Rain News: ರಾಜ್ಯದ ಈ ಜಿಲ್ಲೆಯಲ್ಲಿ ವರ್ಷದ ಮೊದಲ ಮಳೆ
ರಾಜ್ಯದಲ್ಲಿ ಬೇಸಿಗೆ ಆರಂಭಕ್ಕೆ ಮುನ್ನವೇ ಅಲ್ಲಲ್ಲಿ ಮಳೆ ದರ್ಶನ ನೀಡುತ್ತಿದೆ. ಈ ಬಾರಿ ತಾಪಮಾನ ಹೆಚ್ಚಾಗುವ ಮುನ್ಸೂಚನೆ ಇದ್ದು, ಅದಕ್ಕೂ ಮುನ್ನ ಹಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಗುರುವಾರ ಹಾವೇರಿ, ಕೊಡಗು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾದ ಬಗ್ಗೆ ವರದಿಯಾಗಿತ್ತು. ಶುಕ್ರವಾರ ಕೂಡ ರಾಜ್ಯದ ಮತ್ತೊಂದು ಜಿಲ್ಲೆಯಲ್ಲಿ ಮಳೆಯಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಶುಕ್ರವಾರ ಮಧ್ಯಾಹ್ನ ಮಳೆಯಾಗಿದೆ. ಗುರುಪ್ರಸಾದ್ ಭಟ್ ಎನ್ನುವವರು ತಮ್ಮ ಎಕ್ಸ್ ಖಾತೆಯಲ್ಲಿ ಮಳೆಯಾಗುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಕರ್ನಾಟಕದಲ್ಲಿ ಈ ಬಾರಿ ಉತ್ತಮ ಮಳೆ
ರಾಜ್ಯದಲ್ಲಿ ಈ ಬಾರಿ ಪೂರ್ವ ಮುಂಗಾರು ಉತ್ತಮವಾಗಿರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಫೆಬ್ರವರಿ ಮತ್ತು ಮಾರ್ಚ್ ಕೊನೆಯ ವಾರದಲ್ಲಿ ರಾಜ್ಯದ ಹಲವು ಕಡೆಗಳಲ್ಲಿ ಮಳೆಯಾಗಲಿದೆ ಎಂದು ಅಧಿಕಾರಿಗಳು ನಿರೀಕ್ಷೆ ಮಾಡಿದ್ದಾರೆ. ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದ ಜಲಾಶಯಗಳಲ್ಲಿ ಇನ್ನೂ ನೀರಿನ ಸಂಗ್ರಹ ಮಟ್ಟ ಉತ್ತಮವಾಗಿರುವ ಕಾರಣ ಈ ಬಾರಿ ಬೇಸಿಗೆಯಲ್ಲಿ ನೀರಿನ ಕೊರತೆ ಉಂಟಾಗುವುದಿಲ್ಲ ಎಂದು ಹೇಳಲಾಗಿದೆ. ಕೆಆರ್ ಎಸ್ ಜಲಾಶಯದಲ್ಲಿ ಇನ್ನೂ 29 ಟಿಎಂಸಿ ನೀರು ಸಂಗ್ರಹದಲ್ಲಿದ್ದು ಬೆಂಗಳೂರಿಗೆ ಕುಡಿಯುವ ನೀರಿಗೆ ಕೊರತೆ ಉಂಟಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೇಶದ ಈ ಭಾಗಗಳಲ್ಲಿ ಮಳೆ
ಶನಿವಾರ ಭಾರತದ ಹಲವು ರಾಜ್ಯಗಳಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಒಡಿಶಾ, ಪಶ್ಚಿಮ ಬಂಗಾಳದ ಹಲವು ಕಡೆಗಳಲ್ಲಿ 40-60 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ.
ಒಡಿಶಾ, ಛತ್ತಿಸ್‌ಗಢ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಲ್ಲಿ ಶನಿವಾರ ವ್ಯಾಪಕ ಮಳೆಯಾಗುವ ನಿರೀಕ್ಷೆ. ಹಲವು ಕಡೆಗಳಲ್ಲಿ ಭಾರಿ ಮಳೆಯಾಗಲಿದ್ದು ಆರೆಂಜ್ ಅಲರ್ಟ್ ಕೂಡ ನೀಡಲಾಗಿದೆ. ಸಿಕ್ಕಿಂ ಮತ್ತು ಬಿಹಾರದಲ್ಲಿ ಕೂಡ ಮಳೆಯಾಗಲಿದೆ ಎಂದು ಹೇಳಿದೆ.
ಫೆಬ್ರವರಿ 24ರವರೆಗೆ ಪಶ್ಚಿಮ ಬಂಗಾಳದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಒಡಿಶಾದಲ್ಲಿ ಕಳೆದ ಎರಡು ದಿನದಿಂದ ಮಳೆಯಾಗುತ್ತಿದ್ದು ಭಾನುವಾರದವರೆಗೂ ಮಳೆ ಮುಂದುವರೆಯಲಿದೆ. ಪಶ್ಚಿಮದಲ್ಲಿ ವಾಯುಭಾರ ಕುಸಿತದಿಂದಾಗಿ ಹಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ.
ಕರ್ನಾಟಕದಲ್ಲಿ ಕೂಡ ಫೆಬ್ರವರಿ 24ರವರೆಗೆ ಹಲವು ಕಡೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಲೆನಾಡು ಭಾಗದಲ್ಲಿ ಮತ್ತು ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಚದುರಿದಂತೆ ಹಗುರ ಮಳೆ ಬೀಳುತ್ತದೆ ಎಂದು ನಿರೀಕ್ಷಿಸಲಾಗಿದೆ.












Click it and Unblock the Notifications