BMTC-KKRTC ನೇಮಕಾತಿ: ಪರೀಕ್ಷೆಯ ತಾತ್ಕಾಲಿಕ ಅಂಕಪಟ್ಟಿ ಪ್ರಕಟ: ಕಾಗದ ಪರೀಕ್ಷೆಗೆ KEA ನಿರ್ಧಾರ
ಬೆಂಗಳೂರು, ಆಗಸ್ಟ್ 02: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) BMTC, KUWSDB ಮತ್ತು KKRTC ಸಂಸ್ಥೆಗಳಲ್ಲಿ ಖಾಲಿ ಇರುವ ಹಲವಾರು ಹುದ್ದೆಗಳ ನೇಮಕಾತಿ ಸಂಬಂಧ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿತ್ತು. ಇದೀಗ ಆ ಪರೀಕ್ಷೆಗಳಿಗೆ ತಾತ್ಕಾಲಿಕ ಅಂಕ ಪಟ್ಟಿಯನ್ನು ಪ್ರಾಧಿಕಾರ ಪ್ರಕಟಿಸಿದೆ.
ರಾಜ್ಯ ಸರ್ಕಾರವು ಕಳೆದ ತಿಂಗಳೂ ಜುಲೈ 13 ಹಾಗೂ 14ರಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC)ಗೆ ನಿರ್ವಾಹಕರು, KUWSDBಗೆ ಪ್ರಥಮ ದರ್ಜೆ ಲೆಕ್ಕ ಸಹಾಯಕರು ಮತ್ತು KKRTC ಸಂಸ್ಥೆಗಳಲ್ಲಿನ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಹರಿಗೆ ಪರೀಕ್ಷೆ ನಡೆಸಿತ್ತು.

ಆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ತಾತ್ಕಾಲಿಕ ಕೀ ಉತ್ತರಗಳನ್ನು ಜುಲೈ 16ರಂದು ಪ್ರಕಟಿಸಿತ್ತು. ಈ ಕುರಿತು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿತ್ತು. ಬಳಿಕ ಸ್ವೀಕೃತವಾದ ಆಕ್ಷೇಪಣೆಗಳ ಆಧಾರದಲ್ಲಿ ತಜ್ಞರ ಸಮಿತಿಯ ಮೂಲಕ ಪರಿಶೀಲಿಸಿ, ತಜ್ಞರ ಸಮಿತಿಯ ಶಿಫಾರಸ್ಸಿನಂತೆ ಪರಿಷ್ಕೃತ ಕೀ ಉತ್ತರಗಳನ್ನು ಜುಲೈ 24ರಂದು ಬಿಡುಗಡೆ ಮಾಡಲಾಗಿತ್ತು.
KEA ವೆಬ್‌ಸೈಟ್‌ನಲ್ಲಿ ಅಂಕಪಟ್ಟಿ ಲಭ್ಯ
ಇದೆಲ್ಲ ಪ್ರಕ್ರಿಯೆ ನಂತರ ಪ್ರಾಧಿಕಾರವು ಆಗಸ್ಟ್ 01ರಂದು KEA ಅಧಿಕೃತ ವೆಬ್‌ಸೈಟ್‌ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತಾತ್ಕಾಲಿಕ ಅಂಕ ಪಟ್ಟಿ ಪ್ರಕಟಿಸಿದೆ. ಇದಕ್ಕೆ ಸಂಬಂಧಿಸಿದ ಆಕ್ಷೇಪಣೆಗಳು ಇದ್ದರೆ ನಾಳೆ ಆಗಸ್ಟ್ 03ರ ಸಂಜೆ 5.30ರೊಳಗೆ ನಿಗದಿತ ಲಿಂಕ್ ಮೂಲಕ ಪೂರಕ ದಾಖಲೆಗಳ ಸಹಿತ ಆಕ್ಷೇಪಣೆ ಸಲ್ಲಿಸಬೇಕು ಎಂದು ಪ್ರಾಧಿಕಾರ ತಿಳಿಸಿದೆ. ದಾಖಲೆಗಳೇ ಇಲ್ಲದೆ ಆಕ್ಷೇಪಣೆ ಪರಿಗಣಿಸುವುದಿಲ್ಲ ಎಂದು ತಿಳಿಸಿದೆ.
ಪರೀಕ್ಷೆ ಎದುರಿಸಿದ ಅಭ್ಯರ್ಥಿಗಳು ಕೆಇಎ ಅಧಿಕೃತ ವೆಬ್‌ಸೈಟ್‌ನಲ್ಲಿ ತಮ್ಮ ತಾತ್ಕಾಲಿಕ ಅಂಕಪಟ್ಟಿ ಗಮನಿಸಬೇಕು.

KEA: ಕಾಗದ ರಹಿತ ಸ್ಪರ್ಧಾತ್ಮಕ ಪರೀಕ್ಷೆಗಳು
ರಾಜ್ಯದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಸರ್ಕಾರ ಕಾಗದ ರಹಿತ ಪರೀಕ್ಷೆ ನಡೆಸಲು ನಿರ್ಧರಿಸಿದೆ. 20,000 ಕ್ಕಿಂತ ಕಡಿಮೆ ಅಭ್ಯರ್ಥಿಗಳು ಬರೆಯುವ ಪರೀಕ್ಷೆಗಳನ್ನು ಸದ್ಯಕ್ಕೆ ಕಾಗದ ರಹಿತವಾಗಿ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ವೈಧ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಹಾಗೂ ಉನ್ನತ ಶಿಕ್ಷಣ ಸಚಿವ ಎಂಸಿ ಸುಧಾಕರ್ ನೇತೃತ್ವದಲ್ಲಿ ಗುರುವಾರ ಪ್ರಾಧಿಕಾರ ಆಡಳಿತ ಮಂಡಳಿಯ ಸಭೆ ನಡೆಯಿತು. ಈ ವೇಳೆ ಕಾಗದ ರಹಿತ ಪರೀಕ್ಷೆ ಆಯೋಜನೆಗೆ ನಿರ್ಧರಿಸಲಾಗಿದೆ.












Click it and Unblock the Notifications