Karnataka Elections: ಮತ್ತೆ ಘರ್ಜಿಸಲಿದೆ ಕರ್ನಾಟಕ- ವೈರಲ್ ಆಯ್ತು ಕಾಂಗ್ರೆಸ್ಸಿನ ವಿಡಿಯೊ ಸಾಂಗ್
ಬೆಂಗಳೂರು, ಏಪ್ರಿಲ್ 15: ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ರಾಜಕೀಯ ಪಕ್ಷಗಳು ಪ್ರಚಾರದಲ್ಲಿ ತೊಡಗಿಕೊಂಡಿವೆ. ಕಾಂಗ್ರೆಸ್ ಪಕ್ಷವು ಈಗಾಗಲೇ ತನ್ನ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಒಟ್ಟು 209 ಅಭ್ಯರ್ಥಿಗಳನ್ನು ಘೋಷಿಸಿದೆ. ಬಿಜೆಪಿ ಎರಡು ಪಟ್ಟಿಗಳನ್ನು ಬಿಡುಗಡೆ ಮಾಡಿದ್ದು, ಒಟ್ಟು 212 ಅಭ್ಯರ್ಥಿಗಳನ್ನು ಘೋಷಿಸಿದೆ. ಜೆಡಿಎಸ್ ಈ ವರೆಗೆ 147 ಅಭ್ಯರ್ಥಿಗಳನ್ನು ಘೋಷಿಸಿದೆ.
ಆಡಳಿತ ವಿರೋಧ ಅಲೆಯನ್ನು ಎದುರಿಸುತ್ತಿರುವ ಬಿಜೆಪಿಗೆ ಕಾಂಗ್ರೆಸ್ ಸೆಡ್ಡು ಹೊಡೆದಿದೆ. ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆಯನ್ನು ಶತಾಯಗತಾಯ ಗೆಲ್ಲಲೇಬೇಕೆಂದು ಅಬ್ಬರದ ಪ್ರಚಾರವನ್ನು ಕಾಂಗ್ರೆಸ್ ಮಾಡುತ್ತಿದೆ.

ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರ ತಂತ್ರದ ಭಾಗವಾಗಿ ಹಾಡೊಂದನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ. ಬಿಜೆಪಿ ಭ್ರಷ್ಟಾಚಾರದ ವಿರುದ್ಧ ಈ ಹಾಡಿನಲ್ಲಿ ಕಾಂಗ್ರೆಸ್ ಹರಿಹಾಯ್ದಿದೆ. ಆ ಮೂಲಕ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನವನ್ನು ಕಾಂಗ್ರೆಸ್ ಮಾಡಿದೆ. ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು, ಕನ್ನಡಿಗ ಒಬ್ಬಂಟಿಯಾಗಲಾರ ಎಂಬ ಸಂದೇಶವನ್ನೂ ಈ ಹಾಡಿನ ಮೂಲಕ ಸಾರಿದೆ.
ಈ ಹಾಡು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಹಲವರು ಹಂಚಿಕೊಂಡಿದ್ದಾರೆ.
ಈ ವಿಡಿಯೊವನ್ನು ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್ ಘಟಕವು, 'ಕನ್ನಡ, ಕರ್ನಾಟಕ, ಕನ್ನಡಿಗರಿಗೆ ನಿರಂತರ ದ್ರೋಹ ಮಾಡಿದ ಬಿಜೆಪಿ ತೊಲಗುವ ಸಮಯ ಬಂದಿದೆ. ಕಾಂಗ್ರೆಸ್ ಬರಲಿದೆ, ಕರ್ನಾಟಕದ ವೈಭವ ಮತ್ತೆ ಮರುಕಳಿಸಲಿದೆ. ಕರ್ನಾಟಕದ ಅಸ್ಮಿತೆಯ ಮೇಲೆ ಇನ್ಯಾರೂ ದಾಳಿ ಮಾಡಲಾಗದು, ಕನ್ನಡಿಗರು ಗರ್ವದಿಂದ ತಲೆ ಎತ್ತಿ ನಿಲ್ಲುವ ಗೌರವಯುತ ಆಡಳಿತವನ್ನು ಕಾಂಗ್ರೆಸ್ ನೀಡಲಿದೆ. ಕಾಂಗ್ರೆಸ್ ಬರಲಿದೆ, ಪ್ರಗತಿ ತರಲಿದೆ' ಎಂದು ಬರೆದುಕೊಂಡಿದೆ.
ಕನ್ನಡ, ಕರ್ನಾಟಕ, ಕನ್ನಡಿಗರಿಗೆ ನಿರಂತರ ದ್ರೋಹ ಮಾಡಿದ ಬಿಜೆಪಿ ತೊಲಗುವ ಸಮಯ ಬಂದಿದೆ.
— Karnataka Congress (@INCKarnataka) April 15, 2023
ಕಾಂಗ್ರೆಸ್ ಬರಲಿದೆ, ಕರ್ನಾಟಕದ ವೈಭವ ಮತ್ತೆ ಮರುಕಳಿಸಲಿದೆ.
