Karnataka 5 days rain report: ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಮಳೆ ಗಂಡಾತರ?: ಈ ಜಿಲ್ಲೆಗಳಿಗೆ ಹಳದಿ ಎಚ್ಚರಿಕೆ
ಬೆಂಗಳೂರು, ಜೂನ್ 16: ಗುಜರಾತಿನಲ್ಲಿ ಕಳೆದ 24 ಗಂಟೆಗಳ ಹಿಂದೆ ಅಪ್ಪಳಿಸಿ ಸಾಕಷ್ಟು ಮಳೆ ಸುರಿಯಲು ಕಾರಣವಾದ 'ಬಿಪರ್‌ಜಾಯ್' ಚಂಡಮಾರುತ ಪ್ರಭಾವವು ಕರ್ನಾಟಕದ ಮೇಲೆ ಉಂಟಾಗುವ ಸಂಭವವಿದೆ. ಒಟ್ಟು ಮುಂದಿನ ಐದು ಕರ್ನಾಟಕ ರಾಜ್ಯದಲ್ಲಿ ಜೋರು ಮಳೆ ಬರಲಿದೆ. ಇದರಲ್ಲಿ ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಮಳೆ ಗಂಡಾಂತರ ಕಾದಿದೆ ಎನ್ನಲಾಗಿದೆ.
ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ, ಮುಂದಿನ ಐದು ದಿನಗಳಲ್ಲಿ ಅಂದರೆ ಜೂನ್ 21ರವರೆಗೆ ಕರಾವಳಿಯಲ್ಲಿ ಮಾತ್ರ ಐದು ದಿನವು ಮಳೆ ಅಬ್ಬರ ಕಂಡು ಬರಲಿದೆ. ಮೊದಲ ಎರಡು ದಿನ ಉತ್ತರ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಸಾಧಾರಣವಾಗಿ ಸುರಿಯಲಿದೆ.

ನಂತರ ಮೂರು ದಿನ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಅತೀ ಭಾರೀ ಮಳೆ ಬೀಳಲಿದೆ. ಕೊನೆಯ ಎರಡು ದಿನ ಅಂದರೆ ಜೂನ್ 20 ಹಾಗೂ ಜೂನ್ 21ರಂದು ''ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ರಾಮನಗರ, ಶಿವಮೊಗ್ಗ, ತುಮಕೂರು'' ಜಿಲ್ಲೆಗಳಲ್ಲಿ ಬಿರುಗಾಳಿ ಮತ್ತು ಗುಡುಗು ಸಹಿತ ವ್ಯಾಪಕ ಮಳೆ ಬೀಸಲಿದೆ. ಹೀಗಾಗಿಯೇ ಈ ಎರಡು ಜಿಲ್ಲೆಗಳಿಗೆ ಅಂದು ಹಳದಿ ಎಚ್ಚರಿಕೆ ನೀಡಲಾಗಿದೆ ಎಂದು ಐಎಂಡಿ ವರದಿ ತಿಳಿಸಿದೆ.
ಉಳಿದಂತೆ ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಮಂಡ್ಯ, ಮೈಸೂರು, ವಿಜಯನಗರ ಜಿಲ್ಲೆಗಳ ಹಲವೆಡೆ ಸಾಧಾರಣದಿಂದ ವ್ಯಾಪಕ ಮಳೆ ಬರಬಹುದು ಎಂದು ಅಂದಾಜಿಸಲಾಗಿದೆ.
ಕರಾವಳಿಯಲ್ಲಿ ಮಳೆ ನಿರಂತರ
ಕರ್ನಾಟಕದ ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಯೆಲ್ಲೋ ಅಲರ್ಟ್ ಭೀತಿಯಿಂದ ಹೊರ ಬಂದಿವೆ. ಈ ಜಿಲ್ಲೆಗಳಲ್ಲಿ ಮುಂದಿನ ಐದು ದಿನವೂ ಗುಡುಗು ಗಾಳಿ ಸಹಿತ ಧಾರಾಕಾರವಾಗಿ ಮಳೆ ಸುರಿಯಲಿದೆ.

ಇನ್ನೂ ಉತ್ತರ ಒಳನಾಡಿನಲ್ಲಿ ಶನಿವಾರ ಮತ್ತು ಭಾನುವಾರ ಮಳೆ ಅಷ್ಟಾಗಿ ಬರುವ ಮುನ್ಸೂಚನೆ ಇಲ್ಲ. ನಂತರದ ಮೂರು ದಿನಗಳು ಬಾಗಲಕೋಟೆ ವಿಜಯಪುರ, ಹಾವೇರಿ, ಬೆಳಗಾವಿ, ಧಾರವಾರ, ಕೊಪ್ಪಳ, ರಾಯಚೂರು, ಕಲಬುರಗಿ, ಬೀದರ್, ಯಾದಗಿರಿ ಮತ್ತು ಗದಗ ಜಿಲ್ಲೆಗಳಲ್ಲಿ ಮಳೆ ಬರಲಿದೆ. ಕೆಲವೆಡೆ ಜೋರು ಮಳೆ ಬಂದರೆ, ಇನ್ನೂ ಹಲವೆಡೆ ಸಾಧಾರಣ ಮಳೆ ದಾಖಲಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರಿನ ಹವಾಮಾನ ವರದಿ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಾಳೆ ಶನಿವಾರ ಜೂನ್ 17ರಿಂದ ಮತ್ತೆ ಮೂರು ದಿನ ಜೋರು ಮಳೆ ಬರುವ ಸಂಭವ ಇದೆ. ಕಳೆದ ಮೂರು ನಾಲ್ಕು ದಿನಗಳಿಂದ ಮಳೆರಾಯನ ಆರ್ಭಟ ನಗರದಲ್ಲಿ ಕುಂದಿದೆ. ನಿತ್ಯ ಸಂಜೆ ನಂತರ ಆರ್ಭಟಿಸುವ ಮಳೆ ಕೆಲವು ಆವಾಂತರಗಳನ್ನು ಸೃಷ್ಟಿಸಿತ್ತು. ಮೂರು ದಿನಗಳಿಂದ ನಗರದಲ್ಲಿ ಹೇಳಿಕೊಳ್ಳುವಷ್ಟ ಮಳೆ ಬಿದ್ದಿದೆ.
ಮುಂದಿನ ಮೂರು ದಿನ ಹಗುರದಿಂದ ಸಾಧರಣವಾಗಿ, ಕೆಲವೊಮ್ಮೆ ವ್ಯಾಪಕ ಮಳೆ ಆಗಲಿದೆ. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಅಧಿಕ ತಾಪಮಾನ ಕಂಡು ಬರಲಿದೆ. ಸಂಜೆ ಮರೆಯಾಗಿ ಮಳೆ ಬರಲಿದೆ. ಈ ಅವಧಿಯಲ್ಲಿ 33 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಮತ್ತು 20 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ಕಂಡು ಬರಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮಾಹಿತಿ ನೀಡಿದೆ.












Click it and Unblock the Notifications