Karnataka Weather: ಊಫ್.... ಬಿಸಿಲು...! ಸಿಲಿಕಾನ್ ಸಿಟಿಗೆ ಸಿಹಿ ಸುದ್ದಿ ಕೊಟ್ಟ ಮಳೆರಾಯ
ಬೆಂಗಳೂರು ಫೆಬ್ರವರಿ 27: ಕರ್ನಾಟಕದ ಹಲವು ಭಾಗಗಳಲ್ಲಿ ದಿನ ಕಳೆದಂತೆ ಬಿಸಿಲಿನ ಬೇಗೆ ಹೆಚ್ಚಾಗುತ್ತಲೇ ಇದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ತಾಪಮಾನ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಭವಿಷ್ಯ ನುಡಿದಿದೆ. ರಾಜ್ಯದಲ್ಲಿ 2ರಿಂದ 3 ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನ ಹೆಚ್ಚಿದೆ. ಇನ್ನೂ ರಾಜ್ಯದ ಹಲವು ಭಾಗಗಳಲ್ಲಿ ಒಣಹವೆ ಮುಂದುವರೆದಿದೆ.
ಇಂದಿನಿಂದ ರಾಜ್ಯದ ಕೆಲ ಜಿಲ್ಲೆಗಳಲ್ಲಿ ತಾಪಮಾನ ಏರಿಕೆಯಾಗಿದೆ ಎಂದು ಐಎಂಡಿ ತಿಳಿಸಿದೆ. ಬಿಸಿಲಿನ ಬಿಸಿ ಹೈರಾಣಾದ ಜನರಿಗೆ ಹವಾಮಾನ ಇಲಾಖೆ ಕೊಂಚ ರಿಲೀಫ್ ನೀಡಿದೆ. ಹೌದು.. ಈ ನಡುವೆ ಮಾರ್ಚ್ ಮೊದಲ ವಾರದಲ್ಲಿ ಮಳೆ ಬರುತ್ತದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.

ಮುಂದಿನ ತಿಂಗಳು ಅಂದರೆ ಮಾರ್ಚ್‌ನಲ್ಲಿ ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆ, ದಾವಣಗೆರೆ, ಬೆಂಗಳೂರು, ಕೊಡಗು, ಮೈಸೂರು ಸೇರದಂತೆ ಕೆಲ ಭಾಗಗಳಲ್ಲಿ ಲಘು ಮಳೆಯಾಗುವ ಸಾಧ್ಯತೆ ಇದೆ. ಇದು ರಾಜ್ಯದಲ್ಲಿ ಈ ವರ್ಷದ ಮೊದಲ ಬೇಸಿಗೆಯ ಮಳೆಯಾಗಲಿದ್ದು ಬಿಸಿಲಿನ ಬಿಸಿಯಿಂದ ಕೊಮಚ ಮುಕ್ತಿ ನೀಡಲಿದೆ ಎಂಬ ನಿರೀಕ್ಷೆಯಲ್ಲಿ ಜನರಿದ್ದಾರೆ.
ಇನ್ನೂ ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ತುಮಕೂರು ಹಾಗೂ ಶಿವಮೊಗ್ಗದಲ್ಲೂ ಮುಂಬರುವ ತಿಂಗಳ ಮೊದಲ ವಾರದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಸದ್ಯ ಬೆಂಗಳೂರು ಸೇರಿ ರಾಜ್ಯದಲ್ಲಿ ಬಿಸಿಲು ಹೆಚ್ಚಾಗುತ್ತಲೇ ಇದೆ. ಬೆಂಗಳೂರಲ್ಲಿ ಇಂದು 31 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕಳೆದ ಕೆಲವು ದಿನಗಳಿಂದ ಸಿಲಿಕಾನ್ ಸಿಟಿಯಲ್ಲಿ ಬಿಸಿಲಿನ ಪ್ರಮಾಣ ತೀವ್ರಗೊಳ್ಳುತ್ತಿದೆ. ಇದರಿಂದಾಗಿ ರಾಜ್ಯ ರಾಜಧಾನಿಯ ನಿವಾಸಿಗಳು ಹೈರಾಣಾಗುತ್ತಿದ್ದಾರೆ. ಚಳಿಗಾಲ ಬೇಗ ಮುಗಿದು ಬೇಸಿಗೆಯ ಬಿಸಿಲಿನ ಝಳದ ಕಾವು ನಗರದಲ್ಲಿ ಹೆಚ್ಚಾಗತೊಡಗಿದೆ. ಫೆಬ್ರವರಿ 23ರಂದು ಬೆಂಗಳೂರು ನಗರದಲ್ಲಿ 2023ರ ಫೆಬ್ರವರಿಯ ಅತೀ ಹೆಚ್ಚು ತಾಪಮಾನ ದಾಖಲಾಗಿದೆ. ಫೆಬ್ರವರಿ 23ರಂದು 34.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಈ ತಿಂಗಳಲ್ಲಿ ಗರಿಷ್ಠ ತಾಪಮಾನ ದಾಖಲಾಗಿದೆ.
ಈ ವರ್ಷ ಫೆಬ್ರವರಿ 9ರಂದು ಕೂಡ ತಾಪಮಾನ 34.2 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿತ್ತು. ಆದರೆ ಫೆಬ್ರವರಿ 17, 2005 ರಂದು ಬೆಂಗಳೂರಿನಲ್ಲಿ ಸಾರ್ವಕಾಲಿಕ ಗರಿಷ್ಠ ತಾಪಮಾನ (35.9 ಡಿಗ್ರಿ) ದಾಖಲಾಗಿದೆ. ಬೆಂಗಳೂರು ಸೇರ ರಾಜ್ಯದಲ್ಲಿ ತಾಪಮಾನ ಹೆಚ್ಚಾಗುತ್ತಲೇ ಇದೆ. ಕರ್ನಾಟಕದಲ್ಲಿ ತಾಪಮಾನವು ವಾಡಿಕೆಗಿಂತ ಎರಡರಿಂದ ಮೂರು ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಿದೆ.












Click it and Unblock the Notifications