Karnataka Elections: ವರುಣಾದಲ್ಲಿ ಸಿದ್ದು- ಬಿಎಸ್‌ವೈ ಒಳ ಒಪ್ಪಂದ- ದೇವೇಗೌಡರ ಹೊಸ ಬಾಂಬ್, ವರದಿ, ವಿವರ
ಬೆಂಗಳೂರು, ಏಪ್ರಿಲ್ 05: ದೇಶದಾದ್ಯಂತ ಭಾರೀ ಕುತೂಹಲಕ್ಕೆ ಕಾರಣವಾಗಿರುವ ಕರ್ನಾಟಕದ ವಿಧಾನಸಭೆ ಚುನಾವಣೆಗೆ ( Karnataka Assembly Elections 2023 ) ಇನ್ನೊಂದು ತಿಂಗಳು ಬಾಕಿ ಉಳಿದಿದೆ. ಮೇ 10 ರಂದು ಮತದಾನ ನಡೆಯಲಿದ್ದು, ಮೂರು ದಿನಗಳ ಬಳಿಕ ಫಲಿತಾಂಶ ಹೊರಬೀಳಲಿದೆ. ಆಡಳಿತಾರೂಢ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಈ ಬಾರಿಯೂ ಪೈಪೋಟಿಯಲ್ಲಿ ತೊಡಗಿವೆ. ಜೆಡಿಎಸ್, ಕಾಂಗ್ರೆಸ್ ತಮ್ಮ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸುವ ಸಾಧ್ಯತೆ ಇದೆ.
ಈ ಸಂದರ್ಭದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಾತನಾಡಿರುವ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡ ಹೊಸ ಬಾಂಬ್ ಒಂದನ್ನು ಸಿಡಿಸಿದ್ದಾರೆ. ಮೈಸೂರಿನ ವರುಣಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಅವರು ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಇಂಡಿಯಾ ಟುಡೇ ಜೊತೆಗಿನ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ದೇವೇಗೌಡರು, ಯಡಿಯೂರಪ್ಪನವರ ಪುತ್ರ ಬಿವೈ ವಿಜಯೇಂದ್ರ ಅವರು ವರುಣಾದಿಂದ ಸ್ಪರ್ಧಿಸಲು ಸಿದ್ದರಾಗಿದ್ದರು. ಆದರೆ, ಅವರನ್ನು ಬಿಎಸ್‌ವೈ ತಡೆದಿದ್ದಾರೆ. ಈ ಬೆಳವಣಿಗೆ ಹೇಗೆ ನಡೆಯಿತು ಎಂದು ದೇವೇಗೌಡರು ಪ್ರಶ್ನಿಸಿದ್ದಾರೆ.
'ಇದು ಏನು ಸೂಚಿಸುತ್ತದೆ? ಇಬ್ಬರು ಮಾಜಿ ಸಿಎಂಗಳು ತಂತ್ರಗಾರಿಕೆಯ ಗಾಢ ತಿಳುವಳಿಕೆಯನ್ನು ಹೊಂದಿದ್ದಾರೆ ಎಂಬುದು ಇದರ ಅರ್ಥ' ಎಂದು ದೇವೇಗೌಡರು ಹೇಳಿದ್ದಾರೆ. ರಾಜ್ಯದಲ್ಲಿ ಈ ಬೆಳವಣಿಗೆ ನಡೆಯಲು ಬಿಜೆಪಿ ವರಿಷ್ಠರು ಹೇಗೆ ಅವಕಾಶ ನೀಡಿದರು? ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕದಲ್ಲಿ ಮುಂದಿನ ಸರ್ಕಾರವನ್ನು ರಚಿಸುತ್ತೇವೆ ಎಂದು ಬಿಜೆಪಿ ಮತ್ತು ಕಾಂಗ್ರೆಸ್‌ನ ನಾಯಕರು ಹೇಳುತ್ತಿದ್ದಾರೆ. ಹಿಂದಿನ ಜೆಡಿಎಸ್ ನೇತೃತ್ವದ ಸರ್ಕಾರದ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ಜನರು ಈಗ ಪಡೆಯುತ್ತಿಲ್ಲ. ಜೆಡಿಎಸ್ ಅಧಿಕಾರಕ್ಕೆ ಬಂದರೆ, ಮತ್ತೆ ಅವುಗಳನ್ನು ಜಾರಿ ಮಾಡಲಿದೆ. ಕರ್ನಾಟಕದಲ್ಲಿ ಜೆಡಿಎಸ್ ದೊಡ್ಡ ಶಕ್ತಿಯಾಗಿ ಹೊರ ಹೊಮ್ಮಲಿದೆ ಎಂದೂ ಹೇಳಿದ್ದಾರೆ.

