲಾಗಿನ್ ಆಗಿ ಆಪ್ಷನ್ಸ್ ಎಂಟ್ರಿ ಮಾಡಲು ಕೊಂಚ ವಿಳಂಬವಾಗುತ್ತಿದೆ. ಇದನ್ನು ಪರಿಗಣಿಸಿ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಆಪ್ಷನ್ ಎಂಟ್ರಿ ದಿನಾಂಕವನ್ನು ಜುಲೈ 15ರಿಂದ ಜುಲೈ 18ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಯುಜಿಸಿಇಟಿ 2025 ಪರೀಕ್ಷಾ ಅಭ್ಯರ್ಥಿಗಳು ಎಂಜಿನಿಯರಿಂಗ್, ಪಶು ವೈದ್ಯಕೀಯ ಮತ್ತು ಪಶುಸಂಗೋಪನೆ, ಕೃಷಿ ವಿಜ್ಞಾನ, ಬಿ.ಪಿ.ಟಿ. ಅಲೈಡ್ ಹೆಲ್ತ್ ಸೈನ್ಸ್ ಕೋರ್ಸುಗಳಿಗೆ ಸೀಟು ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳು ಯಾವುದೇ ಆತಂಕಕ್ಕೆ ಒಳಗಾಗದೇ ಈ ಪ್ರಕ್ರಿಯೆ ಪೂರೈಸಲು ಈ ಅವಕಾಶ ಬಳಸಿಕೊಳ್ಳಬೇಕು.
ಅಭ್ಯರ್ಥಿಗಳು, ಕಾಲೇಜುಗಳು ಮತ್ತು ಕೋರ್ಸುಗಳ ಪಟ್ಟಿಯನ್ನು ಆದ್ಯತೆಯ ಕ್ರಮದಲ್ಲಿ (ಕಾಲೇಜ್ ಕೋಡ್ ಮತ್ತು ಕೋರ್ಸ್ ಕೋಡ್) ಬಿಳಿ ಕಾಗದದಲ್ಲಿ ಮುಂಚಿತವಾಗಿಯೇ ಬರೆದು ಸಿದ್ದಪಡಿಸಿಕೊಂಡು ನಂತರ ಪೋರ್ಟಲ್ ನಲ್ಲಿ ಆಪ್ಷನ್ ಎಂಟ್ರಿ ನಮೂದಿಸಬೇಕು. ಹೀಗೆ ಮಾಡುವುದರಿಂದ ಒಮ್ಮೆಲೇ ಅಧಿಕ ಸಂಖ್ಯೆಯ ಅಭ್ಯರ್ಥಿಗಳು ಪೋರ್ಟಲ್ ಅನ್ನು ದೀರ್ಘ ಸಮಯದವರೆಗೆ ಸಕ್ರಿಯ ಅವಸ್ಥೆಯಲ್ಲಿ ಇರಿಸುವುದು ತಪ್ಪುತ್ತದೆ. ಇತರ ಅಭ್ಯರ್ಥಿಗಳಿಗೆ ಪೋರ್ಟಲ್ ಲಭ್ಯತೆಯನ್ನು ಇದು ಸುಲಭಗೊಳಿಸುತ್ತದೆ ಎಂದು ಅವರು ವಿವರಿಸಿದರು.
ಜುಲೈ 28ಕ್ಕೆ ಫಲಿತಾಂಶ ಪ್ರಕಟ
ಆಯ್ಕೆ ನಮೂದು ಪೋರ್ಟಲ್ ಪುನರಾರಂಭದ ಬಗ್ಗೆ ಎಲ್ಲ ಅಭ್ಯರ್ಥಿಗಳಿಗೆ ಜ್ಞಾಪನ ಸಂದೇಶ ಕಳುಹಿಸಲಾಗುವುದು. ಮೊದಲ ಸುತ್ತಿನ ಸೀಟು ಹಂಚಿಕೆ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಲಾಗಿದೆ. ಜುಲೈ 21ರಂದು ಅಣಕು ಸೀಟು ಹಂಚಿಕೆ ಫಲಿತಾಂಶ ಹಾಗೂ ಜುಲೈ 28ರಂದು ಅಂತಿಮ ಫಲಿತಾಂಶ ಹೊರಬೀಳಲಿದೆ.

