Karnataka weather: ದಟ್ಟ ಮಂಜಿನ ನಡುವೆಯೂ ರಾಜ್ಯದ ಕೆಲವೇ ಜಿಲ್ಲೆಗಳಲ್ಲಿ ಮಾತ್ರ ಮಳೆ ಮುನ್ಸೂಚನೆ
ಕರ್ನಾಟಕ, ಜನವರಿ, 15: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಂಜು ಮುಸುಕಿದ ವಾತಾವರಣ ಮುಂದುವರೆದಿದ್ದು, ಜೊತೆಗೆ ಚಳಿಯ ಪ್ರಮಾಣವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹಾಗೆಯೇ ತಾಪಮಾನದ ಪ್ರಮಾಣ ಕಡಿಮೆಯಾಗುತ್ತಿದೆ. ಇನ್ನು ಕೆಲವು ಜಿಲ್ಲೆಗಳಲ್ಲಿ ಮಧ್ಯಾಹ್ನದ 12 ಗಂಟೆ ಸುಮಾರಿಗೆ ಮಾತ್ರ ಬಿಸಿಲಿನ ವಾತಾವರಣ ನಿರ್ಮಾಣವಾಗುತ್ತಿದ್ದು, ಸಂಜೆ 5 ಗಂಟೆ ಆಗುತ್ತಿದ್ದಂತೆ ಕೊರೆಯುವ ಚಳಿ ಇರಲಿದೆ. ಇದರ ನಡುವೆಯೂ ರಾಜ್ಯದ ಕೆಲವೇ ಕಡೆಗಳಲ್ಲಿ ಮಾತ್ರ ಮಳೆಯಾಗಲಿದೆ ಎನ್ನುವ ಮುನ್ಸೂಚನೆ ಇದೆ.
ರಾಜ್ಯ ರಾಜಧಾನಿಯಲ್ಲಂತೂ ಬೆಳಗ್ಗೆ 10 ಗಂಟೆಯಾದರೂ ಮಂಜು ಮುಸುಕಿದ ವಾತಾವರಣವೇ ಇರುತ್ತಿದೆ. ನಗರದಲ್ಲಿ ಮಧ್ಯಾಹ್ನದ ವೇಳಗೆ ಬೆಚ್ಚನೆಯ ಬಿಸಿಲು ಇರುತ್ತಿದ್ದು, ಸಂಜೆ ಆಗುತ್ತಿದ್ದಂತೆ ಮಂಜಿನ ಜೊತೆಗೆ ಶೀತದ ಗಾಳಿಯು ಬೀಸುತ್ತಿದೆ. ಇನ್ನು ಇಂದು (ಜನವರಿ 15) ಕೂಡ ಮೋಡ ಕವಿದ ವಾತಾವರಣ ಇರಲಿದ್ದು, ಚಳಿಯ ಪ್ರಮಾಣ ತುಸು ಹೆಚ್ಚಾಗಲಿದೆ ಎನ್ನುವ ಮಾಹಿತಿಯೂ ಇದೆ. ಮತ್ತೊಂದೆಡೆ ರಾಜ್ಯದ ರಾಜಧಾನಿ ಬೆಂಗಳೂರು ಹೊರತುಪಡಿಸಿ ಬಹುತೇಕ ಜಿಲ್ಲೆಗಳಲ್ಲೂ ಚಳಿಯ ಪ್ರಮಾಣ ಹೆಚ್ಚಿರಲಿದೆ ಎನ್ನುವ ಮುನ್ಸೂಚನೆ ಇದೆ.

ರಾಜ್ಯದ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ, ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ತುಮಕೂರು, ಹಾಸನ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ, ಇನ್ನು ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಬೆಳಗಾವಿ, ಯಾದಗಿರಿ ಹಾಗೂ ವಿಜಯನಗರ ಉತ್ತರ ಒಳನಾಡಿನ ಜಿಲ್ಲೆಗಳಾಗಿವೆ.
