ಬ್ರಿಗೇಡ್ ಹೆಸರಲ್ಲಿ ದಲಿತ ಯುವಕನನ್ನು ದಾರಿ ತಪ್ಪಿಸಿ ಕೊಂದ ಬಿಜೆಪಿ ಕಾರ್ಯಕರ್ತರು: ಬಿಜೆಪಿ ವಿರುದ್ಧ ಕಾಂಗ್ರೆಸ್ ಗಂಭೀರ ಆರೋಪ
ಬೆಂಗಳೂರು, ಜುಲೈ 11: ರಾಜ್ಯದಲ್ಲಿ ಎಲ್ಲೇ ಯಾವುದೇ ಕೊಲೆಯಾದರೂ, ಅದರ ಮೇಲೆ ರಾಜಕೀಯದ ಬೇಳೆ ಬೇಯಿಸಲು ಬಿಜೆಪಿ ನಾಯಕರು ತುದಿಗಾಲಲ್ಲಿರುತ್ತಾರೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ನಿನ್ನೆ ಕೊಲೆಗೀಡಾಗಿದ್ದ ವೇಣುಗೋಪಾಲ್ ಪ್ರಕರಣದಲ್ಲಿಯೂ 'ಹನುಮ ಜಯಂತಿ' ಮಾಡಿದ್ದಕ್ಕೆ ಕೊಲೆ ಆಗಿದೆ ಎಂದು ಕೋಮು ಭಾವನೆ ಪ್ರಚೋದಿಸಿ, ರಾಜಕೀಯ ಅಪ್ರಭುದ್ಧತೆ ಪ್ರದರ್ಶಿಸಲು ಬಿಜೆಪಿ ವನಾಯಕರು ಮುಂದಾಗಿದ್ದರು ಎಂದು ಅವರು ಆರೋಪಿಸಿದ್ದಾರೆ.

ಈಗ ಪೊಲೀಸ್ ತನಿಖೆಯಲ್ಲಿ ಬಿಜೆಪಿ ಕಾರ್ಯಕರ್ತ ವೇಣುಗೋಪಾಲ್ ಕೊಲೆ ಪ್ರಕರಣದಲ್ಲಿ ಬಿಜೆಪಿ ನಾಯಕರೇ ಕೊಲೆಗಾರರಾಗಿರುವ ಬಗ್ಗೆ ಮಾಹಿತಿ ಬರುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೇ, ನೆರೆಮನೆಯ ಸುಡದು ಎಂದು ಅವರು ಟ್ವೀಟ್ ಮಾಡಿದ್ದಾರೆ.
ಈಗಲಾದರೂ ಎಚ್ಚೆತ್ತುಕೊಂಡು ಪ್ರತಿದಿನ ಬೆಳಗ್ಗೆ ಶಾಖೆಗಳಲ್ಲಿ ದ್ವೇಷ ಹಂಚುವುದನ್ನು ಬಿಟ್ಟು ಸಮಾಜದಲ್ಲಿ ಪ್ರೀತಿ ಹಂಚುವುದನ್ನ ಕಲಿಸುವಂತಾಗಲಿ. ಬಿಜೆಪಿ ನಾಯಕರು, ಸಂಸದರು ಹೆಣ ಬಿದ್ದ ತಕ್ಷಣ ರಾಜಕೀಯ ಲಾಭದ ಬೇಳೆ ಬೇಯಿಸಲು ಹೋಗುವ ಬದಲು ಮಾನಸಿಕ ಸ್ಥಿಮಿತ ಕಾಪಾಡಿಕೊಳ್ಳುವಂತಾಗಲಿ ಎಂದು ಆಶಿಸುತ್ತೇನೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ
ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಅದ್ಯಾವುದೋ ಬ್ರಿಗೇಡ್ ಹೆಸರಲ್ಲಿ ದಲಿತ ಯುವಕನನ್ನು ದಾರಿ ತಪ್ಪಿಸಿ ಕೊಂದು ಹಾಕಿದ್ದಾರೆ ಬಿಜೆಪಿ ಕಾರ್ಯಕರ್ತರು ಎಂದು ಆರೋಪಿಸಿದೆ.
ದಲಿತರೆಂದರೆ ಬಿಜೆಪಿಗೆ ಯಾಕಿಷ್ಟು ಅಸಹನೆ? ದಲಿತರಿಗೆ, ಹಿಂದುಳಿದ ವರ್ಗದ ಯುವಕರಿಗೆ ಬಿಜೆಪಿ ಕೇಸರಿ ಶಾಲು ಹೊದಿಸುವುದೇ ಕೊನೆಗೊಂದು ದಿನ ಬಿಳಿ ವಸ್ತ್ರ ಹೊದಿಸಲು ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಬಿಜೆಪಿಯ ಹತ್ಯಾ ರಾಜಕೀಯಕ್ಕೆ ದಲಿತ ಹಿಂದುಳಿದ ವರ್ಗದವರನ್ನೇ ಬಲಿ ಪಡೆಯುತ್ತಿರುವುದೇಕೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

'ಹೆಣ ಕಂಡೊಡನೆ ರಣ ಹದ್ದುಗಳಂತೆ ಹಾರಿಬರುವ ಬಿಜೆಪಿಗೆ ಈಗ ಆಘಾತ ಉಂಟಾಗಿದೆ. ಬಿಜೆಪಿ ಬೆಂಬಲಿಸುವ ಸಂಘಟನೆಯ ಕಾರ್ಯಕರ್ತನನ್ನು ಬಿಜೆಪಿಯ ಕಾರ್ಯಕರ್ತರೇ ಕೊಂದು ಹಾಕಿದ್ದಾರೆ. ಹೆಣ ರಾಜಕೀಯ ಮಾಡುವ ಬಿಜೆಪಿ ಈಗ ಉತ್ತರ ನೀಡಬೇಕು' ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ಬಿಜೆಪಿ ಕಾರ್ಯಕರ್ತರನ್ನು ಬೆಳೆಸುತ್ತಿದೆಯೇ, ಕೊಲೆಗಡುಕರನ್ನು ಬೆಳೆಸುತ್ತಿದೆಯೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಸರ್ಕಾರದ ಮೇಲೆ ಆರೋಪಿಸಲು ಸಜ್ಜಾಗಿದ್ದ ಬಿಜೆಪಿ ನಾಯಕರು ತಮ್ಮವರೇ ಕೊಲೆಗಾರರು ಎಂದು ತಿಳಿದ ನಂತರ ಬಿಲ ಸೇರಿರುವುದೇಕೆ? ಎಂದು ಕಾಂಗ್ರೆಸ್ ಕೇಳಿದೆ.












Click it and Unblock the Notifications