ರಾಜ್ಯದಲ್ಲಿ ಒಂದು ವಾರ ಮಳೆ: ಬೆಂಗಳೂರಿನಲ್ಲಿ ಇಂದು ಸಹ ವರುಣನ ಹಾಜರಾತಿ
ಬಿಸಿಲಿನಿಂದ ಕಂಗೆಟ್ಟಿದ್ದ ಜನರ ಮುಖದಲ್ಲಿ ಮಳೆ ಮಂದಹಾಸ ಮೂಡಿಸಿದೆ. ಇಷ್ಟು ದಿನ ಸಪ್ಪಾಗಿ ಕುಳಿತಿದ್ದ ಅನ್ನದಾತ ತನ್ನ ಕಾರ್ಯಗಳಿಗೆ ಚುರುಕು ಮುಟ್ಟಿಸಿದ್ದಾನೆ. ರಾಜ್ಯದಲ್ಲಿ ಈಗಾಗಲೇ ಮಳೆ ಆರಂಭವಾಗಿದ್ದು, ಇನ್ನು ಒಂದು ವಾರಗಳ ಕಾಲ ವರುಣನ ಆರ್ಭಟ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬುಧವಾರ (ಮೇ.22) ದಕ್ಷಿಣ ಒಳನಾಡು, ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಆಗುವ ಸಾಧ್ಯತೆ ಇದ್ದು, ಉತ್ತರ ಒಳನಾಡಿನಲ್ಲಿ ಉತ್ತಮ ಮಳೆ ಆಗುವ ಸಂಭವವಿದೆ. ರಾಜ್ಯದಲ್ಲಿ ಪ್ರತ್ಯೇಕ ಜಿಲ್ಲೆಗಳಲ್ಲಿ ಗುಡುಗು ಮಿಂಚಿನ ಜತೆಗೆ ಗಾಳಿಯ ವೇಗವೂ 30 ರಿಂದ 40 ಕಿಲೋ ಮೀಟರ್ ಬೀಸುವ ಸಂಭವವಿದೆ.

ಯಾವ ಯಾವ ಜಿಲ್ಲೆಗಳಲ್ಲಿ ಮಳೆ?
ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಧಾರಣ ಮಳೆಯ ಸೂಚನೆಯನ್ನು ನೀಡಲಾಗಿದ್ದು, ಮಲೆನಾಡಿನ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು, ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಬೆಂಗಳೂರಿನ ಭಾರೀ ಮಳೆ
ಕೆಲವು ದಿನಗಳಿಂದಲೇ ರಾಜ್ಯದಲ್ಲಿ ತನ್ನ ಕಾರ್ಯವನ್ನು ಆರಂಭಿಸಿರುವ ಮಳೆ ರಾಯ, ಈಗ ಎಲ್ಲ ಕಡೆಗಳಲ್ಲೂ ತನ್ನ ದೃಷ್ಟಿ ಬೀಡುತ್ತಿದ್ದಾನೆ. ಬಿಸಿಲಿನಿಂದ ಕಂಗೆಟ್ಟ ಬೆಂಗಳೂರಿನ ಜನರಿಗೆ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆ ನಗು ತರಿಸಿದೆ. ಬುಧವಾರವೂ ಬೆಂಗಳೂರಿನಲ್ಲಿ ಗುಡುಗು ಸಹಿತ ಭಾರೀ ಮಳೆ ಆಗುವ ಸಾಧ್ಯತೆ ಇದೆ.

ಆರೆಂಜ್ ಅಲರ್ಟ್
ರಾಜ್ಯದ 8 ಜಿಲ್ಲೆಗಳಿಗೆ ಹವಾಮಾನ ಇಲಾಖೆ ಕೊಡಗು ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಈ ಜಿಲ್ಲೆಗಳಲ್ಲಿ 30 ರಿಂದ 40 ಕಿಲೋ ಮೀಟರ್ ವೇಗದಲ್ಲಿ ಗಾಳಿ ಸೇರಿದಂತೆ ಗುಡುಗು ಸಹಿತ ಭಾರೀ ಮಳೆ ಆಗುವ ಸಂಭವವಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ, ಮೈಸೂರು, ಶಿವಮೊಗ್ಗದಲ್ಲೂ ಬಿರುಸಿನ ಮಳೆ ಆಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಹೀಗಾಗಿ ಈ ಭಾಗದಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಹೀಗಾಗಿಯೇ ಈ ಭಾಗದಲ್ಲಿ ಮಳೆ ಬರುತ್ತಿದ್ದಾಗ ಜನ ಮಳೆಯ ಸಮಯದಲ್ಲಿ ವಾಹನ ಚಲಾಯಿಸುವುದು, ಮರದಡಿ ನಿಲ್ಲಬಾರದು ಎಂದು ಸಲಹೆ ನೀಡಿದೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದರಿಂದ ಮಳೆ ಆಗುವ ಸಾಧ್ಯತೆ ಇದೆ. ರಾಜ್ಯಕ್ಕೆ ಮುಂಗಾರು ಮಳೆ ಜೂನ್ ಮೊದಲ ವಾರದಲ್ಲಿ ಬೀಳುವ ಸಾಧ್ಯತೆ ಇದ್ದು, ಆಗ ಬಿತ್ತನೆ ಕಾರ್ಯಕ್ಕೆ ಚಾಲನೆ ಸಿಗಲಿದೆ. ಈ ಬಾರಿ ಒಂದೆರೆಡು ದಿನ ಮೊದಲೇ ಮುಂಗಾರು ರಾಜ್ಯ ಪ್ರವೇಶಿಸುವ ಸಂಭವವಿದೆ. ಕಳೆದ ವರ್ಷ ಮಳೆ ಕೈ ಕೊಟ್ಟಿದ್ದರಿಂದ ರೈತ ಕಂಗಾಲಾಗಿದ್ದಾನೆ. ಈ ಬಾರಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿ ಅನ್ನದಾತನಿದ್ದಾನೆ.












Click it and Unblock the Notifications