ಇದರಲ್ಲಿ ಚಿಕ್ಕಮಗಳೂರು, ಕೊಡಗು, ಚಾಮರಾಜನಗರ, ಶಿವಮೊಗ್ಗ ಜಿಲ್ಲಗಳಲ್ಲಿ ಚಳಿಯ ಪ್ರಮಾಣ ತುಸು ಹೆಚ್ಚಿರಲಿದೆ. ಚಿತ್ರದುರ್ಗ, ರಾಯಚೂರು, ಕೊಪ್ಪಳ, ವಿಜಯಪುರ ಜಿಲ್ಲೆಗಳಲ್ಲಿ ಚಳಿಯ ಪ್ರಮಾಣ ಕಡಿಮೆಯಿರಲಿದೆ.
44 ವಿಮಾನಗಳ ನಿರ್ಗಮನ ವಿಳಂಬ: ಅದರಲ್ಲೂ ನಿನ್ನೆ (ಜನವರಿ 14ರಂದು) ಮಂಜು ಮುಸುಕಿದ ವಾತಾವರಣ ಹಿನ್ನೆಲೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 44 ವಿಮಾನಗಳ ನಿರ್ಗಮನವು ತಡವಾಗಿದೆ ಎಂದು ಇಲ್ಲಿನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿಮಾನ ನಿಲ್ದಾಣದ ಅಧಿಕಾರಿಯ ಪ್ರಕಾರ, ಕೆಐಎನಲ್ಲಿ ದಟ್ಟವಾದ ಮಂಜು ಕವಿದ ಹಿನ್ನೆಲೆ ವಿಮಾನ ನಿಲ್ದಾಣದಲ್ಲಿ ಕೆಲವು ವಿಮಾನಗಳ ಲ್ಯಾಂಡಿಂಗ್ ಅನ್ನು ವಿಳಂಬಗೊಳಿಸಲಾಗಿದೆ.
ಇನ್ನು ಇಲ್ಲಿಂದ 44 ವಿಮಾನಗಳ ನಿರ್ಗಮನ ವಿಳಂಬವಾಯಿತು, ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಮಂಜು ಕವಿದ ವಾತಾವರಣ ಹಿನ್ನೆಲೆ ವಿಮಾನ ಹಾರಾಟವನ್ನು ನಿಲ್ಲಿಸಲಾಗಿದ್ದು, ತಡವಾಗಿ ವಿಮಾನ ನಿಲ್ದಾಣದಿಂದ ನಿರ್ಗಮಿಸಿವೆ ಎಂದು ತಿಳಿಸಿದ್ದಾರೆ. ಈ 44 ರಲ್ಲಿ ಏಳು ವಿಮಾನಗಳು ದೆಹಲಿಗೆ ಹೋಗುವವಿದ್ದು, ಒಂದನ್ನು ಚೆನ್ನೈನಿಂದ ಬೆಂಗಳೂರಿಗೆ ತಿರುಗಿಸಲಾಗಿದೆ ಎಂದು ತಿಳಿಸಿದ್ದಾರೆ.
10 ವಿಮಾನಗಳ ರದ್ದು: ಹವಾಮಾನ ವೈಪರೀತ್ಯದಿಂದಾಗಿ ಪುಣೆ ನಗರದಿಂದ ಮುಖ್ಯವಾಗಿ ಉತ್ತರ ಭಾರತದ ವಲಯಕ್ಕೆ ಒಟ್ಟು 10 ವಿಮಾನಗಳು ಭಾನುವಾರ ರದ್ದಾದವು. ವಿಮಾನಯಾನ ಸಂಸ್ಥೆಗಳಾದ ಇಂಡಿಗೋ ಮತ್ತು ಏರ್ ಇಂಡಿಯಾದ ನವದೆಹಲಿ, ಅಹಮದಾಬಾದ್, ಪ್ರಯಾಗರಾಜ್‌ಗೆ ತೆರಳುವ ಹೆಚ್ಚಿನ ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ಪುಣೆ ವಿಮಾನ ನಿಲ್ದಾಣದ ನಿರ್ದೇಶಕ ಸಂತೋಷ್ ಧೋಕ್ ಖಚಿತಪಡಿಸಿದ್ದಾರೆ.












Click it and Unblock the Notifications