Karnataka Weather: ಆ.12ರಂದು ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆ ನಿರೀಕ್ಷೆಯಿದ್ದರೆ, ಇನ್ನೂ ಬಹುತೇಕ ಕಡೆ ಒಣಹವೆ ಕಂಟಿನ್ಯೂ
ಕರ್ನಾಟಕ, ಆಗಸ್ಟ್, 12: ಜುಲೈ ತಿಂಗಳಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂಗಾರು ಮಳೆ ಆರ್ಭಟದಿಂದ ದೊಡ್ಡ ದೊಡ್ಡ ಅನಾಹುತಗಳೇ ಸಂಭವಿಸಿದ್ದವು. ಆದರೆ ಆಗಸ್ಟ್ ತಿಂಗಳಲ್ಲಿ ಮಳೆಯ ಕೊರತೆ ಎದ್ದು ಕಾಣುತ್ತಿದ್ದು, ಬಿಸಿಲಿನ ಪ್ರಮಾಣ ಏರಿಕೆಯಾಗಿದೆ. ಮತ್ತೊಂದೆಡೆ ಇಂದು ಕರಾವಳಿ ಜಿಲ್ಲೆಗಳಲ್ಲಿ ಸೇರಿದಂತೆ ಹಲವು ಕೆಲವೇ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಮುಂಗಾರಿನ ಆರಂಭದ ಸಮಯದಲ್ಲಿ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಅಬ್ಬರದ ಮಳೆಯಾಗಿತ್ತು. ಆದರೆ ಇದೀಗ ಆಗಸ್ಟ್ ತಿಂಗಳಿನಲ್ಲಿ ಉಡುಪಿ, ಮಂಗಳೂರು, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆ ಕೊರತೆ ಎದ್ದು ಕಾಣುತ್ತಿದ್ದು, ನದಿ ನೀರು ಬತ್ತಿ ಹೋಗುವ ಹಂತವನ್ನು ತಲುಪಿವೆ. ಈ ಭಾಗದಲ್ಲಿ ಕಳೆದ ಒಂದು ವಾರದಲ್ಲಿ ಕೇವಲ 85 ಮಿ.ಮೀ. ಮಳೆ ಸುರಿದತ್ತು. ಆದರೆ ಇದೀಗ ಮಳೆಯೇ ಇಲ್ಲದಂತಾಗಿದೆ.

ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಹಲವೆಡೆ ಶುಕ್ರವಾರ (ಆಗಸ್ಟ್ 11) ದಿನವಿಡೀ ಬಿಸಿಲಿನ ವಾತಾವರಣ ಮುಂದುವರೆದಿತ್ತು. ಅಲ್ಲದೆ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ದಾಟಿತ್ತು. ಇತ್ತೀಚಿನ ದಿನಗಳಲ್ಲಿ ಕರಾವಳಿಯಲ್ಲಿ ಮಳೆ ಕಡಿಮೆಯಾಗಿದ್ದು, ತಾಪಮಾನ ಏರುತ್ತಲೇ ಇದೆ.
ಕರಾವಳಿ ಜಿಲ್ಲೆಗಳಲ್ಲಿ ಇಂದು (ಶನಿವಾರ) ಸಾಧಾರಣ ಮಳೆ ಹಾಗೂ ಹಲವೆಡೆ ಮಾತ್ರ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಮಲೆನಾಡು, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳ ಕೆಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ರವಾನಿಸಿದೆ.
ಮಳೆ ಕಡಿಮೆಯಾದ ಹಿನ್ನೆಲೆ ನದಿಯಲ್ಲಿ ಈಗಲೇ ಮರಳು ಕಾಣಸಿಗುವ ಲಕ್ಷಣಗಳು ಎದ್ದು ಕಾಣುತ್ತಿವೆ. ಎಲ್ಲ ಹವಾಮಾನ ಇಲಾಖೆ ಹೇಳಿದಂತೆ ಆದರೆ ಈ ತಿಂಗಳಾಂತ್ಯದಲ್ಲಿ ಭಾರೀ ಮಳೆ ಘಟ್ಟ ಪ್ರದೇಶದಲ್ಲಿ ಆಗಬಹುದು. ಹಾಗೇನಾದರೂ ಆದರೆ ಮತ್ತೆ ನೀರಿನ ಸೆಲೆ ಕಾಣಿಸಿಕೊಳ್ಳಬಹುದು. ಇಲ್ಲವಾದರೆ ಸಮಸ್ಯೆ ಎದುರಿಸುವುದಂತೂ ಗ್ಯಾರಂಟಿ.