ಕರ್ನಾಟಕದ ಅಸ್ಮಿತೆಯ ಮೇಲೆ ಇನ್ಯಾರೂ ದಾಳಿ ಮಾಡಲಾಗದು, ಕನ್ನಡಿಗರು ಗರ್ವದಿಂದ ತಲೆ ಎತ್ತಿ ನಿಲ್ಲುವ ಗೌರವಯುತ ಆಡಳಿತವನ್ನು ಕಾಂಗ್ರೆಸ್ ನೀಡಲಿದೆ.
ಕಾಂಗ್ರೆಸ್ ಬರಲಿದೆ, ಪ್ರಗತಿ ತರಲಿದೆ. pic.twitter.com/jAQtDjOuVG
ಕೋಲಾರಕ್ಕೆ ರಾಹುಲ್ ಭೇಟಿ
ಏಪ್ರಿಲ್ 16 ರಂದು ( ನಾಳೆ ) ಕರ್ನಾಟಕಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿ ನೀಡಲಿದ್ದು, ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, 'ಭ್ರಷ್ಟಾಚಾರ, ಸರ್ವಾಧಿಕಾರವನ್ನೇ ಮೈಗೂಡಿಸಿಕೊಂಡಿರುವ ಸರ್ಕಾರದ ವಿರುದ್ಧ ದನಿ ಎತ್ತಿದ ಒಂದೇ ಕಾರಣಕ್ಕೆ ರಾಹುಲ್ ಗಾಂಧಿಯವರ ದ್ವೇಷ ಸಾಧನೆಗಿಳಿದ ಬಿಜೆಪಿ ಸರ್ಕಾರದ ವಿರುದ್ಧ ನಾಳೆ ಕೋಲಾರದಲ್ಲಿ ರಾಹುಲ್ ಗಾಂಧಿ ಅವರು ಸತ್ಯದೆಡೆಗಿನ ಹೋರಾಟದ ಹೆಜ್ಜೆ ಇಡಲಿದ್ದಾರೆ. ಸತ್ಯಕ್ಕೆ ಹಿನ್ನೆಡೆ ಇರಬಹುದು, ಅಂತ್ಯವಿರುವುದಿಲ್ಲ. ಸತ್ಯಮೇವ ಜಯತೆ' ಎಂದು ತಿಳಿಸಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಾನುವಾರ ಕೋಲಾರದಲ್ಲಿ ಪಕ್ಷದ ರ್ಯಾಲಿಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಇದೇ ಸ್ಥಳದಲ್ಲಿ ಅವರು ಮೋದಿ ಉಪನಾಮೆಯ ಬಗ್ಗೆ ಟೀಕೆ ಮಾಡಿದ್ದರು. ಇದರ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಾಗಿತ್ತು. ಸಂಸತ್ ಸದಸ್ಯತ್ವವನ್ನೂ ರಾಹುಲ್ ಕಳೆದುಕೊಂಡಿದ್ದಾರೆ. ಈಗ ರಾಹುಲ್ ಕೋಲಾರದಿಂದಲೇ ತಮ್ಮ ಚುನಾವಣಾ ಪ್ರಚಾರದ ಸಭೆಯನ್ನು ಆರಂಭಿಸಲಿದ್ದಾರೆ.
ಕೋಲಾರದಿಂದ ಸ್ಪರ್ಧೆ ಇಲ್ಲ
ಇಂದು ಬಿಡುಗಡೆ ಮಾಡಿರುವ ಮೂರನೇ ಪಟ್ಟಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರು ಕೋಲಾರದಿಂದ ಸ್ಪರ್ಧಿಸುವುದಿಲ್ಲವೆಂದು ತಿಳಿದುಬಂದಿದೆ. ಕೋಲಾರದಿಂದ ಸ್ಪರ್ಧಿಸುವುದಾಗಿ ಸಿದ್ದರಾಮಯ್ಯ ಈ ಹಿಂದೆ ಘೋಷಿಸಿದ್ದರು. ಆದರೆ, ಕಾಂಗ್ರೆಸ್‌ನಿಂದ ಬಿಡುಗಡೆಯಾದ ಮೊದಲ ಪಟ್ಟಿಯಲ್ಲಿ ಸಿದ್ದರಾಮಯ್ಯ ವರುಣಾದಿಂದ ಕಣಕ್ಕಿಳಿಯುವುದು ಖಚಿತವಾಯಿತು. ಈಗ ಬಿಡುಗಡೆ ಅಗಿರುವ ಮೂರನೇ ಪಟ್ಟಿಯಲ್ಲಿ ಕೋಲಾರದಿಂದ ಕೊತ್ತೂರು ಮಂಜುನಾಥ್ ಅವರಿಗೆ ಟಿಕೆಟ್ ದೊರೆತಿರುವುದು ಬಹಿರಂಗವಾಗಿದೆ.












Click it and Unblock the Notifications