ವೈದ್ಯಕೀಯ ಕೋರ್ಸ್: ಜುಲೈ 17 ದಾಖಲೆ ಪರಿಶೀಲನೆ
ಜುಲೈ 7ರ ನಂತರ ಯುಜಿನೀಟ್ -2025ಕ್ಕೆ ನೋಂದಣಿ ಮತ್ತು ಆನ್ಲೈನ್ ಅರ್ಜಿ ಭರ್ತಿ ಮಾಡಿ, ಶುಲ್ಕ ಪಾವತಿಸಿರುವ ('ಎ'ಯಿಂದ 'ಒ'ವರೆಗೆ ಹಾಗೂ 'ಝಡ್' ಕ್ಲಾಸ್ ಅಡಿಯಲ್ಲಿ ಸೀಟು ಕ್ಲೇಮು ಮಾಡಿರುವವರು) ಅಭ್ಯರ್ಥಿಗಳು, ವೈದ್ಯಕೀಯ / ದಂತ ವೈದ್ಯಕೀಯ/ಆರ್ಯುವೇದ/ಹೋಮಿಯೋಪತಿ /ಯುನಾನಿ ಕೋರ್ಸುಗಳ ಪ್ರವೇಶಾತಿಗಾಗಿ ಎಲ್ಲಾ ಅಗತ್ಯ ಮೂಲ ದಾಖಲೆಗಳ ಪರಿಶೀಲನೆಗೆ ಕೆಇಎ, ಕಚೇರಿಗೆ ಜುಲೈ 17 ರಿಂದ 19ರೊಳಗೆ ಕಡ್ಡಾಯವಾಗಿ ಹಾಜರಾಗಬೇಕು ಎಂದು ಹೇಳಿದರು.
ವಿಶೇಷ ಪ್ರವರ್ಗಗಳಡಿ ಕ್ಲೇಮು ಮಾಡಿರುವವರು, ವಿಶೇಷ ಚೇತನ ಅಭ್ಯರ್ಥಿಗಳು, 'ಎ'ಯಿಂದ 'ಒ' ಹಾಗೂ 'ಝಡ್' ಕ್ಲಾಸಿನಡಿ ಕ್ಲೇಮು ಮಾಡಿರುವವರು ದಾಖಲೆಗಳ ಪರಿಶೀಲನೆಗೆ ಹಾಜರಾಗುವ ಕುರಿತಾದ ವೇಳಾಪಟ್ಟಿಯನ್ನು ಕೆಇಎ ವೆಬ್ ಸೈಟಿನಲ್ಲಿ ಪ್ರಕಟಿಸಲಾಗಿದೆ. ಆ ಪ್ರಕಾರ ಹಾಜರಾಗಬೇಕು, ಪರಿಶೀಲನೆಗೆ ಸಲ್ಲಿಸಬೇಕಾದ ಮೂಲ ದಾಖಲೆಗಳ ವಿವರಗಳನ್ನು ಯುಜಿಸಿಇಟಿ ಸಂದರ್ಭದಲ್ಲಿಯೇ ನೀಡಲಾಗಿದ್ದು, ಓದಿಕೊಳ್ಳುವಂತೆ ಅಭ್ಯರ್ಥಿಗಳಿಗೆ ತಿಳಿಸಿದ್ದಾರೆ.
ಕನ್ನಡ ಭಾಷಾ ಪರೀಕ್ಷೆ
ಹೊಸದಾಗಿ ನೋಂದಣಿ ಮಾಡಿರುವ ಹೊರನಾಡು ಮತ್ತು ಗಡಿನಾಡು ಕನ್ನಡ ಅಭ್ಯರ್ಥಿಗಳಿಗೆ ಜುಲೈ 17ರಂದು ಮಧ್ಯಾಹ್ನ 3.30ರಿಂದ ಸಂಜೆ 4.30ರವರೆಗೆ ಬೆಂಗಳೂರು ಕೇಂದ್ರದಲ್ಲಿ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ. ಅಭ್ಯರ್ಥಿಗಳು ತಪ್ಪದೇ ಪರೀಕ್ಷೆ ಎದುರಿಸುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.













Click it and Unblock the Notifications