Karnataka Rain : ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಅಬ್ಬರ: ಇನ್ನೂ ನಾಲ್ಕು ದಿನ ಭಾರಿ ಮಳೆ ಸಾಧ್ಯತೆ
ಅತಿಯಾದ ತಾಪಮಾನದಿಂದ ಕಂಗೆಟ್ಟಿದ್ದ ರಾಜ್ಯಕ್ಕೆ ಭಾನುವಾರ ಸುರಿದ ಮಳೆ ತಂಪೆರದಿದೆ. ರಾಜ್ಯಾದ್ಯಂದ ಹಲವು ಜಿಲ್ಲೆಗಳಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಬೆಂಗಳೂರು, ತುಮಕೂರು, ಹಾಸನ, ಮೈಸೂರು, ಚಿಕ್ಕಮಗಳೂರು, ಕೋಲಾರ, ಚಿಕ್ಕಬಳ್ಳಾಪುರ, ಹುಬ್ಬಳ್ಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿದಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆಯಾಗಿದೆ. ಬೆಂಗಳೂರು ನಗರದಲ್ಲಿ ಭಾರಿ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿತ್ತು. ಕೆಆರ್ ಸರ್ಕಲ್ ಸಮೀಪದ ಅಂಡರ್ ಪಾಸ್‌ನಲ್ಲಿ ನೀರು ತುಂಬಿಕೊಂಡ ಕಾರಣ, ಕಾರು ಮುಳುಗಿ ಯುವತಿಯೊಬ್ಬರು ಮೃತಪಟ್ಟಿದ್ದಾರೆ. ಇನ್ನೂ ಹಲವು ಕಡೆಗಳಲ್ಲಿ ವಾಹನಗಳ ಮರ ಬಿದ್ದಿದ್ದು, ವಾಹನಗಳು ಜಖಂ ಆಗಿವೆ.

ಚಿಕ್ಕಮಗಳೂರಿನಲ್ಲಿ ವ್ಯಕ್ತಿ ಸಾವು
ಇನ್ನು ಚಿಕ್ಕಮಗಳೂರಿನಲ್ಲಿ ಮಳೆಯ ಕಾರಣ ಮರಬಿದ್ದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಮೂಡಿಗೆರೆ ತಾಲೂಕಿನ ಚಿಕ್ಕಹಳ್ಳ ಬಳಿ ಘಟನೆ ನಡೆದಿದ್ದು, ವೇಣುಗೋಪಾಲ್ (45) ಮೃತ ದುರ್ದೈವಿಯಾಗಿದ್ದಾರೆ. ಚಿಕ್ಕಹಳ್ಳ ಗ್ರಾಮದಲ್ಲಿ ಹೋಂ ಸ್ಟೇ ನಡೆಸುತ್ತಿದ್ದ ವೇಣುಗೋಪಾಲ್, ಹೋಂ ಸ್ಟೇಯಿಂದ ಸ್ವಲ್ಪ ದೂರದಲ್ಲೇ ಮರ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್, ಬಣಕಲ್ ಬಾಳೂರು, ಹೊರಟ್ಟಿ, ಸಬ್ಬೇನಹಳ್ಳಿ ಸೇರಿದಂತೆ ಸುತ್ತಮುತ್ತ ಆಲಿಕಲ್ಲು ಸಮೇತ ಭಾರೀ ಮಳೆಯಾಗಿದೆ. ಭಾರಿ ಮಳೆ-ಗಾಳಿಯಿಂದ ಕೊಟ್ಟಿಗೆಹಾರ ಹಾಗೂ ಚಾರ್ಮಾಡಿ ಘಾಟಿಯಲ್ಲಿ ಅಲ್ಲಲ್ಲಿ ವಾಹನದಟ್ಟಣೆ ಕೂಡ ಉಂಟಾಗಿತ್ತು.

ಮೈಸೂರು, ಹಾಸನ ಜಿಲ್ಲೆಯಲ್ಲಿ ಕೂಡ ವ್ಯಾಪಕ ಮಳೆ
ಇನ್ನು ಹಾಸನ ಜಿಲ್ಲೆಯ ವಿವಿಧೆಡೆ ಕೂಡ ಧಾರಾಕಾರ ಮಳೆ ಸುರಿದಿದೆ. ಹಾಸನ, ಅರಕಲಗೂಡು ತಾಲೂಕುಗಳಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದ್ದು. ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿದೆ. ಅರಕಲಗೂಡು ತಾಲ್ಲೂಕಿನ, ಕರ್ಕಿಕೊಪ್ಪಲು ಗ್ರಾಮದಲ್ಲಿ ಹೊಗೆಸೊಪ್ಪು ಬೆಳೆ ನೆಲಕಚ್ಚಿದ್ದು, ರೈತರು ಕಂಗಾಲಾಗಿದ್ದಾರೆ. ಮೈಸೂರು, ಚಾಮರಾಜನಾಗರ, ರಾಮನಗರ, ಕೋಲಾರ, ತುಮಕೂರು ಜಿಲ್ಲೆಯಲ್ಲಿ ಕೂಡ ವ್ಯಾಪಕ ಮಳೆಯಾಗಿದೆ.
ಇನ್ನೂ ನಾಲ್ಕು ದಿನ ವ್ಯಾಪಕ ಮಳೆ
ಇನ್ನೂ ನಾಲ್ಕು ದಿನಗಳ ಕಾಲ ರಾಜ್ಯದ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿಲಿದ್ದ, ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಕೂಡ ಚದುರಿದ ಮಳೆಯಾಗಲಿದೆ ಎಂದು ಹೇಳಲಾಗಿದೆ. ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಕೂಡ ಬಿರುಗಾಳಿ ಸಹಿತ ವ್ಯಾಪಕ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications