ತೆಲಂಗಾಣ ರಾಜಕೀಯದಲ್ಲಿ ಕರ್ನಾಟಕದ ವಾಲ್ಮೀಕಿ ಅಭಿವೃದ್ಧಿ ನಿಗಮ ಅವ್ಯವಹಾರದ ಸದ್ದು!
ರಾಜ್ಯ ರಾಜಕಾರಣದಲ್ಲಿ ಸಂಚಲನವನ್ನೇ ಮೂಡಿಸಿ, ಸಚಿವರ ರಾಜೀನಾಮೆಗೂ ಕಾರಣವಾಗಿದ್ದ ವಾಲ್ಮೀಕಿ ಅಭಿವೃದ್ಧಿ ನಿಗಮದ ಕೋಟ್ಯಾಂತರ ರೂಪಾಯಿ ಹಗರಣ, ಇದೀಗ ತೆಲಂಗಾಣ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿದೆ.
ಕರ್ನಾಟಕ ಕಾಂಗ್ರೆಸ್ ಸರ್ಕಾರವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರೈಸುವ ಸಂದರ್ಭದಲ್ಲಿಯೇ ಬೆಳಕಿಗೆ ಬಂದಿದ್ದ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ವರ್ಗಾವಣೆ ಪ್ರಕರಣವು ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಇನ್ನಿಲ್ಲದಂತೆ ಮುಜುಗರಕ್ಕೆ ದೂಡಿತ್ತು.

ಅಲ್ಲದೇ ಈ ಪ್ರಕರಣದಲ್ಲಿ ಸಚಿವ ಬಿ. ನಾಗೇಂದ್ರ ರಾಜೀನಾಮೆ ನೀಡಿದ್ದರು. ಲೋಕಸಭೆ ಚುನಾವಣೆ ಹಾಗೂ ತೆಲಂಗಾಣ ರಾಜ್ಯ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಕರ್ನಾಟಕದಿಂದ ಕೋಟ್ಯಾಂತರ ರೂಪಾಯಿ ವರ್ಗಾವಣೆ ಆಗಿದೆ ಎನ್ನುವ ಆರೋಪ ಕೇಳಿಬಂದಿತ್ತು.
ಬಿಜೆಪಿ ಸೇರಿದಂತೆ ವಿವಿಧ ವಿರೋಧ ಪಕ್ಷಗಳು ಗಂಭೀರ ಆರೋಪ ಮಾಡಿದ್ದವು. ಅಖಂಡ ಆಂಧ್ರಪ್ರದೇಶದಿಂದ ತೆಲಂಗಾಣ ರಾಜ್ಯ ವಿಭಜನೆಯಾಗಿ ನೂತನ ರಾಜ್ಯ ರಚನೆಯಾದ ನಂತರ ಇದೇ ಮೊದಲ ಬಾರಿ ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿದೆ.
ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಕರ್ನಾಟಕದ ಕಾಂಗ್ರೆಸ್ ನಾಯಕರ ಪರಿಶ್ರಮವೂ ಇದೆ. ರಾಜ್ಯದಲ್ಲಿ ತಮ್ಮದೇ ಚಾಪು ಮೂಡಿಸಿಕೊಂಡಿರುವ ಕಾಂಗ್ರೆಸ್‌ನ ಹಿರಿಯ ಮುಖಂಡ ಡಿ.ಕೆ ಶಿವಕುಮಾರ್ ಅವರು ತೆಲಂಗಾಣದಲ್ಲಿ ಕಾಲಿಗೆ ಚಕ್ರಕಟ್ಟಿಕೊಂಡು ತಿರುಗುತ್ತಿದ್ದರು.
ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮೂಲಕ ಕಾಂಗ್ರೆಸ್ ದಕ್ಷಿಣ ಭಾರತದಲ್ಲಿ ತನ್ನ ಚಾಪು ಮೂಡಿಸಿತ್ತು. ಈ ರೀತಿ ಕಾಂಗ್ರೆಸ್ ಅಭೂತಪೂರ್ವ ಗೆಲುವು ಸಾಧಿಸುವುದಕ್ಕೆ ಕರ್ನಾಟಕದಿಂದ ಕೋಟ್ಯಾಂತರ ರೂಪಾಯಿ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ ಎನ್ನುವ ಗಂಭೀರ ಆರೋಪ ಕೇಳಿಬಂದಿತ್ತು.
ಇದಕ್ಕೆ ಪುಷ್ಠಿ ನೀಡುವಂತೆ ರಾಜ್ಯದಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಕೋಟ್ಯಾಂತರ ರೂಪಾಯಿ ಹಣ ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಆಗಿರುವುದು ಬೆಳಕಿಗೆ ಬಂದಿತ್ತು.
ತೆಲಂಗಾಣ ರಾಜಕೀಯದಲ್ಲಿ ಸಂಚಲನ ಮೂಡಿಸಿದ ಪ್ರಕರಣ
ಕರ್ನಾಟಕದ ವಾಲ್ಮೀಕಿ ಅಭಿವೃದ್ಧಿ ನಿಗಮದ ಪ್ರಕರಣವು ಇದೀಗ ತೆಲಂಗಾಣ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನವನ್ನೇ ಮೂಡಿಸಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ತೆಲಂಗಾಣ ಚುನಾವಣೆಗೆ ಕಾಂಗ್ರೆಸ್ ಬಳಸಿಕೊಂಡಿದೆ ಎಂದು ತೆಲಂಗಾಣದ ಪ್ರತಿಪಕ್ಷವಾದ ಬಿಆರ್ಎಸ್ ನ ಕಾರ್ಯಾಧ್ಯಕ್ಷ ಕೆ.ಟಿ ರಾಮರಾವ್ ಗಂಭೀರ ಆರೋಪ ಮಾಡಿದ್ದಾರೆ.
