ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ 2024; ಅಭ್ಯರ್ಥಿಗಳಿಗೆ ಸೂಚನೆಗಳು
ಬೆಂಗಳೂರು, ಜೂನ್ 26: ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ 2024 ಜೂನ್ 30ರಂದು ರಾಜ್ಯಾದ್ಯಂತ ನಡೆಯಲಿದೆ. ಪರೀಕ್ಷೆಯನ್ನು ಶಾಂತಿಯುತವಾಗಿ ನಡೆಯಲು ಅಗತ್ಯವಾದ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು, ಅಭ್ಯರ್ಥಿಗಳಿಗೆ ಮಾರ್ಗಸೂಚಿಗಳನ್ನು ಸಹ ಹೊರಡಿಸಲಾಗಿದೆ.
ಕೆಎಆರ್‌ಟಿಇಟಿ-2024 ಪರೀಕ್ಷೆಗೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ವಿವಿಧ ಜಿಲ್ಲಾ ಕೇಂದ್ರದಲ್ಲಿ ಪರೀಕ್ಷೆ ನಡೆಯಲಿದ್ದು, ಜಿಲ್ಲಾಡಳಿತಗಳು ಅಗತ್ಯ ವ್ಯವಸ್ಥೆ ಮಾಡಿಕೊಳ್ಳುತ್ತಿವೆ. ಪರೀಕ್ಷೆಯನ್ನು ಕೇಂದ್ರೀಕೃತ ದಾಖಲಾತಿ ಘಟಕ ಬೆಂಗಳೂರು ಇವರ ವತಿಯಿಂದ ನಡೆಸಲಾಗುತ್ತದೆ.

ಜೂನ್ 30ರ ಭಾನುವಾರ ಮೊದಲ ಅಧಿವೇಶನದ ಪರೀಕ್ಷೆ ಬೆಳಗ್ಗೆ 9.30 ರಿಂದ 12 ಗಂಟೆಯವರೆಗೆ ನಡೆಯಲಿದೆ. ಎರಡನೇ ಅಧಿವೇಶನದ ಪರೀಕ್ಷೆ ಮಧ್ಯಾಹ್ನ 2 ಗಂಟೆಯಿಂದ 4.30ರ ತನಕ ನಡೆಯಲಿದೆ. ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ಭದ್ರತಾ ವ್ಯವಸ್ಥೆ ಮಾಡಲಾಗುತ್ತಿದೆ.
ಪರೀಕ್ಷೆಗೆ ಅರ್ಜಿ ಸಲ್ಲಿಸಿರುವವರು https://schooleducation.karnataka.gov.in/cacell/kn ವೆಬ್‍ಸೈಟ್‍ನಲ್ಲಿ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕ ನಮೂದಿಸುವುದರ ಮೂಲಕ ಪ್ರವೇಶ ಪತ್ರಗಳ ಡೌನ್‍ಲೋಡ್ ಮಾಡಿಕೊಳ್ಳಬಹುದು ಎಂದು ಮಾಹಿತಿ ನೀಡಲಾಗಿದೆ.
ಅಭ್ಯರ್ಥಿಗಳಿಗೆ ಸೂಚನೆಗಳು
* ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಪ್ರತಿ ಅಧಿವೇಶನದ ಪರೀಕ್ಷಾ ಪ್ರಾರಂಭದ ಅವಧಿಗಿಂತ 1 ಗಂಟೆ ಮುಂಚಿತವಾಗಿ ಹಾಜರಿರಬೇಕು. ಪರೀಕ್ಷೆ ಪತ್ರ ಇಲ್ಲದೇ ಪರೀಕ್ಷೆ ಬರೆಯಲು ಅವಕಾಶವಿರುವುದಿಲ್ಲ. ಈ ಬಗ್ಗೆ ಯಾವುದೇ ವಿನಾಯಿತಿ ಇರುವುದಿಲ್ಲ.
* ಪರೀಕ್ಷಾ ಕೇಂದ್ರಗಳಿಗೆ ಮುಖ್ಯ ಅಧೀಕ್ಷಕರು, ಮಾರ್ಗಾಧಿಕಾರಿಗಳು, ಸ್ಥಾನಿಕ ಜಾಗ್ರತಾ ದಳದ ಅಧಿಕಾರಿಗಳನ್ನು ಮತ್ತು ಮೊಬೈಲ್ ಸ್ವಾಧೀನ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.
* ಪ್ರತಿ ಕೊಠಡಿಯಲ್ಲಿ 20 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದು, ಅದರಲ್ಲಿ ಪ್ರತಿ ಬೆಂಚ್‍ಗೆ ಇಬ್ಬರು ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಆಸನ ವ್ಯವಸ್ಥೆ ಮಾಡಲಾಗಿದೆ.