ಕರಾವಳಿಯಲ್ಲಿ ಮುಂಗಾರು ದಿನದಿಂದ ದಿನಕ್ಕೆ ಕ್ಷೀಣವಾಗುತ್ತಿದ್ದು, ವಾರದಲ್ಲಿ ಕೇವಲ 85 ಮಿಲಿ ಮೀಟರ್ ಮಾತ್ರ ಮಳೆ ಬಿದ್ದಿದೆ. 217.9 ಮಿಲಿ ಮೀಟರ್ ಸುರಿಯಬೇಕಾಗಿರುವ ಮಳೆ ಅದರ ಅರ್ಧದಷ್ಟು ಇಲ್ಲದಿರುವುದು ಇದೀಗ ಆತಂಕಕ್ಕೆ ಕಾರಣವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಶೇ.61ರಷ್ಟು ಮಳೆ ಕೊರತೆಯಿದೆ ಎಂದು ತಿಳಿದುಬಂದಿದೆ.
ಈ ಬಾರಿ ರಾಜ್ಯದ ಕರಾವಳಿ ಭಾಗದಲ್ಲಿ ಜೂನ್ 8ರಂದು ಮುಂಗಾರು ಆಗಮಿಸಿತ್ತು. ಆರಂಭದ ಒಂದೆರಡು ದಿನ ಭಾರೀ ಸದ್ದು ಮಾಡಿ, ನಂತರ ಸಂಪೂರ್ಣವಾಗಿ ನಿಂತು ಹೋಗಿದೆ. ಇದರಿಂದ ಬಿಸಿಲಿನ ಧಗೆ ಮತ್ತಷ್ಟು ಬೇಸಿಗೆಯಂತೆ ಏರುತ್ತಲೇ ಇದೆ. ಅಲ್ಲದೆ ಎರಡು ಬಾರಿ ದಕ್ಷಿಣ ಕನ್ನಡದ ಜೊತೆಗೆ ಕರಾವಳಿ ಜಿಲ್ಲೆಗಳಲ್ಲಿ ಸತತ ನಾಲ್ಕು ದಿನಗಳ ಕಾಲ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡುವಷ್ಟು ಮಳೆ ಸುರಿದಿತ್ತು. ಆದರೆ ಇದೀಗ ಮಳೆ ಕ್ಷೀಣಿಸುತ್ತಲೇ ಇದ್ದು, ಮತ್ತೊಂದೆಡೆ ತಾಪಮಾನ ಏರಿಕೆಯಾಗತೊಡಗಿದೆ.
ಶುಕ್ರವಾರ (ಆಗಸ್ಟ್ 12) ರಾಜ್ಯದಲ್ಲಿ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲಿನ ವಾತಾವರಣ ಮುಂದುವರೆದಿತ್ತು. ಅದರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ಮೋಡ ಕವಿದ ವಾತಾವರಣವಿದ್ದರೂ ಮಳೆರಾಯ ಮಾತ್ರ ಕರುಣೆ ತೋರಲೇ ಇಲ್ಲ. ಆದರೆ ಇಂದು ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದ್ದು, ಕೆಲವೆಡೆ ಒಣಹವೆ ಮುಂದುವರಿಯಲಿದೆ ಎಂದು ತಿಳಿಸಿದೆ.
ಒಟ್ಟಿನಲ್ಲಿ ಆಗಸ್ಟ್ ತಿಂಗಳ ಅಂತ್ಯದಲ್ಲಿ ಮಳೆರಾಯ ಕೃಪೆ ತೋರದಿದ್ದರೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬರದ ಛಾಯೆ ಆರವರಿಸುವುದರಲ್ಲಿ ಯಾವುದೇ ಸಂದೇಹವಿಲ್ಲ. ಈಗಾಗಲೇ ಬಹುತೇಕ ಜಲಾಶಯಗಳ ನೀರಿನ ಮಟ್ಟವೂ ಕುಸಿಯುತ್ತಿದ್ದು, ಇದರಿಂದ ಅನ್ನದಾತ ಮತ್ತೇ ಆತಂಕಕ್ಕೆ ಒಳಗಾಗಿದ್ದಾರೆ.












Click it and Unblock the Notifications