ಹೈದರಾಬಾದ್‌ನ 9 ವಿವಿಧ ಖಾತೆಗಳಿಗೆ ಕರ್ನಾಟಕದ ಹಣ ವರ್ಗಾವಣೆಯಾಗಿದೆ. ಇದರಲ್ಲಿ ನೇರವಾಗಿ ಕಾಂಗ್ರೆಸ್‌ನ ಮುಖಂಡರು ಭಾಗಿಯಾಗಿದ್ದಾರೆ. ವಾಲ್ಮೀಕಿ ಹಗರಣದಲ್ಲಿ ತೆಲಂಗಾಣ ಕಾಂಗ್ರೆಸ್ ನಾಯಕರ ಪಾತ್ರವಿದ್ದರೂ ಕ್ರಮ ತೆಗೆದುಕೊಂಡಿಲ್ಲ ಎಂದಿದ್ದಾರೆ.
ಕರ್ನಾಟಕದ ಸರ್ಕಾರಿ ಬ್ಯಾಂಕ್ ಖಾತೆಗಳಿಂದ ಬರೋಬ್ಬರಿ 180 ಕೋಟಿ ರೂಪಾಯಿ ವರ್ಗಾವಣೆಯಾಗಿದ್ದು, ಇದರಲ್ಲಿ 45 ಕೋಟಿ ರೂಪಾಯಿಗೂ ಹೆಚ್ಚಿನ ಮೊತ್ತವನ್ನು ಹೈದರಾಬಾದ್‌ನ 9 ಖಾತೆಗಳಿಗೆ ವರ್ಗಾಯಿಸಲಾಗಿದೆ. ಈ ಹಣ ಸ್ವೀಕರಿಸಿರುವ ಖಾತೆಗಳ ಮಾಹಿತಿಯನ್ನು ಕೂಡಲೇ ಬಹಿರಂಗಪಡಿಸಬೇಕು. ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಲೋಕಸಭೆ ಚುನಾವಣೆಗೆ ಅಕ್ರಮ ದುಡ್ಡು ಬಳಕೆ
ಕರ್ನಾಟಕ ಕಾಂಗ್ರೆಸ್ ಸರ್ಕಾರದಿಂದ ತೆಲಂಗಾಣ ಕಾಂಗ್ರೆಸ್ ಸರ್ಕಾರದ ಖಾತೆಗಳಿಗೆ ಅಕ್ರಮವಾಗಿ ವರ್ಗಾವಣೆಯಾಗಿರುವ ಹಣವನ್ನು ಅಲ್ಲಿನ ಕಾಂಗ್ರೆಸ್ ಸರ್ಕಾರವು ಲೋಕಸಭೆ ಚುನಾವಣೆಗೆ ಬಳಸಿದೆ ಎಂದು ಬಿಆರ್ಎಸ್ ನ ಕಾರ್ಯಾಧ್ಯಕ್ಷ ಕೆ.ಟಿ ರಾಮರಾವ್ ಹೇಳಿದ್ದಾರೆ. ಈ ವಿಷಯ ಇದೀಗ ತೆಲಂಗಾಣದಲ್ಲಿ ಚರ್ಚೆಗೆ ಕಾರಣವಾಗಿದೆ. ಮುಂದಿನ ನಾಲ್ಕೈದು ದಿನದಲ್ಲೇ ಯಾವೆಲ್ಲ ಖಾತೆಗಳಿಗೆ ಎಷ್ಟು ಕೋಟಿ ವರ್ಗಾವಣೆಯಾಗಿದೆ ಎನ್ನುವುದನ್ನು ಬಹಿರಂಗಪಡಿಸುವುದಾಗಿ ಹೇಳಿದ್ದಾರೆ.
ಆರ್. ಅಶೋಕ್ ಟ್ವೀಟ್
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ತೆಲಂಗಾಣ ಚುನಾವಣೆಗೆ ಬಳಕೆಯಾಗಿರುವ ಬಗ್ಗೆ ರಾಜ್ಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಟ್ವೀಟ್ ಮಾಡಿ ವ್ಯಂಗ್ಯವಾಡಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ತೆಲಂಗಾಣ ಚುನಾವಣೆಗೆ ಬಳಕೆಯಾಗಿದೆ ಎಂದು ತೆಲಂಗಾಣದ ಪ್ರತಿಪಕ್ಷ ಮುಖಂಡರೇ ಹೇಳಿದ್ದಾರೆ. 5 ದಿನಗಳಲ್ಲಿ ದಾಖಲೆ ಸಹಿತ ಸಂಪೂರ್ಣ ಮಾಹಿತಿ ಬಹಿರಂಗ ಮಾಡುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ. ಕರ್ನಾಟಕ ಕಾಂಗ್ರೆಸ್ ನಾಯಕರ ಭ್ರಷ್ಟಾಚಾರದ ಬಣ್ಣ ಮತ್ತೊಮ್ಮೆ ಬಯಲಾಗಲಿದೆ ಎಂದು ಹೇಳಿದ್ದಾರೆ.












Click it and Unblock the Notifications