* ಪೂರ್ವ ಮುದ್ರಿತ ಓಎಂಆರ್‌ನಲ್ಲಿ ಒಮ್ಮೆ ಬರೆದಿರುವುದನ್ನು ಪುನ: ಬದಲಾಯಿಸುವುದು, ತಿದ್ದುವುದು, ಬಿಳಿ ಪ್ಲ್ಯೂಯಿಡ್ ಬಳಸುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ. ಬಿಳಿ ಪ್ಲ್ಯೂಯಿಡ್ ಹಚ್ಚಿ ಉತ್ತರ ಬದಲಾಯಿಸಲು ಅವಕಾಶವಿಲ್ಲ. ಇಂತಹ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನಕ್ಕೆ ಪರಿಗಣಿಸುವುದಿಲ್ಲ.
* ಪರೀಕ್ಷೆಗೆ ಆಗಮಿಸುವ ಅಭ್ಯರ್ಥಿಗಳು ಮೊಬೈಲ್ ಫೋನ್, ಬ್ಲೂಟೂತ್ ಡಿವೈಸ್, ಪೇಜರ್, ಕ್ಯಾಲ್ಕುಲೇಟರ್ ಮೊದಲಾದ ಎಲೆಕ್ಟ್ರಾನಿಕ್ ಉಪಕರಣಗಳು, ಸ್ಲೈಡ್ ರೂಲುಗಳು, ಮಾರ್ಕರ್‌ಗಳು, ಲಾಗ್ ಟೇಬಲ್‍ಗಳು, ಬ್ಲೇಡ್, ಇಂಕ್ ಎರೇಸರ್, ಬಿಳಿ ಫ್ಲೂಯಿಡ್, ಬೆಂಕಿ ಪೊಟ್ಟಣ, ಸಿಗರೆಟ್ ಲೈಟರ್ ಮುಂತಾದವುಗಳನ್ನು ಪರೀಕ್ಷಾ ಕೇಂದ್ರದ ಆವರಣದೊಳಗೆ ತರುವುದನ್ನು ನಿಷೇಧಿಸಲಾಗಿದೆ.
* ವಿಕಲಚೇತನ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಅಂಗವಿಕಲತೆಯ ಪ್ರಮಾಣ ಪತ್ರವನ್ನಾಧರಿಸಿ ಪರೀಕ್ಷೆ ಬರೆಯಲು 1 ಗಂಟೆಗೆ ಇಪ್ಪತ್ತು ನಿಮಿಷಗಳಂತೆ 50 ನಿಮಿಷ ಹೆಚ್ಚಿನ ಕಾಲಾವಕಾಶ ನೀಡಿದೆ.
* ಆನ್‍ಲೈನ್ ಅರ್ಜಿಯನ್ನು ಸಲ್ಲಿಸುವಾಗ ಸಹಾಯಕ ಬರಹಗಾರರನ್ನು ಕೋರಿರುವರು ಒಂದು (1) ದಿನ ಮುಂಚಿತವಾಗಿ ಸಂಬಂಧಿಸಿದ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರನ್ನು ಭೇಟಿ ಮಾಡಿ ವಿವರವನ್ನು ಸಲ್ಲಿಸಬೇಕು.
ಪರೀಕ್ಷಾ ಅವಧಿಯಲ್ಲಿ ಪರೀಕ್ಷಾ ಕೇಂದ್ರ ಸುತ್ತಲಿನ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವನ್ನು ಘೋಷಿಣೆ ಮಾಡಲಾಗಿದೆ. ಪರೀಕ್ಷಾ ಪ್ರಕ್ರಿಯೆಯನ್ನು ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಿಸಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಸಮರ್ಪಕವಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಮಳೆಗಾಲವಾದ್ದರಿಂದ ಪರೀಕ್ಷೆ ಮುನ್ನ ಕೊಠಡಿಗಳ ಸ್ಥಿತಿಗತಿಯನ್ನು ಪರಿಶೀಲಿಸಬೇಕು. ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳು ಇರುವಂತೆ ಖಾತ್ರಿಪಡಿಸಿಕೊಳ್ಳಬೇಕು ಎಂದು ಸಿಬ್ಬಂದಿಗಳಿಗೆ ನಿರ್ದೇಶಿಸಲಾಗಿದೆ.
ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಯಾವುದಾದರೂ 1 ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಪರೀಕ್ಷಾ ಕೇಂದ್ರಕ್ಕೆ ತರಬೇಕು. ಮೊಬೈಲ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳಿಗೆ ಅವಕಾಶವಿರುದಿಲ್ಲ. ಅಭ್ಯರ್ಥಿಗಳನ್ನು ತಪಾಸಣೆ ಮಾಡಿ ಪರೀಕ್ಷಾ ಕೇಂದ್ರಗಳಿಗೆ ಬಿಡಲು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತದೆ.












Click it and Unblock the Notifications