ಹಾಸನ ಟಿಕೆಟ್ ವಿವಾದದ ಬಗ್ಗೆ ಮಾತನಾಡಿದ ಮಾಜಿ ಪ್ರಧಾನಿ, ಹಾಸನದ ಬಗ್ಗೆ ಯಾರೂ ಆತಂಕಪಡುವ ಅಗತ್ಯವಿಲ್ಲ, ಇದು ಅವರ ತವರು ಜಿಲ್ಲೆಯಾಗಿದ್ದು, ಈ ಬಗ್ಗೆ ಗಮನ ಹರಿಸುವುದಾಗಿ ಭರವಸೆ ನೀಡಿದ್ದಾರೆ.
ಕಾಂಗ್ರೆಸ್ ಜೊತೆಗಿನ ಚುನಾವಣೋತ್ತರ ಮೈತ್ರಿಯ ಬಗ್ಗೆ ಮಾತನಾಡಿರುವ ದೇವೇಗೌಡ, ಇದನ್ನು ತಳ್ಳಿಹಾಕಿದ್ದಾರೆ.
'ನಾವು ಮೈತ್ರಿ ಮಾಡಿಕೊಳ್ಳಲು ಹೇಗೆ ಸಾಧ್ಯ? ಬಿಜೆಪಿಯ ಮಾಜಿ ಸಿಎಂ ಮತ್ತು ಕಾಂಗ್ರೆಸ್‌ನ ಮಾಜಿ ಸಿಎಂ ಪರಸ್ಪರ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ನಾನು ಇನ್ನೇನು ಹೇಳಲಿ?' ಎಂದು ತಿಳಿಸಿದ್ದಾರೆ.
ಹಾಸನ ಟಿಕೆಟ್ ವಿವಾದ
ಮುಂಬರುವ ಚುನಾವಣೆಯಲ್ಲಿ ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಕುರಿತು ಮಾತುಕತೆ ನಡೆಸಲು ದೇವೇಗೌಡರು ಭಾನುವಾರ ತಮ್ಮ ಪುತ್ರರಾದ ಹೆಚ್ ಡಿ ಕುಮಾರಸ್ವಾಮಿ ಮತ್ತು ಹೆಚ್ ಡಿ ರೇವಣ್ಣ ಅವರನ್ನು ಮನೆಗೆ ಕರೆಸಿಕೊಂಡಿದ್ದರು. ಹಾಸನ ಟಿಕೆಟ್ ವಿಚಾರದಲ್ಲಿ ಸಹೋದರರ ನಡುವೆ ಉಂಟಾಗಿದ್ದ ಭಿನ್ನಾಭಿಪ್ರಾಯ ಬಗೆಹರಿಸಲು ಜೆಡಿಎಸ್ ವರಿಷ್ಠರು ಅಖಾಡಕ್ಕಿಳಿದಿದ್ದಾರೆ.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜೆಡಿಎಸ್ ಮುಖಂಡ ಸ್ವರೂಪ್ ಗೌಡ ಅವರಿಗೆ ಟಿಕೆಟ್ ನೀಡಲು ಒಲವು ತೋರಿದ್ದಾರೆ. ಆದರೆ, ಜೆಡಿಎಸ್‌ನ ಹಿರಿಯ ನಾಯಕ ಎಚ್‌ಡಿ ರೇವಣ್ಣ ಅವರು ತಮ್ಮ ಪತ್ನಿ ಭವಾನಿ ರೇವಣ್ಣ ಅವರಿಗೆ ಟಿಕೆಟ್ ನೀಡಬೇಕೆಂದು ಒತ್ತಾಯ ಮಾಡಿದ್ದಾರೆ.
ಈ ಹೊತ್ತಿನಲ್ಲಿ ಕುಟುಂಬದ ಇನ್ನೊಬ್ಬರಿಗೆ ಟಿಕೆಟ್ ನೀಡಿದರೆ ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ ಮತ್ತು ಪಕ್ಷದ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ದೇವೇಗೌಡ ಆತಂಕ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications