
ಅ.28 ರಂದು KCET 2022 ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟ, ಪರಿಶೀಲನೆ ಹೇಗೆ?
ಬೆಂಗಳೂರು, ಅಕ್ಟೋಬರ್ 27: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ) ಮೊದಲ ಸುತ್ತಿನ ಸೀಟು ಹಂಚಿಕೆಯ ಮಾಹಿತಿಯನ್ನು ನಾಳೆ (ಶುಕ್ರವಾರ) ಅಕ್ಟೋಬರ್ 28 ರಂದು ಪ್ರಕಟಿಸುವುದಾಗಿ ತಿಳಿಸಿದೆ.
ಕೆಸಿಇಟಿ ಮೊದಲ ಸುತ್ತಿನ ಸೀಟು ಹಂಚಿಕೆಯು ರಾಜ್ಯ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ kea.kar.nic.in ನಲ್ಲಿ ಪ್ರಕಟಗೊಳ್ಳಲಿದೆ. ಕೌನ್ಸೆಲಿಂಗ್ ಪ್ರಕ್ರಿಯೆಗೆ ನೋಂದಾಯಿತರಾದ ಅಭ್ಯರ್ಥಿಗಳು 2022ನೇ ಸಾಲಿನ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ ಸೀಟು ಹಂಚಿಕೆಯನ್ನು ವೀಕ್ಷಿಸಲು ಲಾಗಿನ್ ಆಗಬೇಕು.
KCET Result 2022: ಸೀಟು ಹಂಚಿಕೆ,ಶುಲ್ಕದ ಮಾಹಿತಿ ಹೀಗೆ ಪಡೆಯಿರಿ
ಅಭ್ಯರ್ಥಿಗಳ ಆಯ್ಕೆಗಳು, ಮತ್ತವರ ಕೆಸಿಇಟಿ ಕಾರ್ಯಕ್ಷಮತೆ ಮತ್ತು ಸೀಟುಗಳ ಲಭ್ಯತೆಯ ಆಧಾರದ ಮೇಲೆ ಕೆಸಿಇಟಿ 2022 ಸೀಟು ಹಂಚಿಕೆಯಾಗಲಿದೆ. ಹಂಚಿಕೆಯಾದ ನಂತರ ಸೀಟುಗಳಿಗೆ ಅನುಗುಣವಾಗಿ ಅಭ್ಯರ್ಥಿಗಳು ಆಯ್ಕೆಗಳನ್ನು ಆರಿಸಿಕೊಳ್ಳಬಹುದಾಗಿದೆ.
ಅಭ್ಯರ್ಥಿಗಳು ಈಗಾಗಲೇ ತಮ್ಮ ಇಷ್ಟದ ಸಂಸ್ಥೆಗಳು ಮತ್ತು ವಿಷಯಗಳನ್ನು ಕೆಸಿಇಟಿ 2022 ಪೋರ್ಟಲ್ ಅನ್ನು ಭರ್ತಿ ಮಾಡಿದ್ದಾರೆ. ಅಂತಿಮ ಕೆಸಿಇಟಿ ಸೀಟು ನಿಯೋಜನೆ ಮಾಡುವ ಪರೀಕ್ಷಾ ಪ್ರಾಧಿಕಾರವು ಈಗಾಗಲೇ ಅಣುಕು ಸೀಟು ಹಂಚಿಕೆ ಫಲಿತಾಂಶವನ್ನು ಇದೇ ಅ.21ರಂದು ಪ್ರಕಟಿಸಿತ್ತು. ಈ ಫಲಿತಾಂಶಗಳು ಅಭ್ಯರ್ಥಿಗಳಿಗೆ ಲಭ್ಯವಾಗುವಂತೆ ನೋಡಿಕೊಂಡ ಪ್ರಾಧಿಕಾರವು ಅಂತಿಮ ಪಟ್ಟಿಯನ್ನು ನಾಳೆ ಶುಕ್ರವಾರ ಬಿಡುಗಡೆ ಮಾಡಲಿದೆ.
KCET 2022 ಹಂಚಿಕೆ ಫಲಿತಾಂಶ ಹೀಗೆ ಪರಿಶೀಲಿಸಿ
ಅಭ್ಯರ್ಥಿಗಳು ಮೊದಲು ರಾಜ್ಯ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ kea.kar.nic.in ಗೆ ಭೇಟಿ ಕೊಡಿ. ನಂತರ ಅಲ್ಲಿರುವ ಕೆಸಿಇಟಿ ಸೀಟು ಹಂಚಿಕೆ ಮೊದಲ ಸುತ್ತು 2022 ಎಂಬುದರ ಮೇಲೆ ಕ್ಲಿಕ್ ಮಾಡಿ. ಮುಂದುವರೆದು ಅಭ್ಯರ್ಥಿಗಳು ಕರ್ನಾಟಕ ಸಿಇಟಿ ಸಂಖ್ಯೆಯ ತಮ್ಮ ಲಾಗಿನ್ ಮಾಹಿತಿ ನಮೂದಿಸಿ, ಸಬ್ಮಿಟ್ ಬಟನ್ ಒತ್ತಿರಿ.
ಇದಾದ ಕೂಡಲೇ ಕೆಸಿಇಟಿ ಮೊದಲ ಸುತ್ತಿನ ಸೀಟು 2022 ಹಂಚಿಕೆಯ ಪಟ್ಟಿ ಪ್ರದರ್ಶನಗೊಳ್ಳುತ್ತದೆ. ಬಳಿಕ ಅಲ್ಲಿಯೇ ಕೆಸಿಇಟಿ ಸೀಟು ಹಂಚಿಕೆಯ ಪಟ್ಟಿ ಡೌನ್‌ಲೋಡ್ ಆಯ್ಕೆ ಇರುತ್ತದೆ. ಅಭ್ಯರ್ಥಿಗಳು ತಮ್ಮ ಸೀಟು ನಿಯೋಜನೆಯ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಪಟ್ಟಿ ಆಯ್ಕೆ ಮಾಡಿಕೊಂಡು ಅಭ್ಯರ್ಥಿಗಳು ನಿಗದಿತ ಶುಲ್ಕ ಪಾವತಿಸಿ ಪ್ರವೇಶ ಪತ್ರವನ್ನು ಅಕ್ಟೋಬರ್ 29ರಿಂದ ನವೆಂಬರ್ 2ರೊಳಗೆ ಡೌನ್‌ಲೋಡ್ ಮಾಡಿಕೊಳ್ಳಬಹುದು.

ನಂತರ ನಿಯಮದಂತೆ ಅಗತ್ಯ ದಾಖಲೆ ಮತ್ತು ಪ್ರಮಾಣಪತ್ರಗಳ ಸಹಿತವಾಗಿ ಸೀಟು ಮತ್ತು ಗೊತ್ತುಪಡಿಸಿದ ಕಾಲೇಜಿಗೆ ವರದಿ ಮಾಡಿಕೊಳ್ಳಬೇಕು.